ಅಂಪೈರ್ ತಪ್ಪು.. ಪಡಿಕ್ಕಲ್ ದ್ವಿಶತಕ ಮಿಸ್ ಒತ್ತಡಕ್ಕೆ ದುಬಾರಿಯಾದ್ರಾ ಭುವಿ?
ಕೃಷ್ಣನ ಧ್ಯಾನದಲ್ಲಿ ಮೈಮರೆತ ವಿರುಷ್ಕಾ

ಅಂಪೈರ್ ತಪ್ಪು.. ಪಡಿಕ್ಕಲ್ ದ್ವಿಶತಕ ಮಿಸ್  ಒತ್ತಡಕ್ಕೆ ದುಬಾರಿಯಾದ್ರಾ ಭುವಿ?ಕೃಷ್ಣನ ಧ್ಯಾನದಲ್ಲಿ ಮೈಮರೆತ ವಿರುಷ್ಕಾ

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ನ್ಯೂಜಿಲೆಂಡ್ ಎ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಕರ್ನಾಟಕದ ಬ್ಯಾಟರ್ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 248 ಎಸೆತಗಳಲ್ಲಿ 199 ರನ್ ಗಳಿಸಿದ ಅವರು, ಕೇವಲ ಒಂದು ರನ್‌ನಿಂದ ದ್ವಿಶತಕ ತಪ್ಪಿಸಿಕೊಂಡರು. ಈ ಇನ್ನಿಂಗ್ಸ್‌ನಲ್ಲಿ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಅಂಪೈರ್‌ ತಪ್ಪಿನಿಂದ ಪಡಿಕ್ಕಲ್ ದ್ವಿಶತ ಮಿಸ್ ಆಗಿದೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ.  199 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ದೇವದತ್ ಪಡಿಕ್ಕಲ್ ದ್ವಿಶತಕದ ಸಂಭ್ರಮಕ್ಕೆ ಸಜ್ಜಾಗುತ್ತಿದ್ದರು. ಈ ವೇಳೆ ನ್ಯೂಝಿಲೆಂಡ್ ವೇಗಿ ಝಾಕ್ ಗಿಬ್ಸನ್ ಎಸೆದ ಲೆಗ್ ಸೈಡ್ ಎಸೆತವನ್ನು ಪಡಿಕ್ಕಲ್ ಹೊಡಿಯೋಕೆ ಯತ್ನಿಸಿದರು. ಚೆಂಡು ವಿಕೆಟ್ ಕೀಪರ್ ಕೈ ಸೇರುತ್ತಿದ್ದಂತೆ ಕಿವೀಸ್ ಆಟಗಾರರು ಮನವಿ ಮಾಡಿದರು. ತಕ್ಷಣವೇ ಅಂಪೈರ್ ಔಟ್ ಎಂದು ಬೆರಳು ಎತ್ತಿದ್ದಾರೆ. ಚೆಂಡು ಬ್ಯಾಟ್‌ಗೆ ತಾಗಿರಲೇ ಇಲ್ಲ ಎಂಬುದು ರಿಪ್ಲೇ ವೇಳೆ ಸ್ಪಷ್ಟವಾಗಿ ಕಂಡಿದೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಂಪೈರ್ ತೀರ್ಪಿನ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: INDಗೆ ಸರಣಿ.. NZಗೆ ಜೀವದಾನ – 3ನೇ ಮ್ಯಾಚ್ ಗೆಲುವು ಯಾರಿಗೆ?

ನ್ಯೂಜಿಲೆಂಡ್ ಎ ವಿರುದ್ಧದ ಅನಧಿಕೃತ ಟೆಸ್ಟ್‌ನಲ್ಲಿ ಸಾಯಿ ಸುದರ್ಶನ್ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ದೇವದತ್ ಪಡಿಕ್ಕಲ್ ಜೊತೆ ಮಹತ್ವದ ಜೊತೆಯಾಟವಾಡಿದ ಸುದರ್ಶನ್ 92 ರನ್ ಗಳಿಸಿದರು. ಆರಂಭಿಕ ವಿಕೆಟ್‌ಗಳು ಬೇಗನೆ ಉರುಳಿದ ಸಂದರ್ಭದಲ್ಲಿ ಈ ಜೊತೆಯಾಟ ಭಾರತ ಎ ತಂಡಕ್ಕೆ ಆಸರೆಯಾಯಿತು. ಮುಂಬರುವ ಟೆಸ್ಟ್ ಸರಣಿಗಳಲ್ಲಿ ಅವಕಾಶ ಪಡೆಯಲು ಯುವ ಬ್ಯಾಟರ್‌ಗಳಿಗೆ  ಇದು ಹೆಲ್ಫ್ ಆಗಲಿದೆ.

ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯಕ್ಕೂ ಇಶಾನ್ ಕಿಶನ್ ಅಲಭ್ಯರಾಗಿದ್ದಾರೆ. ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. ಈ ಬೆಳವಣಿಗೆಯಿಂದ 15 ವರ್ಷದ ವೈಭವ್ ಸೂರ್ಯವಂಶಿಗೆ ಮತ್ತೊಮ್ಮೆ ಅವಕಾಶ ಸಿಗುವ ನಿರೀಕ್ಷೆ ಹೆಚ್ಚಾಗಿದೆ. ಎರಡನೇ ಪಂದ್ಯದಲ್ಲಿ ಗಮನ ಸೆಳೆದಿದ್ದ ವೈಭವ್, ಮೂರನೇ ಪಂದ್ಯದಲ್ಲಿ ತನ್ನ ಬ್ಯಾಟಿಂಗ್ ಸಾಮರ್ಥ್ಯ ಸಾಬೀತುಪಡಿಸುತ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ನಾಲ್ಕು ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಮರಳಿರುವ ವೇಗಿ ಭುವನೇಶ್ವರ್ ಕುಮಾರ್ ಮೊದಲ ಎರಡು ಟಿ20 ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಈ ಕುರಿತು ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್, ಭುವಿ ಯಾವುದೇ ಒತ್ತಡಕ್ಕೆ ಒಳಗಾಗದೆ ಸಹಜವಾಗಿ ಬೌಲಿಂಗ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಐಪಿಎಲ್‌ನಲ್ಲಿ ಮಿಂಚಿದ್ದ ಭುವಿ, ಮುಂದಿನ ಪಂದ್ಯಗಳಲ್ಲಿ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಕಮ್‌ಬ್ಯಾಕ್ ಮಾಡುತ್ತಾರಾ ಅನ್ನೋದ್ದನ್ನ ಕಾದುನೋಡಬೇಕು.

ಭಾರತ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ತಂಡಕ್ಕೆ ಆಟಗಾರರ ಫಿಟ್‌ನೆಸ್ ಸಮಸ್ಯೆ ಎದುರಾಗಿದೆ. ವೇಗಿ ಮ್ಯಾಟ್ ಹೆನ್ರಿ ಸೇರಿದಂತೆ ಕೆಲವು ವೇಗದ ಬೌಲರ್‌ಗಳಿಗೆ ವಿಶ್ರಾಂತಿ ನೀಡುವ ನಿರ್ಧಾರ ತಂಡದ ಬೌಲಿಂಗ್ ವಿಭಾಗದ ಮೇಲೆ ಪರಿಣಾಮ ಬೀರಬಹುದು. ಈಗಾಗಲೇ ಸರಣಿಯಲ್ಲಿ ಹಿನ್ನಡೆ ಅನುಭವಿಸಿರುವ ಕಿವೀಸ್ ಪಡೆ, ಉಳಿದ ಪಂದ್ಯಗಳಲ್ಲಿ ಪುಟಿದೇಳಲು ಹೊಸ ರಣತಂತ್ರ ರೂಪಿಸಬೇಕಿದೆ.

ಜಿಂಬಾಬ್ವೆ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಭರ್ಜರಿ ಪ್ರದರ್ಶನ ನೀಡಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್ 126 ರನ್ ಗಳಿಸಿದರೆ, ದೀಪ್ತಿ ಶರ್ಮಾ ಅಜೇಯ 106 ರನ್ ಸಿಡಿಸಿದರು. ಇಬ್ಬರ ಶತಕದ ನೆರವಿನಿಂದ ಭಾರತ 121 ರನ್‌ಗಳ ಭರ್ಜರಿ ಜಯ ದಾಖಲಿಸಿ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು .

ಟೀಮ್ ಇಂಡಿಯಾ ಸ್ಟಾರ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿ ಮುಂಬೈನಲ್ಲಿ ನಡೆದ ಕೀರ್ತನೆ ಕಾರ್ಯಕ್ರಮದಲ್ಲಿ ಭಾಗಿಯಾದರು. ಪ್ರಸಿದ್ಧ ಅಮೇರಿಕದ ಗಾಯಕ ಕೃಷ್ಣ ದಾಸ್ ಅವರು ಕೀರ್ತನೆ ಮಾಡಿದ್ದಾರೆ. ರವಿವಾರ ನಡೆದ ಈ ಕಾರ್ಯಕ್ರಮದಲ್ಲಿ ಕೊಹ್ಲಿ ಮತ್ತು ಅನುಷ್ಕಾ ಆಧ್ಯಾತ್ಮಿಕ ವಾತಾವರಣದಲ್ಲಿ ಸಂಪೂರ್ಣವಾಗಿ ತಲ್ಲೀನರಾಗಿದ್ದರು. ತ ಈ ಜೋಡಿಯ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಐಪಿಎಲ್ 2027ರ ನಾಯಕತ್ವದ ಚರ್ಚೆ ಈಗಿನಿಂದಲೇ ಆರಂಭವಾಗಿದೆ. ಮಾಜಿ ಭಾರತೀಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ ಸೂಕ್ತ ನಾಯಕನಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೀರನ್ ಪೊಲಾರ್ಡ್ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ತಂಡದ ನಾಯಕತ್ವದ ಬಗ್ಗೆ ಚರ್ಚೆ ಮತ್ತಷ್ಟು ಹೆಚ್ಚಾಗಿದೆ. ಆದರೆ ರೋಹಿತ್‌ಗೆ ನಾಯಕತ್ವ ನೀಡುವ ಕುರಿತು ಮುಂಬೈ ಇಂಡಿಯನ್ಸ್ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ.

ಲಾಹೋರ್​​ನ ಗದ್ದಾಫಿ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ತ್ರಿಕೋನ ಸರಣಿಯ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ರಣರೋಚಕ ಜಯ ಸಾಧಿಸಿದೆ. ಇಂಗ್ಲೆಂಡ್ ತಂಡವು 46.4 ಓವರ್​​ಗಳಲ್ಲಿ 241 ರನ್​ ಗಳಿಸಿ ಆಲೌಟ್ ಆಯಿತು. 242 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ್ ತಂಡವು ಕೇವಲ 154 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕ್ರೀಸ್ ಕಚ್ಚಿ ನಿಂತ ಶಾದಾಬ್ ಖಾನ್ ಏಕಾಂಗಿ ಹೋರಾಟ ನಡೆಸಿದರು.  ಅಂತಿಮವಾಗಿ  ಪಾಕಿಸ್ತಾನ್ ತಂಡವು 47.1 ಓವರ್‌ಗಳಲ್ಲಿ 243 ರನ್ ಗಳಿಸಿ, 1 ವಿಕೆಟ್‌ನ ರೋಚಕ ಜಯ ಸಾಧಿಸಿದೆ.

 

Kishor KV

Leave a Reply

Your email address will not be published. Required fields are marked *