ನನ್ನ ಬಳಿಯೂ ಹೆಲ್ಮೆಟ್ ಇದೆ.. – ಹೆಲ್ಮೆಟ್ ಧರಿಸಿ ಮಾಲೀಕನೊಂದಿಗೆ ಬೈಕ್ ರೈಡ್ ಮಾಡಿದ ಶ್ವಾನ!

ದ್ವಿಚಕ್ರ ವಾಹನ ಚಾಲನೆ ವೇಳೆ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಇದು ಅಪಘಾತದಿಂದ ಸವಾರನ ರಕ್ಷಣೆ ಮಾಡುವ ಸಾಧನವೂ ಆಗಿದೆ. ಆದರೆ ಸಂಚಾರಿ ನಿಯಮವನ್ನು ಗಾಳಿಗೆ ತೂರುವವರೇ ಹೆಚ್ಚು. ಆದ್ರೆ ಇಲ್ಲೊಂದು ಕಡೆ ಶ್ವಾನವೊಂದು ಹೆಲ್ಮೆಟ್ ಧರಿಸಿ ಬೈಕ್ ರೈಡ್ ಮಾಡಿದೆ. ಈ ಕ್ಯೂಟ್ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇದನ್ನೂ ಓದಿ: ನಿದ್ದೆ ಮಾಡುವಾಗ ಕೈ ಮರಗಟ್ಟುತ್ತಿದೆಯಾ? – ಎಚ್ಚರ.. ಸಲ್ಪ ಎಚ್ಚರ ತಪ್ಪಿದ್ರು ಅಪಾಯ ಗ್ಯಾರೆಂಟಿ!
ಹೆಲ್ಮೆಟ್ ಧರಿಸೋದು ಅನೇಕರಿಗೆ ಕಿರಿಕಿರಿ. ಟ್ರಾಫಿಕ್ ಪೊಲೀಸರ ಕಣ್ತಪ್ಪಿಸಿ, ಅನೇಕರು ಹೆಲ್ಮೆಟ್ ಧರಿಸದೇ ಬೈಕ್ ರೈಡ್ ಮಾಡ್ತಾರೆ. ಆದ್ರೀಗ ಇಲ್ಲೊಂದು ನಾಯಿ ಬೈಕ್ ರೈಡ್ ಹೋಗಬೇಕು ಎಂದು ಮಾಲೀಕನ ಬಳಿ ಆಸೆ ವ್ಯಕ್ತಪಡಿಸಿದೆ. ಕೂಡಲೇ ಮಾಲೀಕ ಹೆಲ್ಮೆಟ್ ಧರಿಸುವಂತೆ ಹೇಳಿದ್ದು, ಹೆಲ್ಮೆಟ್ನ ಬಾಯಿಯಲ್ಲಿ ಕಚ್ಚಿಕೊಂಡು ಬಂದಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮನ ಗೆದ್ದಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ತಮ್ಮ ಬೈಕ್ ಮೇಲೆ ಕುಳಿತಿರುವುದನ್ನ ಕಾಣಬಹುದು. ಈ ವೇಳೆ ಅವರ ಸಾಕುನಾಯಿ ಕೂಡ ಬೈಕ್ ರೈಡ್ಗೆ ಹೋಗಬೇಕು ಎಂಬ ಆಸೆಯಿಂದ ಮಾಲೀಕನ ಬಳಿ ಬರುತ್ತದೆ. ತನ್ನನ್ನೂ ಬೈಕ್ನಲ್ಲಿ ಕರೆದುಕೊಂಡು ಹೋಗುವಂತೆ ಕೇಳುವ ರೀತಿಯಲ್ಲಿ ಶ್ವಾನ ವರ್ತಿಸುತ್ತದೆ. ಪ್ರೀತಿಯ ಸಾಕುಪ್ರಾಣಿಯ ಈ ಮುದ್ದಾದ ವರ್ತನೆ ನೋಡುಗರ ಮುಖದಲ್ಲಿ ನಗು ಮೂಡಿಸುತ್ತದೆ. ಆದರೆ ಮಾಲೀಕ ತನ್ನ ಮುದ್ದಿನ ಶ್ವಾನವನ್ನ ಬೈಕ್ನಲ್ಲಿ ಕರೆದೊಯ್ಯಲು ಒಂದು ಷರತ್ತು ವಿಧಿಸುತ್ತಾನೆ. ಅದೇನೆಂದರೆ ಬೈಕ್ ರೈಡ್ಗೆ ಬರುವ ಮೊದಲು ಹೆಲ್ಮೆಟ್ ಧರಿಸಬೇಕು ಎಂಬುದು. ಆದರೆ ಆರಂಭದಲ್ಲಿ ಶ್ವಾನ ಆ ಹೆಲ್ಮೆಟ್ ಅನ್ನ ಕೆಳಕ್ಕೆ ಎಸೆಯುತ್ತದೆ. ತನಗೆ ಹೆಲ್ಮೆಟ್ ಬೇಡ ಎಂಬಂತೆ ವರ್ತಿಸುವ ಶ್ವಾನವನ್ನ ಕಂಡು ಮಾಲೀಕ ಕೂಡ ತನ್ನದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾನೆ. ಹೆಲ್ಮೆಟ್ ಧರಿಸಿದರೆ ಮಾತ್ರ ಬೈಕ್ ರೈಡ್ಗೆ ಕರೆದುಕೊಂಡು ಹೋಗುವುದಾಗಿ ಮಾಲೀಕ ಸ್ಪಷ್ಟಪಡಿಸುತ್ತಾನೆ. ಅಷ್ಟೇ ಅಲ್ಲ ಹೆಲ್ಮೆಟ್ ಇಲ್ಲದೆ ಬೈಕ್ ಹತ್ತಲು ಅವಕಾಶವಿಲ್ಲ ಎಂಬ ಸಂದೇಶವನ್ನೂ ನೀಡುತ್ತಾನೆ. ಈ ಮಾತು ಕೇಳಿದ ಬಳಿಕ ಶ್ವಾನದ ವರ್ತನೆಯಲ್ಲಿ ಬದಲಾವಣೆ ಕಾಣಿಸುತ್ತದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಗಮನ ಸೆಳೆದಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಶ್ವಾನದ ಬುದ್ಧಿವಂತಿಕೆ, ಮಾಲೀಕನ ಕಾಳಜಿ ಮತ್ತು ಅವರಿಬ್ಬರ ನಡುವಿನ ಆತ್ಮೀಯ ಸಂಬಂಧಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಾಕುಪ್ರಾಣಿಗಳ ಮೇಲಿನ ಪ್ರೀತಿ ಎಂದರೆ ಅವುಗಳಿಗೆ ಆಹಾರ ನೀಡುವುದು, ಆಟವಾಡಿಸುವುದು ಮಾತ್ರವಲ್ಲ; ಅವುಗಳ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯ ಎಂಬುದನ್ನ ಈ ದೃಶ್ಯ ನೆನಪಿಸುತ್ತದೆ. ಶ್ವಾನಕ್ಕಾಗಿ ಪ್ರತ್ಯೇಕ ಹೆಲ್ಮೆಟ್ ವ್ಯವಸ್ಥೆ ಮಾಡಿರುವ ಮಾಲೀಕನ ನಡೆ ಕೂಡ ಹಲವರ ಗಮನ ಸೆಳೆದಿದೆ.

ನೋಡಿರಿ

