ನಿದ್ದೆ ಮಾಡುವಾಗ ಕೈ ಮರಗಟ್ಟುತ್ತಿದೆಯಾ? – ಎಚ್ಚರ.. ಸಲ್ಪ ಎಚ್ಚರ ತಪ್ಪಿದ್ರು ಅಪಾಯ ಗ್ಯಾರೆಂಟಿ!

ನಿದ್ದೆ ಮಾಡುವಾಗ ಕೈ ಮರಗಟ್ಟುತ್ತಿದೆಯಾ? – ಎಚ್ಚರ.. ಸಲ್ಪ ಎಚ್ಚರ ತಪ್ಪಿದ್ರು ಅಪಾಯ ಗ್ಯಾರೆಂಟಿ!

ಜನರ ಜೀವನ ಶೈಲಿ ಬದಲಾಗಿದೆ. ಸಣ್ಣ ವಯಸ್ಸಿಗೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ತಿದೆ. ಇತ್ತೀಚೆಗೆ ಅನೇಕರಿಗೆ ರಾತ್ರಿ ನಿದ್ರಿಸುತ್ತಿರುವಾಗ ಏಕಾಏಕಿ ಕೈ ಮರಗಟ್ಟುವುದು, ಬೆರಳುಗಳಲ್ಲಿ ಸೂಜಿ ಚುಚ್ಚಿದಂತೆ ಅನುಭವವಾಗುವುದು ಅಥವಾ ಜುಮ್ಮೆನಿಸುವಿಕೆ ಕಾಣಿಸಿಕೊಳ್ಳುವುದು ಸಾಮನ್ಯವಾಗಿದೆ. ಕೆಲವರು ಕೈಯನ್ನ ಅಲುಗಾಡಿಸಿ ಅಥವಾ ಮಲಗುವ ಭಂಗಿಯನ್ನ ಬದಲಿಸಿಕೊಂಡು ಮತ್ತೆ ನಿದ್ರಿಸುತ್ತಾರೆ. ಆದರೆ ಇದೇ ಸಮಸ್ಯೆ ಪದೇಪದೇ ಕಾಣಿಸಿಕೊಂಡರೆ ಎಚ್ಚರ. ಇದನ್ನ ನಿರ್ಲಕ್ಷಿಸಿದ್ರೆ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆಯಿದೆ.

ಇದನ್ನೂ ಓದಿ:ಚಳಿಗಾಲದಲ್ಲಿ ಆರೋಗ್ಯ ರಕ್ಷಣೆಗೆ ನೆಲ್ಲಿಕಾಯಿ ಬೆಸ್ಟ್!‌ – ಆಮ್ಲದಿಂದ ಎಷ್ಟೊಂದು ಲಾಭ!

ಕೆಲವರಿಗೆ ರಾತ್ರಿ ನಿದ್ರಿಸುವಾಗ ಕೈ ಮರಗಟ್ಟುವಿಕೆ ಕಾಣಿಸಿಕೊಳ್ತಿದೆ. ಇದಕ್ಕೆ ಕಾರಣ ಮಲಗುವ ತಪ್ಪಾದ ಭಂಗಿಯಿಂದ ಹಿಡಿದು ನರಗಳ ಮೇಲಿನ ಒತ್ತಡ, ಕಾರ್ಪಲ್ ಟನಲ್ ಸಿಂಡ್ರೋಮ್, ಮಧುಮೇಹ ಮತ್ತು ವಿಟಮಿನ್ ಕೊರತೆಯವರೆಗೆ ಹಲವು ಕಾರಣಗಳು ಇದಕ್ಕೆ ಸಂಬಂಧಿಸಿರಬಹುದು. ಈ ಕುರಿತ ಮಾಹಿತಿ ಇಲ್ಲಿದೆ.

ಕುತ್ತಿಗೆಯ ನರಗಳ ಮೇಲಿನ ಒತ್ತಡವೂ ಕಾರಣವಾಗಬಹುದು

ಕುತ್ತಿಗೆಯ ಬೆನ್ನುಹುರಿ ಅಥವಾ ಡಿಸ್ಕ್‌ಗೆ ಸಂಬಂಧಿಸಿದ ಸಮಸ್ಯೆಗಳಿಂದ ನರಗಳ ಮೇಲೆ ಒತ್ತಡ ಉಂಟಾದರೆ ಅದರ ಪರಿಣಾಮ ಕೈಗಳವರೆಗೆ ಕಾಣಿಸಿಕೊಳ್ಳಬಹುದು. ಕೈ ಮರಗಟ್ಟುವುದರ ಜೊತೆಗೆ ಕುತ್ತಿಗೆ ಅಥವಾ ಭುಜದಲ್ಲಿ ನೋವು, ಕೈಯಲ್ಲಿ ಜುಮ್ಮೆನಿಸುವಿಕೆ ಅಥವಾ ಬಲಹೀನತೆ ಕಾಣಿಸಿಕೊಂಡರೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ಲಕ್ಷಣಗಳ ಸ್ವರೂಪ ಮತ್ತು ಯಾವ ಬೆರಳುಗಳಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ ಎಂಬುದರ ಆಧಾರದ ಮೇಲೆ ವೈದ್ಯರು ಕಾರಣವನ್ನ ಗುರುತಿಸಲು ಪ್ರಯತ್ನಿಸುತ್ತಾರೆ.

ಮಲಗುವ ಭಂಗಿಯೂ ಕೈ ಮರಗಟ್ಟಲು ಕಾರಣ!

ಕೈಯನ್ನ ತಲೆಯ ಕೆಳಗೆ ಇಟ್ಟುಕೊಂಡು ಮಲಗುವುದು, ಕೈ ಮೇಲೆ ದೇಹದ ತೂಕ ಬೀಳುವಂತೆ ಮಲಗುವುದು ಅಥವಾ ಮೊಣಕೈಯನ್ನ ದೀರ್ಘಕಾಲ ಮಡಚಿಟ್ಟುಕೊಳ್ಳುವುದು ನರಗಳ ಮೇಲೆ ಒತ್ತಡ ಉಂಟುಮಾಡಬಹುದು. ಇದರಿಂದ ಕೈಗಳಲ್ಲಿ ತಾತ್ಕಾಲಿಕ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಕೈಯ ಮೇಲಿನ ಒತ್ತಡವನ್ನ ತೆಗೆದುಹಾಕಿ, ಮಲಗುವ ಭಂಗಿಯನ್ನ ಬದಲಿಸಿದ ಬಳಿಕ ಈ ಲಕ್ಷಣಗಳು ಕಡಿಮೆಯಾಗುತ್ತವೆ. ಆದರೆ ಪದೇಪದೇ ಇದೇ ಸಮಸ್ಯೆ ಕಾಣಿಸಿಕೊಂಡರೆ ಅದನ್ನ ಕೇವಲ ಮಲಗುವ ಭಂಗಿಯ ಸಮಸ್ಯೆ ಎಂದು ಭಾವಿಸಬಾರದು.

ಕಾರ್ಪಲ್ ಟನಲ್ ಸಿಂಡ್ರೋಮ್ ಇರಬಹುದೇ?

ರಾತ್ರಿ ಕೈ ಮರಗಟ್ಟುವುದಕ್ಕೆ ಪ್ರಮುಖ ಕಾರಣಗಳಲ್ಲಿ ಕಾರ್ಪಲ್ ಟನಲ್ ಸಿಂಡ್ರೋಮ್ ಕೂಡ ಒಂದು. ಮಣಿಕಟ್ಟಿನಲ್ಲಿರುವ ಕಿರಿದಾದ ಮಾರ್ಗದ ಮೂಲಕ ಹಾದುಹೋಗುವ ಮೀಡಿಯನ್ ನರದ ಮೇಲೆ ಒತ್ತಡ ಉಂಟಾದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ಮುಖ್ಯವಾಗಿ ಹೆಬ್ಬೆರಳು, ತೋರುಬೆರಳು, ಮಧ್ಯದ ಬೆರಳು ಮತ್ತು ಉಂಗುರದ ಬೆರಳಿನ ಒಂದು ಭಾಗದಲ್ಲಿ ಜುಮ್ಮೆನಿಸುವಿಕೆ, ಮರಗಟ್ಟುವಿಕೆ ಅಥವಾ ನೋವು ಕಾಣಿಸಬಹುದು. ಕೆಲವರಿಗೆ ರಾತ್ರಿ ನಿದ್ರೆಯಿಂದ ಎಚ್ಚರವಾಗುವಷ್ಟು ತೊಂದರೆಯಾಗಬಹುದು. ಕೈಯ ಹಿಡಿತದ ಶಕ್ತಿ ಕಡಿಮೆಯಾಗುವುದು ಅಥವಾ ವಸ್ತುಗಳನ್ನ ಹಿಡಿಯಲು ಕಷ್ಟವಾಗುವುದೂ ಇದರ ಲಕ್ಷಣಗಳಾಗಿರಬಹುದು. ಇಂತಹ ಸಮಸ್ಯೆ ಮುಂದುವರಿದರೆ ವೈದ್ಯರನ್ನ ಸಂಪರ್ಕಿಸುವುದು ಅಗತ್ಯ.

ಮಧುಮೇಹ ಮತ್ತು ವಿಟಮಿನ್ B12 ಕೊರತೆಯ ಎಚ್ಚರಿಕೆ

ಮಧುಮೇಹದಿಂದ ನರಗಳಿಗೆ ಹಾನಿಯಾಗುವ ಸ್ಥಿತಿಯನ್ನ ಡಯಾಬೆಟಿಕ್ ನ್ಯೂರೋಪಥಿ ಎಂದು ಕರೆಯಲಾಗುತ್ತದೆ. ಇದರಿಂದ ಕೈ ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆ, ಜುಮ್ಮೆನಿಸುವಿಕೆ, ಉರಿ ಅಥವಾ ನೋವು ಕಾಣಿಸಿಕೊಳ್ಳಬಹುದು. ವಿಟಮಿನ್ B12 ಕೊರತೆಯೂ ನರಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು. ಆದರೆ ಕೈ ಮರಗಟ್ಟುತ್ತಿದೆ ಎಂಬ ಒಂದೇ ಲಕ್ಷಣದಿಂದ ಮಧುಮೇಹ ಅಥವಾ ವಿಟಮಿನ್ ಕೊರತೆ ಇದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಅಗತ್ಯವಿದ್ದರೆ ವೈದ್ಯರು ರಕ್ತಪರೀಕ್ಷೆ ಸೇರಿದಂತೆ ಸೂಕ್ತ ಪರೀಕ್ಷೆಗಳನ್ನ ಶಿಫಾರಸು ಮಾಡಬಹುದು. ಸ್ವಯಂ ಔಷಧ ಸೇವಿಸುವ ಬದಲು ನಿಖರ ಕಾರಣವನ್ನ ಪತ್ತೆಹಚ್ಚುವುದು ಮುಖ್ಯ.

ಯಾವಾಗ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು?

ಕೈ ಮರಗಟ್ಟುವಿಕೆ ಪದೇಪದೇ ಕಾಣಿಸಿಕೊಂಡರೆ, ದೀರ್ಘಕಾಲ ಮುಂದುವರಿದರೆ, ನೋವು ಅಥವಾ ಕೈಯಲ್ಲಿ ಬಲಹೀನತೆ ಕಾಣಿಸಿಕೊಂಡರೆ ವೈದ್ಯರನ್ನ ಸಂಪರ್ಕಿಸಿ. ಮಲಗುವಾಗ ಕೈ ಮೇಲೆ ಒತ್ತಡ ಬೀಳದಂತೆ ನೋಡಿಕೊಳ್ಳುವುದು ಮತ್ತು ಮಣಿಕಟ್ಟನ್ನ ಹೆಚ್ಚು ಮಡಚದೆ ನೇರವಾಗಿಡುವುದು ಸಹಾಯಕವಾಗಬಹುದು.

Shwetha M

Leave a Reply

Your email address will not be published. Required fields are marked *