ಚಿನ್ಮಯ್ ಸುತಾರ್ ಅಬ್ಬರ! – ರಣಜಿ ಟ್ರೋಫಿಯಲ್ಲಿ ಅಜೇಯ 400 ರನ್

ಕ್ರಿಕೆಟ್ ಅಂಗಳದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ದಾಖಲಾಗಿದೆ. ಮಿಜೋರಾಂ ತಂಡದ ಬ್ಯಾಟರ್ ಚಿನ್ಮಯ್ ಸುತಾರ್, ರಣಜಿ ಟ್ರೋಫಿ ಪಂದ್ಯದಲ್ಲಿ ನಾಗಾಲ್ಯಾಂಡ್ ವಿರುದ್ಧ ಅಜೇಯ 400 ರನ್ ಸಿಡಿಸಿ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅಪರೂಪದ ಸಾಧನೆ ಮಾಡಿದ ಆಟಗಾರರ ಪಟ್ಟಿಗೆ ಚಿನ್ಮಯ್ ಸೇರ್ಪಡೆಯಾಗಿದ್ದಾರೆ.
ನಾಗಾಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಚಿನ್ಮಯ್ ಸುತಾರ್ ಎದುರಾಳಿ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿ ರನ್ಗಳ ಮಳೆ ಸುರಿಸಿದ್ದಾರೆ. ಬರೋಬ್ಬರಿ 517 ಎಸೆತಗಳನ್ನು ಎದುರಿಸಿದ ಅವರು, 46 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ಗಳ ನೆರವಿನಿಂದ ಅಜೇಯ 400 ರನ್ ಗಳಿಸಿದ್ದಾರೆ. ತಾಳ್ಮೆ, ಏಕಾಗ್ರತೆ ಮತ್ತು ಸ್ಫೋಟಕ ಬ್ಯಾಟಿಂಗ್ನ ಅದ್ಭುತ ಸಂಯೋಜನೆ ಅವರ ಇನ್ನಿಂಗ್ಸ್ನಲ್ಲಿ ಕಂಡುಬಂದಿದೆ.
ನಾಗಾಲ್ಯಾಂಡ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಮಿಜೋರಾಂ ತಂಡವು ಬೃಹತ್ ಮೊತ್ತವನ್ನೇ ಕಲೆಹಾಕಿತು. ಈ ಇನ್ನಿಂಗ್ಸ್ನಲ್ಲಿ ಸುತಾರ್ ಒಬ್ಬರೇ 400 ರನ್ ಗಳಿಸುವ ಮೂಲಕ ತಂಡಕ್ಕೆ ದೊಡ್ಡ ಮೊತ್ತವನ್ನು ಕೊಡಗೆಯಾಗಿ ನೀಡಿದರು. ಒಂದು ಹಂತದಲ್ಲಿ, ಮಿಜೋರಾಂ ತಂಡವು 392 ರನ್ಗೆ ಒಂಬತ್ತು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆಗ ತಂಡದ ಮೊತ್ತ ಅಲ್ಲಿಗೇ ನಿಲ್ಲಬಹುದು ಎಂದು ಭಾವಿಸಲಾಗಿತ್ತು. ಆದರೆ, ಕೊನೆಯವರೆಗೂ ಕ್ರೀಸ್ಗೆ ಅಂಟಿ ನಿಂತ ಸುತಾರ್, ತಂಡದ ಮೊತ್ತವನ್ನು 581/9ಕ್ಕೆ ಕೊಂಡೊಯ್ದರು ಮತ್ತು ವೈಯಕ್ತಿಕವಾಗಿ 400 ರನ್ಗಳ ಗಡಿಯನ್ನು ತಲುಪಿದರು. ಆ ಬಳಿಕ ಮಿಜೋರಾಂ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡಿತು.
ಮೇ 3, 1997ರಂದು ಜನಿಸಿದ ಸುತಾರ್, ದೇಶೀಯ ಕ್ರಿಕೆಟ್ನಲ್ಲಿ ಮುಂಬೈ ಮತ್ತು ಮಿಜೋರಾಂ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಅವರು ವಿಜಯ್ ಹಜಾರೆ ಟ್ರೋಫಿಯಲ್ಲೂ ಆಡಿದ್ದು, 2019ರ ‘ಎಮರ್ಜಿಂಗ್ ಟೀಮ್ಸ್ ಏಷ್ಯಾ ಕಪ್’ನಲ್ಲಿ ಭಾರತದ ಅಂಡರ್-23 ತಂಡವನ್ನು ಪ್ರತಿನಿಧಿಸಿದ್ದಾರೆ. ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ದೇಶೀಯ ಕ್ರಿಕೆಟ್ನಲ್ಲಿ ವಿವಿಧ ತಂಡಗಳ ಪರ ಆಡಿದ್ದ ಸುತಾರ್ಗೆ, ಈ 400 ರನ್ಗಳ ಇನ್ನಿಂಗ್ಸ್ ದೊಡ್ಡ ಅವಕಾಶವನ್ನೇ ಒದಗಿಸಿಕೊಟ್ಟಿದೆ.

ನೋಡಿರಿ

