ದೇಶದಲ್ಲೇ ಮೊದಲ ಬಾರಿಗೆ ಲಿಥಿಯಂ ನಿಕ್ಷೇಪ ಪತ್ತೆ – ಏನೆಲ್ಲಾ ಉಪಯೋಗ?
ದೇಶದಲ್ಲೇ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿದೆ. ಇದು ದೇಶದ ಮೊದಲ ಲಿಥಿಯಂ ನಿಕ್ಷೇಪಗಳ ತಾಣ ಎಂದು ವರದಿಯಾಗಿದೆ.
ಖನಿಜ ಸಂಪತ್ತಿನಲ್ಲಿ ಅಮೂಲ್ಯವಾದ ಲೋಹ ಲಿಥಿಯಂನ ನಿಕ್ಷೇಪಗಳನ್ನು ರಿಯಾಸಿ ಜಿಲ್ಲೆಯಲ್ಲಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್ಐ) ಗುರುತಿಸಿದೆ. ಇದನ್ನು ಇ.ವಿ ಬ್ಯಾಟರಿಗಳ ತಯಾರಿಕೆಗೆ ಪ್ರಮುಖ ವಸ್ತುವಾಗಿ ಬಳಸುತ್ತಾರೆ. ರಿಯಾಸಿ ಜಿಲ್ಲೆಯ ಸಲಾಲ್ – ಹೈಮಾನ ಎಂಬಲ್ಲಿ 59 ಲಕ್ಷ ಟನ್ ಗಳಷ್ಟು ಲಿಥಿಯಂ ನಿಕ್ಷೇಪವಿರುವುದು ಕಂಡುಬಂದಿದೆ ಎಂದು ಗಣಿ ಇಲಾಖೆ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತದ ಮೇಲೆ ನಿರ್ಬಂಧ ಹೇರಲು ಮುಂದಾಗಿದ್ದ ಅಮೆರಿಕ ನಿಲುವು ಬದಲಿಸಿದ್ದೇಕೆ?
ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿಗಳಲ್ಲಿ ಬಳಸುವ ಲಿಥಿಯಂ ಸೇರಿದಂತೆ ಖನಿಜಗಳನ್ನು ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾದಿಂದ ಆಮದು ಮಾಡಿಕೊಳ್ಳಲು ಸರ್ಕಾರ ಹಲವು ಪೂರ್ವಭಾವಿ ಕ್ರಮಗಳನ್ನು ಮಾಡಿಕೊಳ್ಳುತ್ತಿದೆ ಎಂದು ಈ ಹಿಂದೆ ಗಣಿ ಸಚಿವಾಲಯ ಹೇಳಿತ್ತು. ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂ ಪತ್ತೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಸೆಂಟ್ರಲ್ ಜಿಯೋಲಾಜಿಕಲ್ ಪ್ರೋಗ್ರಾಮಿಂಗ್ ಬೋರ್ಡ್ ನ 62ನೇ ಸಭೆಯಲ್ಲಿ ಗಣಿ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ಮಾತನಾಡಿ, ‘ಜಿಎಸ್ ಐ ಸಮೀಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ದೇಶದ ಮೊದಲ ಲಿಥಿಯಂ ತಾಣ ಪತ್ತೆಯಾಗಿದೆ. ಲಿಥಿಯಂ, ನಿಕಲ್ ಮತ್ತು ಕೋಬಾಲ್ಟ್ನಂತಹ ಪ್ರಮುಖ ಖನಿಜಗಳನ್ನು ಮೊಬೈಲ್ ಫೋನ್ಗಳು, ಸೌರ ಫಲಕಗಳು ಮತ್ತು ಇತರ ಹಲವು ಸಾಧನಗಳಲ್ಲಿ ಬಳಸಲಾಗುತ್ತದೆ. ದೇಶ ಸ್ವಾವಲಂಬಿಯಾಗಲು ನಿರ್ಣಾಯಕ ಖನಿಜಗಳನ್ನು ಪತ್ತೆ ಮಾಡುವುದು ಮತ್ತು ಅದನ್ನು ಸಂಸ್ಕರಿಸುವುದು ಬಹಳ ಮುಖ್ಯ. ಸ್ಥಳೀಯ ಲಭ್ಯತೆಯು ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲು ಸಹಾಯ ಮಾಡುತ್ತದೆ. ಈ ಹಿಂದೆ, ಗಣಿ ಸಚಿವಾಲಯವು ಲಿಥಿಯಂನಂತಹ ಖನಿಜಗಳಿಗೆ ಹೊಸ ತಂತ್ರಜ್ಞಾನದ ಅಗತ್ಯವಿದೆ ಎಂದು ಹೇಳಿತ್ತು. ಇದೀಗ ದೇಶದಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿರುವುದು ಆಶಾದಾಯಕ ಬೆಳವಣಿಗೆ’ ಎಂದು ಹೇಳಿದ್ದಾರೆ.