ಗಿಲ್, ಶಫಾಲಿಗೆ ICC ಬಂಪರ್ ಗಿಫ್ಟ್- ಯುವರಾಜ್ ಸಿಂಗ್ DC ಕೋಚ್
ಟೆಂಬಾ ಕೋಟೆಯಲ್ಲೇ ಗೆದ್ದ AUS!

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ನಾಲ್ಕನೇ ಟಿ20 ಪಂದ್ಯ ಇಂದು ಹೈದರಾಬಾದ್ನಲ್ಲಿ ನಡೆಯಲಿದೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದ್ದು, ಇಂದಿನ ಪಂದ್ಯ ಗೆದ್ದರೆ ಸರಣಿ ಗೆಲುವಿನತ್ತ ಮತ್ತೊಂದು ಹೆಜ್ಜೆ ಇಡಲಿದೆ. ಇಂದೋರ್ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಭಾರತ 14 ರನ್ಗಳಿಂದ ಗೆದ್ದಿತ್ತು. ಹೀಗಾಗಿ ವೆಸ್ಟ್ ಇಂಡೀಸ್ ತಂಡ ಸರಣಿ ಸಮಬಲಗೊಳಿಸಲು ಹೋರಾಡಲಿದೆ.
ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಮೃತಿ ಮಂಧಾನ ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಅಕ್ಟೋಬರ್ 13ರಂದು ಬಿಡುಗಡೆಯಾದ ನೂತನ ಪಟ್ಟಿಯಲ್ಲಿ ಅವರು 790 ರೇಟಿಂಗ್ ಪಾಯಿಂಟ್ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಎಲಿಸ್ ಪೆರ್ರಿ ಕೂಡ ಮತ್ತೆ ಅಗ್ರ ಹತ್ತು ಆಟಗಾರ್ತಿಯರ ಪಟ್ಟಿಗೆ ಮರಳಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸೆಪ್ಟೆಂಬರ್ ತಿಂಗಳ ಆಟಗಾರರ ಪ್ರಶಸ್ತಿಯನ್ನು ಪ್ರಕಟಿಸಿದೆ. ಪುರುಷ ಮತ್ತು ಮಹಿಳಾ ಎರಡೂ ವಿಭಾಗಗಳಲ್ಲಿ ಭಾರತೀಯರು ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಪುರುಷರ ವಿಭಾಗದಲ್ಲಿ, ಭಾರತೀಯ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭಮನ್ ಗಿಲ್ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾದರೆ, ಮಹಿಳಾ ವಿಭಾಗದಲ್ಲಿ, ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಮುಂಬೈ ತಂಡದ ಉಪನಾಯಕ ಆಯುಷ್ ಮಾತ್ರೆ ಗಾಯದ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಂಡೀಗಢ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ 48 ರನ್ ಗಳಿಸಿದ ಬಳಿಕ ಅವರ ಬಲ ತೊಡೆಯ ಹಿಂಭಾಗದ ಸ್ನಾಯು ಗಾಯ ಮತ್ತೆ ಕಾಣಿಸಿಕೊಂಡಿದೆ. ವರದಿಗಳ ಪ್ರಕಾರ, ಅವರು ಕನಿಷ್ಠ ಒಂದು ತಿಂಗಳು ಕ್ರಿಕೆಟ್ನಿಂದ ದೂರ ಉಳಿಯುವ ಸಾಧ್ಯತೆಯಿದೆ. ಇದರಿಂದ ಮುಂಬೈ ತಂಡದ ಆರಂಭಿಕ ಪಂದ್ಯಗಳ ಯೋಜನೆಗೆ ದೊಡ್ಡ ಹೊಡೆತ ಬಿದ್ದಿದೆ.
ಇದನ್ನೂ ಓದಿ: ಹೈದ್ರಾಬಾದ್ ನಲ್ಲಿ ಅಭಿಯದ್ದೇ ಹವಾ – ವಿಂಡೀಸ್ ಬೌಲರ್ಸ್ ಬೆವರಿಳಿಸ್ತಾರಾ?
ವಿರಾಟ್ ಕೊಹ್ಲಿ ಒಬ್ಬರೇ ಭಾರತಕ್ಕೆ 2027ರ ಏಕದಿನ ವಿಶ್ವಕಪ್ ಗೆಲ್ಲಿಸಿಕೊಡಲು ಸಾಧ್ಯವಿಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಎಚ್ಚರಿಸಿದ್ದಾರೆ. ವಿರಾಟ್ ಕೊಹ್ಲಿ ಪ್ರಸ್ತುತ ಬ್ಯಾಟಿಂಗ್ ಲೈನ್ಅಪ್ನ ಮುಖ್ಯ ಆಧಾರಸ್ತಂಭವಾಗಿದ್ದರೂ, ಕೇವಲ ಒಬ್ಬ ಆಟಗಾರನ ಮೇಲೆ ಅತಿಯಾಗಿ ಅವಲಂಬಿತವಾಗುವುದು ದೊಡ್ಡ ಟೂರ್ನಿಗಳಲ್ಲಿ ಹಿನ್ನಡೆಗೆ ಕಾರಣವಾಗಬಹುದು ಎಂದಿದ್ದಾರೆ.
ಐಪಿಎಲ್ಗೆ ಸಂಬಂಧಿಸಿದ ಪ್ರಮುಖ ಸಭೆಯನ್ನು ಬಿಸಿಸಿಐ ಮುಂದೂಡಿದೆ. ಅಕ್ಟೋಬರ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಬಿಸಿಸಿಐ ಅಧಿಕಾರಿಗಳು ಪಾಲ್ಗೊಳ್ಳಬೇಕಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಐಪಿಎಲ್ ಫ್ರಾಂಚೈಸಿಗಳು ಮತ್ತು ಮಂಡಳಿಗೆ ಸಂಬಂಧಿಸಿದ ಚರ್ಚೆಗಳು ಯಾವಾಗ ನಡೆಯಲಿವೆ ಎಂಬ ಕುತೂಹಲ ಈಗ ಹೆಚ್ಚಾಗಿದೆ.
ಐಪಿಎಲ್ 2027ರ ಆವೃತ್ತಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅಧಿಕೃತವಾಗಿ ನೇಮಕಗೊಂಡಿದ್ದಾರೆ. ತಮ್ಮ ಕ್ರಿಕೆಟ್ ಅಕಾಡೆಮಿಯಲ್ಲಿ ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ಪ್ರಭ್ ಸಿಮ್ರಾನ್ ಸಿಂಗ್ ಮೊದಲಾದ ಪ್ರತಿಭಾನ್ವಿತ ಯುವ ಬ್ಯಾಟರ್ ಗಳನ್ನು ಪಳಗಿಸಿದ ಹೆಗ್ಗಳಿಕೆ ಹೊಂದಿರುವ ಯುವರಾಜ್ ಸಿಂಗ್ ಅವರು ಐಪಿಎಲ್ ಇತಿಹಾಸದಲ್ಲಿ ಪೂರ್ಣ ಪ್ರಮಾಣದ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದು ಇದೇ ಮೊದಲು.
ರೋಹಿತ್ ಶರ್ಮಾಗೆ ಮತ್ತೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಸಿಗುತ್ತೆ ಅನ್ನೋ ಚರ್ಚೆಗೆ ಇದೀಗ ತೆರೆ ಬಿದ್ದಿದೆ. ರೋಹಿತ್ ಅವರನ್ನು ಮತ್ತೆ ನಾಯಕನನ್ನಾಗಿ ಮಾಡುವ ಬಗ್ಗೆ ಸದ್ಯಕ್ಕೆ ಯಾವುದೇ ಚಿಂತನೆ ನಡೆಸಿಲ್ಲ ಎಂದು ಮುಂಬೈ ಇಂಡಿಯನ್ಸ್ ಸ್ಪಷ್ಟಪಡಿಸಿದೆ ಎನ್ನಲಾಗಿದೆ. ಆದರೆ ಹಾರ್ದಿಕ್ ಅವರನ್ನು ಬೇರೆ ತಂಡದೊಂದಿಗೆ ಟ್ರೇಡ್ ಮಾಡಿಕೊಳ್ಳುವ ವಿಚಾರದಲ್ಲಿ ಮುಂಬೈ ಇಂಡಿಯನ್ಸ್ ಮುಕ್ತವಾಗಿದೆ ಎನ್ನಲಾಗುತ್ತಿದೆ. ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಬೇರೆ ಫ್ರಾಂಚೈಸಿಗಳಿಂದ ಉತ್ತಮ ಪ್ರಸ್ತಾಪಗಳು ಬಂದರೆ, ಅವುಗಳನ್ನು ಪರಿಗಣಿಸಲು ಮುಂಬೈ ಸಿದ್ಧವಿದೆ ಎಂಬ ಮಾಹಿತಿ ಹೊರಬಿದ್ದಿದೆ.
2025ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೋಲಿಗೆ ಆಸ್ಟ್ರೇಲಿಯಾ ಸೇಡು ತೀರಿಸಿಕೊಂಡಿದೆ. ಡರ್ಬನ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ 214 ರನ್ಗಳ ಭರ್ಜರಿ ಜಯ ಸಾಧಿಸಿದೆ. 2018ರ ಸ್ಯಾಂಡ್ಪೇಪರ್ ಹಗರಣದ ಬಳಿಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಆಸ್ಟ್ರೇಲಿಯಾಗೆ ಇದು ಮೊದಲ ಟೆಸ್ಟ್ ಗೆಲುವು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿಪಡಿಸಿಕೊಂಡರೆ, ದಕ್ಷಿಣ ಆಫ್ರಿಕಾ ತಂಡವು ಒಂದು ಸ್ಥಾನ ಕಳೆದುಕೊಂಡು ಮೂರನೇ ಸ್ಥಾನಕ್ಕೆ ಕುಸಿದಿದೆ.
ಪಾಕಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ಎಂಟು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್ಗಳಲ್ಲಿ 168 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ ಕುಸಾಲ್ ಮೆಂಡಿಸ್ ಅವರ ಅರ್ಧಶತಕದ ನೆರವಿನಿಂದ ಸುಲಭವಾಗಿ ಗೆಲುವಿನ ದಡ ಸೇರಿತು. ದಸುನ್ ಶನಕಾ ಬೌಲಿಂಗ್ನಲ್ಲೂ ಮಿಂಚಿದರು. ಆದರೆ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಗೆದ್ದಿದ್ದರಿಂದ ಶ್ರೀಲಂಕಾಕ್ಕೆ ವೈಟ್ವಾಶ್ ತಪ್ಪಿಸುವುದಷ್ಟೇ ಸಾಧ್ಯವಾಯಿತು.

ನೋಡಿರಿ

