ಅಂಬಾರಿ ಹೊರುವ ಆನೆ ಯಾರು ಅನ್ನೋ ಕುತೂಹಲಕ್ಕೆ ತೆರೆ – ಚಿನ್ನದ ಅಂಬಾರಿ ಪ್ರಶಾಂತ್ ಹೆಗಲಿಗೆ

ಅಂಬಾರಿ ಹೊರುವ ಆನೆ ಯಾರು ಅನ್ನೋ ಕುತೂಹಲಕ್ಕೆ ತೆರೆ –  ಚಿನ್ನದ ಅಂಬಾರಿ  ಪ್ರಶಾಂತ್  ಹೆಗಲಿಗೆ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಆನೆ ಯಾರು ಎಂಬ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ಈ ಬಾರಿ ದುಬಾರೆ ಆನೆ ಶಿಬಿರದ 54 ವರ್ಷದ ‘ಪ್ರಶಾಂತ’ ಆನೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವುದು ಅತ್ಯಂತ ಗೌರವದ ಜವಾಬ್ದಾರಿ. ಈ ಜವಾಬ್ದಾರಿಯನ್ನು ನಿರ್ವಹಿಸಲು ಆನೆಗೆ ದೈಹಿಕ ಸಾಮರ್ಥ್ಯ, ಶಿಸ್ತು ಮತ್ತು ವಿಶೇಷ ತರಬೇತಿ ಅಗತ್ಯ. ಈ ಎಲ್ಲ ಗುಣಗಳನ್ನು ಹೊಂದಿರುವ ಪ್ರಶಾಂತ ಆನೆ ಇದೀಗ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಲಿದೆ.

ಇದನ್ನೂ ಓದಿ: INDಗೆ ಗೆಲುವು.. WIಗೆ ಸಮಬಲ – ಹೈದ್ರಾಬಾದ್ ಅದೃಷ್ಟ ಯಾರಿಗೆ?

ಪ್ರಶಾಂತ ಆನೆಯನ್ನು 1993ರಲ್ಲಿ ಶಿವಮೊಗ್ಗ ಜಿಲ್ಲೆಯ ಕೆರೆಕೊಪ್ಪ ಅರಣ್ಯ ವಲಯದಲ್ಲಿ ಸೆರೆಹಿಡಿಯಲಾಗಿತ್ತು. ಬಳಿಕ ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಆನೆಗೆ ತರಬೇತಿ ನೀಡಲಾಯಿತು. ಕಳೆದ 18 ವರ್ಷಗಳಿಂದ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವ ಪ್ರಶಾಂತ, ತನ್ನ ಶಿಸ್ತು ಮತ್ತು ನಡವಳಿಕೆಯಿಂದ ಗಮನ ಸೆಳೆದಿದ್ದಾನೆ.

ಪ್ರತಿ ವರ್ಷ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆಯ ಮೇಲೆ ನಾಡಿನ ಜನರ ವಿಶೇಷ ಗಮನವಿರುತ್ತದೆ. ಈ ಬಾರಿ ಪ್ರಶಾಂತ ಆನೆಗೆ ಆ ಮಹತ್ವದ ಜವಾಬ್ದಾರಿ ಸಿಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಮೈಸೂರು ದಸರಾ ಜಂಬೂಸವಾರಿಯಲ್ಲಿ 750 ಕೆಜಿ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಪ್ರಶಾಂತ ಆನೆಯ ಗಾಂಭೀರ್ಯದ ನಡಿಗೆ ನೋಡಲು ಜನರು ಕಾತರದಿಂದ ಕಾಯುತ್ತಿದ್ದಾರೆ.

Kishor KV

Leave a Reply

Your email address will not be published. Required fields are marked *