IPL ಪಿಚ್ ಗಳೇ ಬೌಲರ್ಸ್ ಗೆ ವಿಲನ್ – 3ನೇ ಪಂದ್ಯಕ್ಕೂ FLAT ಟ್ರ್ಯಾಕ್
ಇಲ್ಲಿ ಹಾರಾಟ.. ವಿದೇಶಗಳಲ್ಲಿ ಒದ್ದಾಟ!

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3ನೇ ಟಿ-20ಐ ಪಂದ್ಯಕ್ಕೆ ಇಂದೋರ್ ಸ್ಟೇಡಿಯಂ ಸಿದ್ಧವಾಗಿದೆ. ಸಂಜೆ 7 ಗಂಟೆಗೆ ಮ್ಯಾಚ್ ಶುರುವಾಗುತ್ತೆ. ಸದ್ಯಕ್ಕೆ ಸರಣಿ ಸಮಬಲ ಆಗಿರೋದ್ರಿಂದ 3ನೇ ಮ್ಯಾಚ್ ಗೆದ್ದವ್ರು ಸಿರೀಸ್ ಕೈವಶಕ್ಕೆ ಇನ್ನಷ್ಟು ಹತ್ತಿರ ಆಗ್ತಾರೆ. ನಾಲ್ಕು ಹಾಗೇ 5ನೇ ಮ್ಯಾಚಲ್ಲಿ ಇನ್ನೊಂದು ಪಂದ್ಯ ಗೆದ್ರೂ ಸರಣಿ ಗೆದ್ದುಬಿಡ್ತಾರೆ. ಆದ್ರೆ ವಿಷ್ಯ ಅದಲ್ಲ. ಇವತ್ತು ಬ್ಯಾಟಿಂಗ್ನಲ್ಲಿ ಯಾರೆಲ್ಲಾ ಧೂಳೆಬ್ಬಿಸ್ತಾರೆ ಅನ್ನೋದು. ಯಾಕಂದ್ರೆ ಎರಡೂಕಡೆ ಪವರ್ ಹಿಟ್ಟರ್ಗಳೇ ಇರೋದ್ರಿಂದ ಸಿಕ್ಸ್, ಫೋರ್ಗಳ ಸುರಿಮಳೆಯಂತೂ ಪಕ್ಕನೇ. ಬಟ್ ಬ್ಯಾಟರ್ಗಳ ಈ ಹೊಡಿಬಡಿ ಹಿಂದಿನ ಸೀಕ್ರೆಟ್ ಏನಂದ್ರೆ ಐಪಿಎಲ್ಗೆ ಅಂತಾ ರೆಡಿಯಾಗುವ ಫ್ಲ್ಯಾಟ್ ಪಿಚ್ಗಳು. ಬ್ಯಾಟರ್ಗಳನ್ನ ಮೆರೆಸಿ ಬೌಲರ್ಗಳ ಬೆವರಿಳಿಸೋ ಇದೇ ಫ್ಲ್ಯಾಟ್ ಟ್ರ್ಯಾಕ್ಗಳು ಈಗ ಟೀಂ ಇಂಡಿಯಾ ಪಂದ್ಯಗಳಿಗೆ ದೊಡ್ಡ ಹೊಡೆತ ನೀಡ್ತಿವೆ. ಐಪಿಎಲ್ ಕ್ರೇಜ್ನಲ್ಲಿ ಭಾರತದ ಪಂದ್ಯಗಳಿಗೆ ಎಫೆಕ್ಟ್ ಆಗ್ತಿದೆ.
ಇದನ್ನೂ ಓದಿ : ಸುಂದರ್ ಆಟ ಮುಗಿಸಿದ್ರಾ ನಮನ್? – T-20I ಆಲ್ ರೌಂಡರ್ SLOT ಫಿಕ್ಸ್!
ಐಪಿಎಲ್ಗೆ ಅಂತಾ ಸಿದ್ಧವಾಗ್ತಿರೋ ಪಿಚ್ಗಳು ಪ್ರಸ್ತುತ ಟೀಮ್ ಇಂಡಿಯಾ ಪಂದ್ಯಗಳ ಮೇಲೆ ಅದ್ರಲ್ಲೂ ಬೌಲಿಂಗ್ ವಿಭಾಗದ ಮೇಲೆ ತುಂಬಾ ದೊಡ್ಡ ಪರಿಣಾಮ ಬೀರ್ತಿವೆ. ರಾಂಚಿಯಲ್ಲಿ ನಡೆದ 2ನೇ ಟಿ20ಐ ಪಂದ್ಯದಲ್ಲಿ ಭಾರತ 249 ರನ್ ಗಳಿಸಿದರೂ ವೆಸ್ಟ್ ಇಂಡೀಸ್ ಅದನ್ನು ಸುಲಭವಾಗಿ ಬೆನ್ನಟ್ಟಿದ್ದು ಹಾಗೇ ಇವತ್ತು ಇಂದೋರ್ನ ಹೋಳ್ಕರ್ ಸ್ಟೇಡಿಯಂನಲ್ಲಿಯೂ ಇದೇ ರೀತಿಯ ರನ್ ಮಳೆಯಾದ್ರೂ ಅಚ್ಚರಿ ಪಡ್ಬೇಕಿಲ್ಲ. ಯಾಕಂದ್ರೆ ಐಪಿಎಲ್ ಪಿಚ್ಗಳ ಪ್ರಿಪರೇಷನ್ನ ಸೈಡ್ ಎಫೆಕ್ಟ್ ಇದು.
ಹೈ-ಸ್ಕೋರಿಂಗ್ ಗೇಮ್ ಗಾಗಿ ಪಿಚ್ ಗಳನ್ನು ಹಾಳು ಮಾಡಿತಾ ಬಿಸಿಸಿಐ?
ಐಪಿಎಲ್ ಪಂದ್ಯಗಳು ಅಂದ್ರೇನೇ ಹಾಗೆ. ಪಂದ್ಯಗಳ ಕ್ರೇಜ್ ಹೆಚ್ಚಿಸ್ಬೇಕು ಅಂತಾ ಹಾಗೇ ವ್ಯೂವರ್ಸ್ನ ಎಂಟರ್ಟೈನ್ ಮಾಡ್ಲಿಕ್ಕೆ ಬಿಸಿಸಿಐ ಕ್ಯುರೇಟರ್ಗಳಿಗೆ “ಹೈ-ಸ್ಕೋರಿಂಗ್” ಅಂದ್ರೆ ಹೆಚ್ಚು ರನ್ ಬರುವ ಪಿಚ್ಗಳನ್ನು ಸಿದ್ಧಪಡಿಸಲು ಸೂಚಿಸುತ್ತದೆ. ಇದೇ ಕಾರಣಕ್ಕೆ ಕಳೆದ ಎರಡ್ಮೂರು ಸೀಸನ್ಗಳಿಂದ 200+ ರನ್ಸ್ ಟಾರ್ಗೆಟ್ ಎಲ್ಲಾ ನೀರು ಕುಡ್ದಂಗೆ ಸಲೀಸಾಗಿ ಚೇಸ್ ಮಾಡಿದ್ದಾರೆ. ಆದ್ರೆ ಪ್ರಸ್ತುತ ಅಂತರರಾಷ್ಟ್ರೀಯ ಪಂದ್ಯಗಳಿಗೂ ಇದೇ ಮೈದಾನಗಳನ್ನು ಬಳಸಲಾಗುತ್ತಿದೆ. ಕಂಪ್ಲೀಟ್ ಆಗಿ ಫ್ಲ್ಯಾಟ್ ಇರುವ ಪಿಚ್ಗಳಲ್ಲಿ ಬ್ಯಾಟರ್ಗಳು ಲೀಲಾಜಾಲವಾಗಿ ಬೌಂಡಿ ಬಾರಿಸ್ತಾರೆ. ಇಂಥಾ ಪಿಚ್ಗಳಲ್ಲಿ ಬೌಲರ್ಗಳಿಗೆ ಯಾವುದೇ ರೀತಿಯ ಸ್ವಿಂಗ್ ಅಥವಾ ಟರ್ನ್ ಸಿಗಲ್ಲ. ಸೋ ಅಂದುಕೊಂಡ ಲೈನ್ ಌಂಡ್ ಲೈಂತ್ನಲ್ಲಿ ಬಾಲ್ ಬೀಳ್ತಿಲ್ಲ. ವಿಕೆಟ್ಸ್ ಬರ್ತಿಲ್ಲ. ಭಾರತದ ಪರ ಆಡುವ ಸೂಪರ್ ಸ್ಟಾರ್ ಬೌಲರ್ಗಳೂ ಇದ್ರ ಎಫೆಕ್ಟ್ ಅನುಭವಿಸ್ತಾ ಇದ್ದಾರೆ. ಐಪಿಎಲ್ನ ಈ ಬ್ಯಾಟಿಂಗ್ ಪ್ಯಾರಡೈಸ್ ಪಿಚ್ಗಳು ಟೀಮ್ ಇಂಡಿಯಾದ ಮೇನ್ ಬೌಲರ್ಗಳ ಎಕಾನಮಿ ರೇಟ್ ಹಾಳು ಮಾಡ್ತಿವೆ. ಌಂಡ್ ಪಂದ್ಯದ ಮೇಲಿನ ಹಿಡಿತವನ್ನೂ ತಪ್ಪಿಸ್ತಿವೆ. ಅಷ್ಟೇ ಅಲ್ಲದೇ ಐಪಿಎಲ್ ಪಂದ್ಯಗಳಿಗಾಗಿ ಮೈದಾನದ ಗ್ರಾಸ್ ಕಟ್ಟಿಂಗ್ ವಿಧಾನ ಹಾಗೇ ಸಂಜೆ ಬೀಳೋ ಇಬ್ಬನಿಯಿಂದ ಚೇಸಿಂಗ್ ಮಾಡೋ ತಂಡಗಳಿಗೆ ಹೆಲ್ಫ್ ಫುಲ್ ಆಗುತ್ತೆ.ಇದೇ ಕಾರಣಕ್ಕೆ ಭಾರತ ತಂಡ ಮೊದಲ ಬ್ಯಾಟಿಂಗ್ ಮಾಡಿ 250 ರನ್ ಬಾರಿಸಿದರೂ, ದ್ವಿತೀಯ ಇನ್ನಿಂಗ್ಸ್ನಲ್ಲಿ ಪಿಚ್ ಬ್ಯಾಟಿಂಗ್ಗೆ ಮತ್ತಷ್ಟು ಸುಲಭವಾಗುವುದರಿಂದ ಬೌಲರ್ಗಳು ಹೆಲ್ಪ್ ಲೆಸ್ ಆಗ್ತಿದ್ದಾರೆ. ಈಗಾಗ್ಲೇ 3ನೇ ಟಿ20ಐ ಪಂದ್ಯ ನಡೆಯಲಿರುವ ಇಂದೋರ್ ಮೈದಾನ ಈಗಾಗಲೇ ಐಪಿಎಲ್ನಲ್ಲಿ ಸಿಕ್ಸರ್ ಹಬ್ಬಗಳಿಗೆ ಫೇಮಸ್ ಆಗಿದೆ. ಇಲ್ಲಿನ ಬೌಂಡರಿಗಳು ಚಿಕ್ಕದಾಗಿದ್ದು, ಪಿಚ್ ಅನ್ನು ಸಂಪೂರ್ಣವಾಗಿ ಬ್ಯಾಟರ್ ಫ್ರೆಂಡ್ಲಿಯಾಗಿ ರೆಡಿ ಮಾಡಿದ್ದಾರೆ. ಸೋ ಇದು ಭಾರತದ ಬೌಲಿಂಗ್ ಲೈನ್ಅಪ್ಗೆ ಮತ್ತೊಂದು ಬರೆ ಎಳೆಯುವ ಸಾಧ್ಯತೆ ಇದೆ.
ಪಿಚ್ ಗಳ ಬಗ್ಗೆ ಗಂಭೀರ್ ಮತ್ತು ಗಿಲ್, ಶ್ರೇಯಸ್ ಅಸಮಾಧಾನ!
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲೂ ಹೀಗೇ ಆಗಿತ್ತು. ಭಾರತ 405 ರನ್ಗಳ ಟಾರ್ಗೆಟ್ ಚೇಸ್ ಮಾಡಿ ಗೆದ್ದಿತ್ತು. ಅತ್ತ ವಿಂಡೀಸ್ ಕೂಡ 350+ ರನ್ಸ್ ಚೇಸ್ ಮಾಡಿ ಗೆದ್ದಿದ್ರು. ಈಗ ಟಿ-20ಐ ಸರಣಿಯ ಎರಡೂ ಪಂದ್ಯಗಳನ್ನೂ ಚೇಸಿಂಗ್ ಮಾಡಿದ ತಂಡ ಗೆದ್ದಿದೆ. ಐಪಿಎಲ್ ಶೈಲಿಯ ಈ ರನ್ ಮಳೆ ಪಿಚ್ಗಳು ಭಾರತೀಯ ಬ್ಯಾಟರ್ಗಳಿಗೆ ರನ್ ಗಳಿಸಲು ನೆರವಾಗುತ್ತಿದ್ದರೂ, ಬೌಲರ್ಗಳನ್ನ ಪ್ರೆಶರ್ನಲ್ಲಿ ಸಿಲುಕಿಸುತ್ತಿವೆ. ವೆಸ್ಟ್ ಇಂಡೀಸ್ನಂತಹ ಬಲಿಷ್ಠ ಪವರ್-ಹಿಟ್ಟರ್ಸ್ ಇರುವ ತಂಡಗಳ ವಿರುದ್ಧ ಇಂತಹ ಪಿಚ್ಗಳು ಭಾರತಕ್ಕೆ ಉಲ್ಟಾ ಹೊಡೆಯುತ್ತಿವೆ. ಹಾಗಂತ ಭಾರತದಲ್ಲಿ ಅಷ್ಟೇ ಅಲ್ಲ. ವಿದೇಶಗಳಲ್ಲಿ ಪಂದ್ಯಗಳನ್ನ ಆಡುವಾಗ ಇದೇ ಕಾರಣಕ್ಕೆ ಭಾರತದ ಬ್ಯಾಟರ್ಸ್ ಬೇಗನೇ ಪೆವಿಲಿಯನ್ ಸೇರಿಕೊಳ್ತಿದ್ದಾರೆ. ಫ್ಲ್ಯಾಟ್ ಟ್ರ್ಯಾಕ್ಗಳಲ್ಲಿ ಧೂಳೆಬ್ಬಿಸಿ ಟ್ರಿಕ್ಕಿ ಪಿಚ್ಗಳನ್ನ ಕಂಟ್ರೋಲ್ ಸಿಗದೇ ಬೇಗನೇ ಔಟ್ ಆಗ್ತಾರೆ. ಸೋ ಈಗಲೂ ಕೂಡ ಬಿಸಿಸಿಐ ಐಪಿಎಲ್ ಗುಂಗು ಮತ್ತು ಪಬ್ಲಿಸಿಟಿ ಗಿಮಿಕ್ನಿಂದ ಹೊರಬರದೆ ಇದ್ರೆ ಟೀಂ ಇಂಡಿಯಾಗೆ ಇಂಥಾ ಸೋಲಿನ ಮುಖಭಂಗಗಳು ತಪ್ಪಲ್ಲ.

ನೋಡಿರಿ

