ರಾಜ್ಯದ 15 ಕಡೆಗಳಲ್ಲಿ ಪರ್ವತಮಾಲಾ ಯೋಜನೆ – ಎಲ್ಲೆಲ್ಲಿ ಬರಲಿದೆ  ರೋಪ್ ವೇ?

ರಾಜ್ಯದ 15 ಕಡೆಗಳಲ್ಲಿ ಪರ್ವತಮಾಲಾ ಯೋಜನೆ – ಎಲ್ಲೆಲ್ಲಿ ಬರಲಿದೆ  ರೋಪ್ ವೇ?

ನವದೆಹಲಿ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸರ್ಕಾರ ಮಹತ್ವದ ಹೆಜ್ಜೆಗಳನ್ನು ಇಡುತ್ತಿದೆ. ಇದರ ಭಾಗವಾಗಿ ಕೇಂದ್ರ ಬಜೆಟ್ ನಲ್ಲಿ ಪರ್ವತಮಾಲಾ ಯೋಜನೆಯನ್ನು ಘೋಷಿಸಲಾಗಿದೆ.

ಪರ್ವತಮಾಲಾ ಯೋಜನೆಯಲ್ಲಿ ಚಾಮುಂಡಿಬೆಟ್ಟ, ಕೊಡಚಾದ್ರಿ ಸೇರಿ ರಾಜ್ಯದ 15 ಕಡೆಗಳಲ್ಲಿ ರೋಪ್ ವೇ ಆರಂಭಿಸಲು ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ಕೊಡಚಾದ್ರಿ ಬೆಟ್ಟದಲ್ಲಿ ರೋಪ್‌ವೇ ಯೋಜನೆ ಆರಂಭಿಸಲು ಕಾರ್ಯಸಾಧ್ಯತಾ ಅಧ್ಯಯನ ನಡೆಸಲಾಗಿದೆ. ಉಳಿದ 14 ಬೆಟ್ಟಗಳಲ್ಲಿ ಈ ಯೋಜನೆಯ ಆರಂಭಕ್ಕೆ ಪೂರ್ವ ಕಾರ್ಯಸಾಧ್ಯತಾ ಅಧ್ಯಯನ ಮಾಡಲಾಗಿದೆ ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಇದನ್ನೂ ಓದಿ:ಡೆಲಿವರಿ ರೋಬೋಟ್​ಗಳಿಗೂ ದಾರಿ ಬಿಡಿ – ಸ್ಪೆಷಲ್ ಗೆಸ್ಟ್ ಗಳಿಗಾಗಿ ಹೊಸ ಟ್ರಾಫಿಕ್ಸ್ ರೂಲ್ಸ್ ರೆಡಿ..!

ಪರ್ವತಮಾಲಾ ಯೋಜನೆ ಆರಂಭವಾದರೆ ಗುಡ್ಡಗಾಡು ಪ್ರದೇಶಗಳಿಗೆ ಜನರ ಸುಲಲಿತ ಪ್ರಯಾಣಕ್ಕೆ ಅನುಕೂಲವಾಗಲಿದೆ. ರೋಪ್‌ವೇ ಯೋಜನೆಗಳಿಗಾಗಿ ಸಾಮಾನ್ಯ ಕಾರ್ಯಾಚರಣೆಯ ವಿಧಾನವನ್ನು ಅಭಿವೃದ್ಧಿಪಡಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸಚಿವಾಲಯ ಈಗಾಗಲೇ ನಿರ್ದೇಶನ ನೀಡಿದೆ ಎಂದು ಗಡ್ಕರಿ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟ, ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿ, ಕೆಮ್ಮಣ್ಣು ಗುಂಡಿ, ಮೈಸೂರಿನ ಚಾಮುಂಡಿ ಬೆಟ್ಟ, ಉಡುಪಿ ಜಿಲ್ಲೆಯ ಕೊಡಚಾದ್ರಿ ಪರ್ವತ, ತುಮಕೂರಿನ ದೇವರಾಯನ ದುರ್ಗ, ಮಧುಗಿರಿ ಕೋಟೆ, ಕೊಪ್ಪಳದ ಅಂಜನಾದ್ರಿ ಬೆಟ್ಟ, ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ, ಸಾಗರ ಹಿನ್ನೀರು, ಉತ್ತರ ಕನ್ನಡದ ಯಾಣ, ಜೋಯ್ಡಾ ಹಾಗೂ ಚಪೇಲಿ, ಕೊಡಗು ಜಿಲ್ಲೆಯ ಕುಮಾರ ಪರ್ವತ, ಬೆಳಗಾವಿ ಜಿಲ್ಲೆಯ ರಾಜ್‌ಹೌಸ್‌ಗಡದಲ್ಲಿ ರೋಪ್ ವೇ ಯೋಜನೆಯನ್ನು ಕೈಗೆತ್ತಿಗೊಳ್ಳಲಾಗಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

suddiyaana