2-9ರಿಂದ 10-9… ಕೊನೆಯ ಕ್ಷಣದವರೆಗೂ ಹೋರಾಡಿ ಚಿನ್ನ ಗೆದ್ದ ಭಾರತದ ಸುಜೀತ್ ಕಲ್ಕಲ್‌

2-9ರಿಂದ 10-9… ಕೊನೆಯ ಕ್ಷಣದವರೆಗೂ ಹೋರಾಡಿ ಚಿನ್ನ ಗೆದ್ದ ಭಾರತದ ಸುಜೀತ್ ಕಲ್ಕಲ್‌

ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಸಂಭ್ರಮ. ಕುಸ್ತಿ ಅಖಾಡದಲ್ಲಿ ಭಾರತದ ಸುಜೀತ್ ಕಲ್ಕಲ್ ಅದ್ಭುತ ಪ್ರದರ್ಶನ ನೀಡಿ ಪುರುಷರ 65 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸುಜೀತ್, ತಜಿಕಿಸ್ತಾನದ ಅಬ್ದುಲ್ಮಝಿದ್ ಕುಡಿಯೆವ್ ಅವರನ್ನು ಎದುರಿಸಿದರು. ಪಂದ್ಯದಲ್ಲಿ ಒಂದು ಹಂತದಲ್ಲಿ ಸುಜೀತ್ 2-9ರಿಂದ ಭಾರೀ ಹಿನ್ನಡೆಯಲ್ಲಿದ್ದರು. ಆದರೆ ಪಂದ್ಯ ಮುಗಿಯಲು ಕೆಲವೇ ಕ್ಷಣಗಳು ಬಾಕಿ ಇದ್ದಾಗ ಸುಜೀತ್ ಅದ್ಭುತ ಕಂಬ್ಯಾಕ್ ಮಾಡಿದರು.

ಸತತ ಅಂಕಗಳನ್ನು ಕಲೆಹಾಕಿದ ಅವರು ಕೊನೆಯ ಹಂತದಲ್ಲಿ ಸ್ಕೋರ್‌ನ್ನು 10-9ಕ್ಕೆ ತಂದು ಪಂದ್ಯವನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಸುಜೀತ್ ಕಲ್ಕಲ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪರ ಕುಸ್ತಿಯಲ್ಲಿ ಚಿನ್ನ ಗೆದ್ದಿದ್ದಾರೆ.

ಇದನ್ನೂ ಓದಿ: ಲವ್ಲಿನಾ ಹೊಡೆದ್ರು ಗೋಲ್ಡನ್ ಪಂಚ್! – ಭಾರತಕ್ಕೆ ಮತ್ತೊಂದು ಚಿನ್ನದ ಪದಕ!

ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಜಪಾನ್‌ನ ಹಾಲಿ ಒಲಿಂಪಿಕ್ ಚಾಂಪಿಯನ್ ಕೋಟಾರೊ ಕಿಯೂಕಾ ವಿರುದ್ಧ 3-3ರ ಸಮಬಲದ ಪಂದ್ಯದಲ್ಲಿ ಮಾನದಂಡದ ಆಧಾರದ ಮೇಲೆ ಗೆದ್ದು ಫೈನಲ್ ಪ್ರವೇಶಿಸಿದ್ದರು. ಅದಕ್ಕೂ ಮೊದಲು ಇರಾನ್‌ನ ಅಬ್ಬಾಸ್ ಇಬ್ರಾಹಿಮ್‌ಝಾದೆ ವಿರುದ್ಧ 10-0ರ ಭರ್ಜರಿ ಗೆಲುವು ಸಾಧಿಸಿದ್ದರು.

ಸುಜೀತ್ ಅವರ ಈ ಚಿನ್ನದ ಗೆಲುವು ಭಾರತೀಯ ಕುಸ್ತಿಗೆ ಮತ್ತೊಂದು ಮಹತ್ವದ ಕ್ಷಣವಾಗಿದೆ. 65 ಕೆಜಿ ವಿಭಾಗದಲ್ಲಿ ಈ ಹಿಂದೆ ಯೋಗೇಶ್ವರ್ ದತ್ ಮತ್ತು ಬಜರಂಗ್ ಪೂನಿಯಾ ಏಷ್ಯನ್ ಗೇಮ್ಸ್ ಚಿನ್ನ ಗೆದ್ದಿದ್ದರು. ಇದೀಗ ಆ ಪಟ್ಟಿಗೆ ಸುಜೀತ್ ಕಲ್ಕಲ್ ಕೂಡ ಸೇರ್ಪಡೆಯಾಗಿದ್ದಾರೆ.

2-9ರಿಂದ 10-9… ಕೊನೆಯ ಕ್ಷಣದವರೆಗೂ ಹೋರಾಡಿ ಚಿನ್ನ ಗೆದ್ದ ಸುಜೀತ್ ಕಲ್ಕಲ್‌ಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

Kishor KV

Leave a Reply

Your email address will not be published. Required fields are marked *