ಲವ್ಲಿನಾ ಹೊಡೆದ್ರು ಗೋಲ್ಡನ್ ಪಂಚ್! – ಭಾರತಕ್ಕೆ ಮತ್ತೊಂದು ಚಿನ್ನದ ಪದಕ!

ಲವ್ಲಿನಾ ಹೊಡೆದ್ರು ಗೋಲ್ಡನ್ ಪಂಚ್! – ಭಾರತಕ್ಕೆ ಮತ್ತೊಂದು ಚಿನ್ನದ ಪದಕ!

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ ಸಿಕ್ಕಿದೆ. ಭಾರತದ ಸ್ಟಾರ್ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಮಹಿಳೆಯರ 75 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ನಿಶಿಯೋ ಜಿಮ್ನಾಷಿಯಂನಲ್ಲಿ ನಡೆದ ಫೈನಲ್‌ನಲ್ಲಿ ಲವ್ಲಿನಾ ಚೀನಾದ ಬಾವೊ ಝಿಯಿ ಅವರನ್ನು 5-0 ಅಂತರದ ಏಕಮತದ ತೀರ್ಪಿನಲ್ಲಿ ಮಣಿಸಿದರು. ಆರಂಭದಿಂದಲೂ ತಾಳ್ಮೆಯ ಆಟ ಪ್ರದರ್ಶಿಸಿದ ಲವ್ಲಿನಾ, ಎದುರಾಳಿಯ ಆಕ್ರಮಣಕಾರಿ ಪಂಚ್‌ಗಳಿಗೆ ಪರಿಣಾಮಕಾರಿ ಕೌಂಟರ್‌ಗಳ ಮೂಲಕ ಉತ್ತರಿಸಿದರು. ಅಂತಿಮವಾಗಿ ಎಲ್ಲಾ ಐವರು ನ್ಯಾಯಾಧೀಶರಿಂದಲೂ ಗೆಲುವಿನ ತೀರ್ಪು ಪಡೆದು ಚಿನ್ನವನ್ನು ತಮ್ಮದಾಗಿಸಿಕೊಂಡರು.

ಇದನ್ನೂ ಓದಿ: ಬಿಲ್ಲುಗಾರಿಕೆಯಲ್ಲಿ ಭಾರತ ಮಹಿಳಾ ತಂಡ ಹೊಸ ಇತಿಹಾಸ – ದಕ್ಷಿಣ ಕೊರಿಯಾ ತಂಡವನ್ನು ಮಣಿಸಿ ಚಿನ್ನ ಗೆದ್ದ ಇಂಡಿಯಾ

ಈ ಚಿನ್ನ ಲವ್ಲಿನಾ ಅವರ ಏಷ್ಯನ್ ಗೇಮ್ಸ್ ವೃತ್ತಿಜೀವನದ ಮೊದಲ ಚಿನ್ನದ ಪದಕವಾಗಿದೆ. 2022ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಅವರು ಬೆಳ್ಳಿ ಪದಕ ಗೆದ್ದಿದ್ದರು. ಇದೀಗ ಬೆಳ್ಳಿಯ ಬಣ್ಣವನ್ನು ಚಿನ್ನವಾಗಿ ಬದಲಿಸುವ ಮೂಲಕ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ್ದಾರೆ.

ಅಷ್ಟೇ ಅಲ್ಲ, ಏಷ್ಯನ್ ಗೇಮ್ಸ್ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ಭಾರತದ ಎರಡನೇ ಮಹಿಳಾ ಬಾಕ್ಸರ್ ಎಂಬ ವಿಶೇಷ ಗೌರವಕ್ಕೂ ಲವ್ಲಿನಾ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 2014ರಲ್ಲಿ ಮೇರಿ ಕೋಮ್ ಈ ಸಾಧನೆ ಮಾಡಿದ್ದರು.ವಿಶೇಷವೆಂದರೆ, ತಮ್ಮ 29ನೇ ಹುಟ್ಟುಹಬ್ಬದ ದಿನವೇ ಲವ್ಲಿನಾ ಈ ಚಿನ್ನದ ಪದಕ ಗೆದ್ದಿದ್ದಾರೆ. ಹೀಗಾಗಿ ಈ ಗೆಲುವು ಅವರಿಗೆ ಡಬಲ್ ಸಂಭ್ರಮ ತಂದಿದೆ. ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆಯಾಗಿರುವ ಲವ್ಲಿನಾ, ಇದೀಗ ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿ ತಮ್ಮ ಪದಕಗಳ ಪಟ್ಟಿಗೆ ಮತ್ತೊಂದು ಮಹತ್ವದ ಚಿನ್ನವನ್ನು ಸೇರಿಸಿಕೊಂಡಿದ್ದಾರೆ.

Kishor KV

Leave a Reply

Your email address will not be published. Required fields are marked *