ಟರ್ಕಿ ಭೂಕಂಪದಿಂದಾಗಿ ಭಾರತೀಯ ಕುಟುಂಬಗಳಿಗೆ ಆತಂಕ – ಬೆಂಗಳೂರಿನಿಂದ ತೆರಳಿದ್ದ ವ್ಯಕ್ತಿ ನಾಪತ್ತೆ
ಟರ್ಕಿ ಭೂಕಂಪದಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಸಾವು ನೋವಿನ ಸಂಖ್ಯೆಯೂ ಏರುತ್ತಲೇ ಇದೆ. ಇದರ ಮಧ್ಯೆ ಸುಮಾರು 3 ಸಾವಿರದಷ್ಟು ಭಾರತೀಯ ಕುಟುಂಬ ಆತಂಕದಲ್ಲಿದೆ. ಬೆಂಗಳೂರಿನಿಂದ ಬ್ಯುಸಿನೆಸ್ ಟ್ರಿಪ್ ಗಾಗಿ ಟರ್ಕಿಗೆ ಹೋಗಿದ್ದ ಭಾರತೀಯ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಕಳೆದ ಎರಡು ದಿನಗಳಿಂದ ಇವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಚಿತಪಡಿಸಿದೆ. ಈತ ಬೇರೆ ರಾಜ್ಯದ ವ್ಯಕ್ತಿಯಾಗಿದ್ದು, ಈತನ ಕುಟುಂಬದವರ ಜೊತೆ ಸಚಿವಾಲಯ ಸಂಪರ್ಕದಲ್ಲಿದೆ.
ಇದನ್ನೂ ಓದಿ: ಟರ್ಕಿ ಭೂಕಂಪಕ್ಕೆ ಸಿಲುಕಿರುವ ಕನ್ನಡಿಗರಿಗಾಗಿ ಸಹಾಯವಾಣಿ – ರಾಜ್ಯಸರ್ಕಾರದಿಂದ ನೆರವಿನ ಭರವಸೆ
ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ 10 ಮಂದಿ ಭಾರತೀಯರು ಟರ್ಕಿಯ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ, ಇವರೆಲ್ಲರೂ ಸುರಕ್ಷಿತವಾಗಿದ್ದಾರೆ. ಈಗಾಗಲೇ 75 ಮಂದಿ ಮಾಹಿತಿ ಕೋರಿ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಟರ್ಕಿಯಲ್ಲಿ ಕಳೆದ ಎರಡು ದಿನಗಳಿಂದ ಕಾಣೆಯಾಗಿರುವ ವ್ಯಕ್ತಿಯು ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಟರ್ಕಿಗೆ ಬಿಸಿನೆಸ್ ಟ್ರಿಪ್ ಮೇಲೆ ಅವರು ಹೋಗಿದ್ದರೆನ್ನಲಾಗಿದೆ. ಆದರೆ ಅವರ ಹೆಸರನ್ನು ಸಚಿವಾಲಯ ಬಹಿರಂಗಪಡಿಸಿಲ್ಲವಾದರೂ ಆ ವ್ಯಕ್ತಿಯ ಕುಟುಂಬದ ಜೊತೆ ಸಂಪರ್ಕದಲ್ಲಿರುವುದು ತಿಳಿದುಬಂದಿದೆ. ಆತ ಬೇರೆ ರಾಜ್ಯದಿಂದ ಬಂದು ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ. ಅದೇ ಕಂಪನಿಯಿಂದ ಬ್ಯುಸಿನೆಸ್ ಟ್ರಿಪ್‌ಗಾಗಿ ಟರ್ಕಿಗೆ ತೆರಳಿದ್ದ, ಕಳೆದ ವಾರವಷ್ಟೇ ಬೆಂಗಳೂರು ಕಂಪನಿ ಪರವಾಗಿ ಪ್ರವಾಸ ಕೈಗೊಂಡಿದ್ದ ಎನ್ನಲಾಗಿದೆ. ಸದ್ಯ ಭಾರತ ಸರ್ಕಾರ (Government Of India) ಈ ವ್ಯಕ್ತಿ ಪತ್ತೆಗೆ ಮುಂದಾಗಿದೆ.