ಲಂಕಾ ವಿರುದ್ಧ ಗೆದ್ದು ಫೈನಲ್‌ಗೆ IND ಎಂಟ್ರಿ – ಫೈನಲ್‌ನಲ್ಲಿ ಭಾರತ Vs ಪಾಕ್‌ ಫೈಟ್

ಲಂಕಾ ವಿರುದ್ಧ ಗೆದ್ದು ಫೈನಲ್‌ಗೆ IND ಎಂಟ್ರಿ – ಫೈನಲ್‌ನಲ್ಲಿ ಭಾರತ Vs ಪಾಕ್‌ ಫೈಟ್

ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವಿನೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಎದುರಾಳಿಯ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಭಾರತ, ಅದ್ಭುತ ಪ್ರದರ್ಶನದ ಮೂಲಕ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ.

ಜಪಾನ್‌ನ ನಿಶ್ಶಿನ್‌ನಲ್ಲಿರುವ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಸಹನ್ ಅರಾಚ್ಚಿಗೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿರೀಕ್ಷಿತ ಆರಂಭ ಪಡೆದಿರಲಿಲ್ಲ.

ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಕೇವಲ 7 ರನ್​ಗಳಿಸಿ ಔಟಾದರೆ, ಆ ಬಳಿಕ ಬಂದ ಸಂಜು ಸ್ಯಾಮ್ಸನ್ ಕೂಡ 7 ರನ್​ ಬಾರಿಸಿ ಇನಿಂಗ್ಸ್​ ಅಂತ್ಯಗೊಳಿಸಿದರು. ಆದರೆ ಮತ್ತೊಂದೆಡೆ ವೈಭವ್ ಸೂರ್ಯವಂಶಿ 21 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 8 ಫೋರ್​ಗಳೊಂದಿಗೆ 38 ರನ್​ಗಳ ಕೊಡುಗೆ ನೀಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಶ್ರೇಯಸ್ ಅಯ್ಯರ್ 13 ಎಸೆತಗಳಲ್ಲಿ 13 ರನ್​ಗಳಿಸಲಷ್ಟೇ ಶಕ್ತರಾದರು.

ಇದನ್ನೂ ಓದಿ: ಏಷ್ಯನ್ ಗೇಮ್ಸ್‌ನಲ್ಲಿ ಬಾಂಗ್ಲಾ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟ ಪಾಕ್‌ !

ಇದಾಗ್ಯೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿ ಬಳಿಕ ಕೂಡ ಅಬ್ಬರ ಮುಂದುವರೆಸಿದ ಇಶಾನ್ 46 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 80 ರನ್ ಬಾರಿಸಿದರು. ಇಶಾನ್ ಕಿಶನ್ ಅವರ ಈ ಅರ್ಧಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 169 ರನ್​ ಕಲೆಹಾಕಿತು.

170 ರನ್​ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದರು. ಮೊದಲ ಓವರ್​ನಲ್ಲೇ ಬುಮ್ರಾ 2 ವಿಕೆಟ್ ಪಡೆದರೆ, ಆ ಬಳಿಕ ಅಕ್ಷರ್ ಪಟೇಲ್ ಮತ್ತೆರಡು ವಿಕೆಟ್ ಕಬಳಿಸಿದರು. ಇನ್ನು ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಪರಿಣಾಮ ಶ್ರೀಲಂಕಾ ತಂಡವು 6.2 ಓವರ್​ಗಳಲ್ಲಿ ಕೇವಲ 33 ರನ್​ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.ಇತ್ತ ಇಡೀ ಪಂದ್ಯದ ಹಿಡಿತ ಸಾಧಿಸಿದ ಟೀಮ್ ಇಂಡಿಯಾ ಬೌಲರ್​ಗಳು ಅಂತಿಮವಾಗಿ ಲಂಕಾ ಪಡೆಯನ್ನು 9.5 ಓವರ್​ಗಳಲ್ಲಿ ಕೇವಲ 45 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತ ತಂಡ 124 ರನ್​ಗಳ ಭರ್ಜರಿ ಜಯ ಸಾಧಿಸಿ ಫೈನಲ್​ಗೆ ಪ್ರವೇಶಿಸಿದೆ.

ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿರುವ ಟೀಮ್ ಇಂಡಿಯಾ, ಫೈನಲ್‌ನಲ್ಲಿ ಮತ್ತೊಂದು ಅದ್ಭುತ ಪ್ರದರ್ಶನ ನೀಡಲು ಸಜ್ಜಾಗಿದೆ.   ಅಭಿಮಾನಿಗಳ ಕಣ್ಣು ಸಂಪೂರ್ಣವಾಗಿ ಫೈನಲ್ ಫೈಟ್‌ನತ್ತ ನೆಟ್ಟಿದೆ. ಫೈನಲ್‌ನಲ್ಲಿ ಪಾಕ್‌ ತಂಡಕ್ಕೆ ಮಣ್ಣು ಮುಕ್ಕಿಸಿ ಟೀಂ ಇಂಡಿಯಾ ಚಿನ್ನ ಗೆಲ್ಲೋಕೆ ಸಜ್ಜಾಗಿದೆೆ.

 

Kishor KV

Leave a Reply

Your email address will not be published. Required fields are marked *