ಪತ್ನಿಯ ಶವ ಹೆಗಲ ಮೇಲೆ ಹೊತ್ತು ಸಾಗಿದ ಪತಿ – ಸಮಾಜವೇ ತಲೆತಗ್ಗಿಸುವಂತಾ ಘೋರ ದೃಶ್ಯ..!
ಮನುಷ್ಯನಿಗೆ ಒಮ್ಮೊಮ್ಮೆ ಎಂಥಾ ಪರಿಸ್ಥಿತಿ ಬರುತ್ತದೆ ಅನ್ನೋದನ್ನ ಊಹಿಸಲೂ ಅಸಾಧ್ಯ. ಮೊದಲೇ ಅಸ್ವಸ್ಥ ಹೆಂಡತಿಯನ್ನು ಆಸ್ಪತ್ರೆಗೆ ಸೇರಿಸುವ ಧಾವಂತ. ಆಸ್ಪತ್ರೆಗೆ ಕರೆದುಕೊಂಡು ಹೋದರೆ ಇಲ್ಲಿ ಆಗಲ್ಲ ಅನ್ನೋ ವೈದ್ಯರು. ಇನ್ನೊಂದು ಆಸ್ಪತ್ರೆಗೆ ಸೇರಿಸಿದರೆ ತನ್ನ ಪ್ರೀತಿಯ ಪತ್ನಿ ಉಳಿಯುತ್ತಾಳೆ ಅನ್ನೋ ನಿರೀಕ್ಷೆ. ಆದರೆ, ಪತ್ನಿಯನ್ನು ಉಳಿಸಿಕೊಳ್ಳಲು ಗಂಡನ ಕೈಲಿ ಸಾಧ್ಯವಾಗುವುದಿಲ್ಲ. ಸತ್ತ ಮೇಲಾದರೂ ಒಳ್ಳೇ ರೀತಿಯಲ್ಲಿ ಪತ್ನಿಯ ಶವವನ್ನು ಮನೆಗೆ ತೆಗೆದುಕೊಂಡು ಹೋಗಲು ಕೂಡಾ ಅಸಾಧ್ಯವಾಗಿತ್ತು. ಪತ್ನಿಯ ಶವವನ್ನು ಹೆಗಲ ಮೇಲೇರಿಸಿಕೊಂಡೇ ನಡೆಯಬೇಕಾದ ಕಠೋರ ಸ್ಥಿತಿ. ಈಗಿನ ಕಾಲದಲ್ಲೂ ಇಂಥಾದ್ದೊಂದು ಸಮಾಜವೇ ತಲೆತಗ್ಗಿಸುವಂತಹ ಘಟನೆ ನಡೆದದ್ದು ಒಡಿಶಾದ ಕೊರಾಪುಟ್ ಜಿಲ್ಲೆಯಲ್ಲಿ.
ಇದನ್ನೂ ಓದಿ: ಕಂದನಿಗೆ ಉಸಿರು ನೀಡಿ ತಾಯಿ ಕೊನೆಯುಸಿರು – ಅವಶೇಷಗಳಡಿ ಹೊಕ್ಕುಳಬಳ್ಳಿ ಸಮೇತ ಸಿಕ್ಕ ಹಸುಗೂಸು!
35 ವರ್ಷದ ವ್ಯಕ್ತಿಯೊಬ್ಬರು ಆಂಧ್ರಪ್ರದೇಶದ ಆಸ್ಪತ್ರೆಯಲ್ಲಿ ತನ್ನ ಪತ್ನಿಗೆ ಚಿಕಿತ್ಸೆ ಕೊಡಿಸಲು ಹೋಗಿದ್ದರು. ಆದರೆ, ಆಕೆ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ, ಮನೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ತಿಳಿಸುತ್ತಾರೆ. ಮೊದಲೇ ಹೆಂಡತಿ ಉಳಿಯುವುದಿಲ್ಲ ಅನ್ನೋ ಆಘಾತಕಾರಿ ಸುದ್ದಿಯನ್ನೇ ಪತಿರಾಯ ಸಹಿಸಿಕೊಂಡಿದ್ದೇ ಹೆಚ್ಚು. ಅಲ್ಲಿ ಸರಿಯಾಗಿ ಆಂಬ್ಯುಲೆನ್ಸ್ ವ್ಯವಸ್ಥೆ ಸಿಗುವುದಿಲ್ಲ. ಕೊನೆಗೂ ಸುಮಾರು 100 ಕಿ.ಮೀ ದೂರದಲ್ಲಿರುವ ಮನೆಗೆ ಕರೆದುಕೊಂಡು ಹೋಗಲು ರಿಕ್ಷಾವನ್ನು ಬಾಡಿಗೆ ಪಡೆದು ಹೊರಡುತ್ತಾನೆ. ವಿಧಿ ವಿಪರ್ಯಾಸವೆಂಬಂತೆ ದಾರಿ ಮಧ್ಯೆಯೇ ಪತ್ನಿ ಪ್ರಾಣ ಬಿಡುತ್ತಾಳೆ. ಆಗ ಆಟೋ ಚಾಲಕ ಪ್ರಯಾಣ ಮುಂದುವರಿಸಲು ನಿರಾಕರಿಸಿ ಚೆಲ್ಲೂರು ರಿಂಗ್ ರೋಡ್ನಲ್ಲೇ ಅವರನ್ನು ಇಳಿಸಿದ್ದಾನೆ. ಬೇರೆ ದಾರಿ ಕಾಣದೆ ತನ್ನ ಹೆಂಡತಿಯ ಶವವನ್ನು ಹೆಗಲ ಮೇಲೆ ಹೊತ್ತು ಮನೆಯ ದಾರಿ ಹಿಡಿಯುತ್ತಾನೆ. ಪತ್ನಿಯ ಶವವನ್ನು ಹೆಗಲ ಮೇಲೇರಿಸಿಕೊಂಡು ಬರುತ್ತಿರುವ ವ್ಯಕ್ತಿಯನ್ನು ಕಂಡು ಆಂಧ್ರಪ್ರದೇಶ ಪೊಲೀಸರು ವಿಚಾರಿಸುತ್ತಾರೆ. ಕೊನೆಗೂ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು.
2016ರಲ್ಲಿ ಒಡಿಶಾದ ಭವಾನಿಪಟ್ನಾದಲ್ಲಿ ಇಂಥದ್ದೇ ಒಂದು ಅಮಾನವೀಯ ಘಟನೆ ನಡೆದಿತ್ತು. ಪತ್ನಿಯ ಶವವನ್ನು ಸುಮಾರು 12 ಕಿ.ಮೀ ವರೆಗೆ ತನ್ನ ಭುಜದ ಮೇಲೆ ಹೊತ್ತು ವ್ಯಕ್ತಿಯೊಬ್ಬರು ನಡೆದುಕೊಂಡು ಸಾಗಿದ್ದರು. ಈಗ ಮತ್ತೊಂದು ಘಟನೆ ನಡೆದಿದ್ದು ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬುವುದನ್ನ ಈ ಎಲ್ಲಾ ಘಟನೆಗಳು ಅಣಕಿಸುವಂತಿದೆ.