ಡೆಲಿವರಿ ರೋಬೋಟ್ಗಳಿಗೂ ದಾರಿ ಬಿಡಿ – ಸ್ಪೆಷಲ್ ಗೆಸ್ಟ್ ಗಳಿಗಾಗಿ ಹೊಸ ಟ್ರಾಫಿಕ್ಸ್ ರೂಲ್ಸ್ ರೆಡಿ..!
ಈಗೇನಿದ್ದರೂ ರೋಬೋಟ್ಗಳದ್ದೇ ಹವಾ. ಇಲ್ಲಿಯವರೆಗೂ ರೋಬೋಟ್ಗಳು ಕಚೇರಿ, ಹೋಟೆಲ್, ಮನೆ ಅಂತಾ ಒಂದಿಷ್ಟು ಕೆಲಸಕ್ಕೆ ಸೀಮಿತವಾಗಿತ್ತು. ಆದರೆ ಇನ್ಮುಂದೆ ಹಾಗಿಲ್ಲ. ರೋಬೋಟ್ಗಳು ಕೂಡಾ ನಮ್ಮಂತೆಯೇ ರಸ್ತೆ ಮಧ್ಯೆ ನಡೆದಾಡಬಹುದು. ಅದರ ಬಗ್ಗೆ ಯಾರೂ ಕೇಳೋ ಹಾಗಿಲ್ಲ. ಯಾಕಂದ್ರೆ ರೋಬೋಟ್ಗಳಿಗೋಸ್ಕರ ರಸ್ತೆ ಸಂಚಾರ ನಿಯಮವನ್ನೇ ಜಪಾನ್ ದೇಶ ಪರಿಷ್ಕರಣೆ ಮಾಡಿದೆ.
ಇದನ್ನೂ ಓದಿ : ಬ್ಯಾಟ್ ಬೀಸೋಕೂ ಸೈ.. ಸ್ಟೇರಿಂಗ್ ಹಿಡಿಯೋಕೂ ಜೈ – ಧೋನಿಯ ಟ್ರ್ಯಾಕ್ಟರ್ ರೈಡಿಂಗ್ ಹೇಗಿದೆ ನೋಡಿ!?
ಹೌದು. ಜಪಾನ್ ದೇಶವೂ ಡೆಲಿವರಿ ರೋಬೋಟ್ಗಳನ್ನ ರಸ್ತೆಗೆ ಇಳಿಸುವ ಮೂಲಕ ಸಾರ್ವಜನಿಕ ಜೀವನಕ್ಕೆ ರೋಬೋಟಿಕ್ಸ್ ತರುವ ಬಗ್ಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಜಪಾನ್ ತನ್ನ ರಸ್ತೆ ಸಂಚಾರ ನಿಯಮವನ್ನ ಪರಿಷ್ಕರಿಸಿದ್ದು ಡೆಲಿವರಿ ರೋಬೋಟ್ಗಳು ಮಾನವರಂತೆಯೇ ಮತ್ತು ಸಂಚಾರ ನಿಯಮದಂತೆಯೇ ರಸ್ತೆಗಳನ್ನ ದಾಟಲು ಅನುವು ಮಾಡಿಕೊಟ್ಟಿದೆ.
ಈಗಾಗಲೇ ಅಲ್ಲಿ ರೋಬೋಟ್ಗಳ ಮೂಲಕ ಆಹಾರ ಮತ್ತು ದೈನಂದಿನ ಅಗತ್ಯ ವಸ್ತುಗಳ ವಿತರಣೆಯ ಪ್ರಯೋಗಗಳು ನಡೆದಿವೆ. ಜಪಾನ್ ಕೈಗಾರಿಕಾ ಸಚಿವಾಲಯದ ಪ್ರಕಾರ ದೇಶದ 47 ಪ್ರಿಫೆಕ್ಚರ್ ಗಳಲ್ಲಿ ಐದರಲ್ಲಿ ಸ್ವಯಂಚಾಲಿತ ರೋಬೋಟ್ಗಳ ಪರೀಕ್ಷೆ ನಡೆದಿದೆ.
ಭವಿಷ್ಯದಲ್ಲಿ ಜನ ಸಂಖ್ಯೆ ಕಡಿಮೆಯಾಗುತ್ತಿರುವ ಪ್ರದೇಶಗಳಲ್ಲಿ, ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆಯನ್ನ ನೀಗಿಸುವಲ್ಲಿ ಇದು ಸಹಕಾರಿಯಾಗಬಹುದು ಎಂದು ಕೈಗಾರಿಕಾ ಸಚಿವಾಲಯವು ಹೇಳಿದೆ. ಜಪಾನ್ ವರದಿಗಳ ಪ್ರಕಾರ ರೋಬೋಟ್ಗಳು ಪ್ರಮುಖ ಬೀದಿಗಳಲ್ಲಿ ವಯಸ್ಕರ ನಡಿಗೆಯ ವೇಗಕ್ಕೆ ಸಮಾನವಾಗಿ ಸಂಚರಿಸುವುದು ಕಂಡು ಬಂದಿದೆ ಮತ್ತು ಒಂದು ಹ್ಯಾಂಬರ್ಗರ್ ಅನ್ನು ಅಂಗಡಿಯಿಂದ 500 ಮೀಟರ್ ದೂರದಲ್ಲಿರುವ ಕಚೇರಿಗೆ ತಲುಪಿಸಿತ್ತು ಎಂದು ವರದಿಯಾಗಿದೆ.
ಎಲೆಕ್ಟ್ರಿಕ್ ರೋಬೋಟ್ಗಳು ರಿಮೋಟ್ನಲ್ಲಿ ಕಾರ್ಯನಿರ್ವಹಿಸಲಿದ್ದು ಪಾದಚಾರಿ ಮಾರ್ಗಗಳ ನಕ್ಷೆಗಳ ಡೇಟಾವನ್ನ ಅವುಗಳು ಹೊಂದಿರುತ್ತವೆ. ಪ್ರತಿಯೊಂದು ರೋಬೋಟ್ಗಳು ಆರು ಕ್ಯಾಮರಾಗಳನ್ನ ಹೊಂದಿವೆ.
ರಿಮೋಟ್ ಕಂಟ್ರೋಲ್ ಮೂಲಕ ಈ ರೋಬೋಟ್ ಗಳನ್ನ ನಿಯಂತ್ರಣ ಮಾಡಲಾಗುತ್ತದೆ. ಈ ರೋಬೋಟ್ ಗಳು ಕ್ಯಾಮರಾಗಳ ಸಹಾಯದಿಂದ ಮಾರ್ಗ ಮಧ್ಯೆ ಸಿಗೋ ಪಾದಚಾರಿಗಳನ್ನ ಮತ್ತು ಯಾವುದೇ ಅಡೆತಡೆಗಳನ್ನ ಪತ್ತೆ ಹಚ್ಚುತ್ತದೆ. ಜೊತೆಗೆ ಟ್ರಾಫಿಕ್ ಲೈಟ್ ಬಣ್ಣಗಳನ್ನ ಗುರುತಿಸುತ್ತದೆ. ಹಾಗೆಯೇ ರೋಬೋಟ್ಗಳು ತಮ್ಮ ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ ಕಣ್ಣುಗಳ ಮೂಲಕ ಎಡ ಮತ್ತು ಬಲಕ್ಕೆ ತಿರುಗುವ ಸಾಮರ್ಥ್ಯವನ್ನ ಕೂಡಾ ಹೊಂದಿದೆ.