ಶಬರಿಮಲೆಯಲ್ಲಿ ಬಂಗಾರದ ಕಿರೀಟವೇ ನಾಪತ್ತೆ- ನಕಲಿ ಕಿರೀಟ ಇಟ್ಟು ಮೋಸ!

ಶಬರಿಮಲೆಯ ಅಯ್ಯಪ್ಪ ದೇವಸ್ಥಾನದಲ್ಲಿ ಮತ್ತೊಂದು ಕಳ್ಳತನದ ಆರೋಪ ಕೇಳಿಬಂದಿದೆ. ದೇವರಿಗೆ ಅರ್ಪಿಸಿದ ಬಂಗಾರದ ಕಿರೀಟ ನಾಪತ್ತೆಯಾಗಿದೆ. ಅಸಲಿ ಕಿರೀಟದ ಜಾಗದಲ್ಲಿ ನಕಲಿ ಕಿರೀಟ ಪತ್ತೆಯಾಗಿದ್ದು ಆತಂಕ ಸೃಷ್ಟಿಸಿದೆ.
ಇದನ್ನೂ ಓದಿ:ಲಾರಿಗೆ ಕಾರು ಡಿಕ್ಕಿ, ಅಪಘಾತದಲ್ಲಿ ನಾಲ್ವರು ಸಾವು – ಜಾರ್ಖಂಡ್ ಸಚಿವೆಯ ಪುತ್ರಿ ಬಲಿ
ಕೇರಳ ಹೈಕೋರ್ಟ್ ಆದೇಶದಂತೆ ನಡೆದ ಲೆಕ್ಕಪರಿಶೋಧನೆಯಲ್ಲಿ ಅಯ್ಯಪ್ಪನ ಸನ್ನಿಧಿಯಲ್ಲಿ ಭಾರಿ ವಂಚನೆ ಬಯಲಾಗಿದೆ. ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಭಂಡಾರದಿಂದ ದೇವರಿಗೆ ಅರ್ಪಿಸಲಾಗಿದ್ದ ಬಂಗಾರದ ಕಿರೀಟ ನಾಪತ್ತೆಯಾಗಿದೆ. ಕಳುವಾದ ಅಸಲಿ ಕಿರೀಟದ ಜಾಗದಲ್ಲಿ ಅಷ್ಟೇ ಗಾತ್ರ ಮತ್ತು ವಿನ್ಯಾಸ ಹೊಂದಿರುವ ನಕಲಿ ಕಿರೀಟವನ್ನು ಇಡಲಾಗಿದೆ. ಈ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಶಬರಿಮಲೆಯ ದೇವಸ್ಥಾನದ ಪವಿತ್ರ ಆಭರಣಗಳ (ತಿರುವಾಭರಣಂ) ಪಟ್ಟಿಯನ್ನು ಪರಿಶೀಲಿಸಲು ಕೇರಳ ಹೈಕೋರ್ಟ್ ನಿರ್ದೇಶನದಂತೆ ಆಮಿಕ್ಯೂಸ್ ಕ್ಯೂರಿ ಜಸ್ಟಿಸ್ ಕೆ.ಟಿ. ಶಂಕರನ್ ಅವರ ನೇತೃತ್ವದಲ್ಲಿ ಲೆಕ್ಕಪರಿಶೋಧನೆ ನಡೆಸಲಾಗುತ್ತಿತ್ತು. ಈ ಸೆಪ್ಟೆಂಬರ್ನಲ್ಲಿ ಸನ್ನಿಧಾನದ ಭಂಡಾರವನ್ನು ತಪಾಸಣೆ ಮಾಡುವಾಗ ಈ ಭಾರಿ ವಂಚನೆ ಬಯಲಾಗಿದೆ.
ಅಸಲಿ ಕಿರೀಟವು 55.72 ಪವನ್ (ಸುಮಾರು 445.78 ಗ್ರಾಂ) ತೂಕ ಹೊಂದಿದ್ದರೆ, ಪ್ರಸ್ತುತ ಭಂಡಾರದಲ್ಲಿರುವ ನಕಲಿ ಕಿರೀಟವು ಕೇವಲ 240 ಗ್ರಾಂ ತೂಗುತ್ತಿದೆ. ಅಂದರೆ ಅಸಲಿ ಕಿರೀಟಕ್ಕಿಂತ ಪ್ರಸ್ತುತ ಇರುವ ಕಿರೀಟವು ಸುಮಾರು 206 ಗ್ರಾಂ ಕಮ್ಮಿ ತೂಕ ಹೊಂದಿದೆ. ಕಿರೀಟ ಸವೆದು ತೂಕ ಕಡಿಮೆಯಾಗಿಲ್ಲ ಅಥವಾ ಅಳತೆಯಲ್ಲಿ ತಪ್ಪಾಗಿಲ್ಲ, ಅಸಲಿ ಕಿರೀಟವೇ ನಾಪತ್ತೆಯಾಗಿದೆ. ನಕಲಿ ಕಿರೀಟವನ್ನು ತಂದಿಡಲಾಗಿದೆ ಎಂದು ತನಿಖಾಧಿಕಾರಿಗಳು ಬಯಲು ಮಾಡಿದ್ದಾರೆ.
ಈ ಬಂಗಾರದ ಕಿರೀಟವನ್ನು ಆಗಸ್ಟ್ 17, 2012 ರಂದು (ಚಿಂಗಂ ಮಾಸದ ಪೂಜೆಯ ಸಂದರ್ಭದಲ್ಲಿ) ಅಯ್ಯಪ್ಪ ಸ್ವಾಮಿಗೆ ಅರ್ಪಿಸಲಾಗಿತ್ತು. ತಮಿಳುನಾಡಿನ ಚಾರ್ಟರ್ಡ್ ಅಕೌಂಟೆಂಟ್ಗಳ ಗುಂಪೊಂದು ಈ ಅಪರೂಪದ ಕಿರೀಟವನ್ನು ದೇವಸ್ಥಾನಕ್ಕೆ ಕಾಣಿಕೆಯಾಗಿ ನೀಡಿತ್ತು. ದೇವಸ್ಥಾನದ ಆಡಳಿತ ಮಂಡಳಿಯಾದ ತಿರುವಾಂಕೂರು ದೇವಸ್ವಂ ಬೋರ್ಡ್ ಕಾಣಿಕೆ ನೀಡಿದ ಭಕ್ತರಿಗೆ ಅಧಿಕೃತ ರಸೀದಿಯನ್ನೂ ನೀಡಿತ್ತು. ಸಾಮಾನ್ಯ ನಿಯಮಗಳ ಪ್ರಕಾರ, ದೇವಸ್ಥಾನಕ್ಕೆ ಬರುವ ಮೌಲ್ಯಯುತ ಕಾಣಿಕೆಗಳನ್ನು ಮೊದಲು ಸನ್ನಿಧಾನದ ಭಂಡಾರದಲ್ಲಿ ಇರಿಸಲಾಗುತ್ತದೆ, ನಂತರ ಅವುಗಳನ್ನು ಹೆಚ್ಚಿನ ಭದ್ರತೆ ಇರುವ ಕೇಂದ್ರೀಯ ಭಂಡಾರಕ್ಕೆ ವರ್ಗಾಯಿಸಬೇಕು. ಆದರೆ, ಲೆಕ್ಕಪರಿಶೋಧನೆ ವೇಳೆ ಪರಿಶೀಲಿಸಿದ ದಾಖಲೆಗಳ ಪ್ರಕಾರ, ಈ ಕಿರೀಟವನ್ನು ಎಂದಿಗೂ ಭಂಡಾರಕ್ಕೆ ವರ್ಗಾಯಿಸಲೇ ಇಲ್ಲ, ಬದಲಿಗೆ ಸನ್ನಿಧಾನದಲ್ಲೇ ಇರಿಸಲಾಗಿತ್ತು. ಈ ಗಂಭೀರ ಲೋಪವು ಈಗ ತನಿಖೆಯ ಮುಖ್ಯ ವಸ್ತುವಾಗಿದೆ. ಸನ್ನಿಧಾನದ ಭಂಡಾರದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕಣ್ಣಾವಲು ಇಲ್ಲದಿರುವುದು ಕಳ್ಳರಿಗೆ ಅನುಕೂಲಕರವಾಗಿ ಪರಿಣಮಿಸಿದೆ.

ನೋಡಿರಿ

