ಜಪಾನ್ ವಿರುದ್ದ ಗೆದ್ದ ಟೀಮ್ ಇಂಡಿಯಾ – 5 ಓವರ್ ಪಂದ್ಯಗಳಲ್ಲಿ ರೋಚಕ ಜಯ

ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ರೋಚಕ ಪಂದ್ಯಕ್ಕೆ ಭಾರತ ಮತ್ತು ಜಪಾನ್ ತಂಡಗಳು ಸಾಕ್ಷಿಯಾಗಿವೆ. ಹಾಲಿ ಟಿ20 ವಿಶ್ವ ಚಾಂಪಿಯನ್ ಭಾರತ ಮತ್ತು ಜಪಾನ್ ಪುರುಷರ ಕ್ರಿಕೆಟ್ ತಂಡಗಳು ಇತಿಹಾಸದಲ್ಲೇ ಮೊದಲ ಬಾರಿಗೆ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ಜಪಾನ್ ವಿರುದ್ಧ ಗೆಲುವು ಸಾಧಿಸಿದೆ.
ಇದನ್ನೂ ಓದಿ:ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್ನಲ್ಲಿ ಚಿನ್ನ ಗೆದ್ದ ಭಾರತ – ದಾಖಲೆ ಬರೆದ ಕೌರ್ ಪಡೆ
ಭಾರತ ಮತ್ತು ಜಪಾನ್ ನಡುವೆ ನಡೆದ ಟಿ20 ಪಂದ್ಯದಲ್ಲಿ ಭಾರತ ಗೆದ್ದಿದೆ. ಜಪಾನ್ನ ಸನೋ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯ 5 ಓವರ್ಗಳಿಗಷ್ಟೇ ಸೀಮಿತವಾಗಿತ್ತು. ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿರಾಶೆ ಮೂಡಿಸಿದ್ದು ಸುಳ್ಳಲ್ಲ. ಜಪಾನ್ ವಿರುದ್ಧ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ಶೂನ್ಯಕ್ಕೆ ಔಟಾದರು. ಎರಡನೇ ಓವರ್ನಲ್ಲಿ 9 ರನ್ ಗಳಿಸಿ ಸಂಜು ಸ್ಯಾಮ್ಸನ್ ಔಟಾದರು. ಮೂರನೇ ಓವರ್ನಲ್ಲಿ 3 ರನ್ ಗಳಿಸಿ ಇಶಾನ್ ಕಿಶನ್ ಔಟಾದರು. ನಾಯಕ ಶ್ರೇಯಸ್ ಅಯ್ಯರ್ 12 ಎಸೆತಗಳಲ್ಲಿ 16 ರನ್ ಗಳಿಸಿದರು. ತಿಲಕ್ ವರ್ಮಾ 1 ರನ್, ಶಿವಂ ದುಬೆ ಒಂದು ಎಸೆತವನ್ನು ಎದುರಿಸಿದರೂ ಯಾವುದೇ ರನ್ ಗಳಿಸಿರಲಿಲ್ಲ. ಅಂತಿಮವಾಗಿ ಟೀಮ್ ಇಂಡಿಯಾ ನಿಗದಿತ 5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಕೇವಲ 32 ರನ್ಗಳಿಸಿ ನಿರಾಶೆ ಮೂಡಿಸಿತು.
33 ರನ್ಗಳ ಗುರಿ ಬೆನ್ನಟ್ಟಿದ ಜಪಾನ್ 30 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಜಪಾನ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಲಾಚ್ಲಾನ್ ಯಮಾಮೊಟೊ-ಲೇಕ್ 1 ರನ್ಗಳಿಸಿ ಔಟಾದರೆ, ಇಬ್ರಾಹಿಂ ಟಕಾಝುಕಿಯಾ 3 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ಕೆಂಡೆಲ್ ಕಡೋವಾಕಿ-ಫ್ಲೆಮಿಂಗ್ 12 ರನ್ ಗಳಿಸಿದರು. ಜಪಾನ್ ತಂಡಕ್ಕೆ ಕೊನೆಯ ಓವರ್ನಲ್ಲಿ 8 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ದಾಳಿಗಿಳಿದ ಅಕ್ಷರ್ ಪಟೇಲ್ 6 ಎಸೆತಗಳಲ್ಲಿ ನೀಡಿದ್ದು ಕೇವಲ 5 ರನ್ಗಳು ಮಾತ್ರ. ಈ ಮೂಲಕ ಟೀಮ್ ಇಂಡಿಯಾ 2 ರನ್ಗಳ ರೋಚಕ ಜಯ ಸಾಧಿಸಿದೆ.

ನೋಡಿರಿ

