ಕಿಚ್ಚನ ಕ್ಲಾಸ್ಗೂ ಜಗ್ಗದ ಮಂಜ! – ವೈಷ್ಣವಿ ಜೊತೆ ಮತ್ತೆ ರಂಪಾಟ

‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಮಂಜನ ವರ್ತನೆ ಕುರಿತು ಖಡಕ್ ಎಚ್ಚರಿಕೆ ನೀಡಿದ್ದರು. ಆದರೆ ಆ ಪಂಚಾಯಿತಿಯ ಬೆನ್ನಲ್ಲೇ ಮಂಜ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಸುದೀಪ್ ಕ್ಲಾಸ್ ತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಬಿಗ್ಬಾಸ್ ಮನೆಯೊಳಗೆ ಮಂಜ ಮತ್ತು ವೈಷ್ಣವಿ ಕೌಂಡಿನ್ಯ ನಡುವೆ ಮಾತಿನ ಚಕಮಕಿ ನಡೆದಿದೆ.
ಕಳೆದ ವಾರ ಸೌಂದರ್ಯ ಶೆಟ್ಟಿ ಜೊತೆಗಿನ ಜಗಳದಲ್ಲಿ ಮಂಜ ಬಳಸಿದ್ದ ಕಠಿಣ ಪದಗಳ ಬಗ್ಗೆ ಸುದೀಪ್ ವಾರಾಂತ್ಯದ ಸಂಚಿಕೆಯಲ್ಲಿ ಪ್ರಶ್ನಿಸಿದ್ದರು. ಮಂಜನ ವರ್ತನೆ ಸರಿಯಲ್ಲ ಎಂದು ತಿಳಿಸಿ, ಮಾತಿನ ಮೇಲೆ ಹಿಡಿತ ಇರಲಿ ಎಂಬ ರೀತಿಯಲ್ಲಿ ಎಚ್ಚರಿಕೆ ನೀಡಿದ್ದರು. ಆದರೆ ಇದೀಗ ನಡೆದ ಮತ್ತೊಂದು ಘಟನೆ ಮಂಜನ ವರ್ತನೆ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ.
ಈ ಬಾರಿ ಜಗಳಕ್ಕೆ ಕಾರಣವಾಗಿದ್ದು ಊಟದಲ್ಲಿದ್ದ ಚಿಕನ್ ಪೀಸ್. ತಡವಾಗಿ ಊಟಕ್ಕೆ ಬಂದಿದ್ದರಿಂದ ಮಂಜನಿಗೆ ಚಿಕನ್ ಸಿಗಲಿಲ್ಲ ಎನ್ನಲಾಗಿದ್ದು, ಇದೇ ವಿಚಾರದಲ್ಲಿ ಅವರು ಕೋಪಗೊಂಡಿದ್ದಾರೆ. ಬಳಿಕ ವೈಷ್ಣವಿ ಕೌಂಡಿನ್ಯ ಜೊತೆ ಮಾತಿನ ಸಂಘರ್ಷ ತೀವ್ರಗೊಂಡಿದೆ.
ವೈಷ್ಣವಿಯನ್ನು ಉದ್ದೇಶಿಸಿ ಮಂಜ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ. ಇದಕ್ಕೆ ಸುಮ್ಮನಾಗದ ವೈಷ್ಣವಿ ಕೂಡ ಮಂಜನ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮಂಜನ ವರ್ತನೆಯನ್ನೇ ಪ್ರಶ್ನಿಸುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.
ಸುದೀಪ್ ಪಂಚಾಯಿತಿ ಬಳಿಕವೂ ಮನೆಯೊಳಗಿನ ಈ ಜಗಳ ಮುಂದುವರಿದಿರುವುದು ಇದೀಗ ಬಿಗ್ಬಾಸ್ ಪ್ರೇಕ್ಷಕರ ಗಮನ ಸೆಳೆದಿದೆ. ಮುಂದಿನ ಸಂಚಿಕೆಯಲ್ಲಿ ಈ ಘಟನೆಗೆ ಬಿಗ್ಬಾಸ್ ಅಥವಾ ಕಿಚ್ಚ ಸುದೀಪ್ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ನೋಡಿರಿ

