ಮಾಲೀಕನ ಕುತ್ತಿಗೆ ಕಚ್ಚಿ ಕೊಂದ ಒಂಟೆ! – ಕಾರಣ ಕೇಳಿದ್ರೆ ಶಾಕ್ ಆಗೋದು ಪಕ್ಕಾ
ಕಾಡು ಪ್ರಾಣಿಗಳು ನಾಡಿಗೆ ನುಗ್ಗಿ ಮನುಷ್ಯರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿವೆ. ಅಷ್ಟೇ ಯಾಕೆ ಸಾಕು ಪ್ರಾಣಿಗಳು ಕೂಡ ಒಮ್ಮೊಮ್ಮೆ ದಾಳಿ ಮಾಡುತ್ತವೆ. ಪಾಕಿಸ್ತಾನದಲ್ಲಿ ನಾಯಿಯೊಂದು ಮಾಲೀಕನ ಮೇಲೆ ಅಟ್ಯಾಕ್ ಮಾಡಿತ್ತು. ಬಳಿಕ ಆತ ನಾಯಿಯನ್ನು ಕೋರ್ಟ್ ಮೆಟ್ಟಿಲೇರಿಸಿದ್ದ. ಇದಾದ ಬಳಿಕ ಬಿಟ್ ಬುಲ್, ರಾಟ್ ವಿಲ್ಲರ್ ನಾಯಿ ತಮ್ಮ ಮಾಲೀಕರನ್ನು ಕೊಂದ ಬಗ್ಗೆಯೂ ಸುದ್ದಿಯಾಗಿತ್ತು. ಇದೀಗ ರಾಜಸ್ಥಾನದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಒಂಟೆಯೊಂದು ಮಾಲೀಕನನ್ನೇ ಕಚ್ಚಿಕೊಂದಿದೆ.
ಇದನ್ನೂ ಓದಿ: ‘ಕಳ್ಳತನ, ಹಲ್ಲೆ, ಅಸ್ವಾಭಾವಿಕ ಲೈಂಗಿಕ ಕ್ರಿಯೆ’ – ಆದಿಲ್ ಬಂಧನದ ಬೆನ್ನಲ್ಲೇ ಪ್ರಜ್ಞೆ ತಪ್ಪಿದ್ದೇಕೆ ರಾಖಿ ಸಾವಂತ್..!?
ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ಸೋಮವಾರ ಸಂಜೆ ಒಂಟೆಯ ಮಾಲೀಕ ಸೋಹನ್ ರಾಮ್ ನಾಯಕ್ ಮತ್ತು ಅವರ ಮಗ ಮೋಹನ್ ರಾಮ್ ಒಂಟೆಯನ್ನು ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಒಂಟೆ ಹಗ್ಗ ಬಿಡಿಸಿಕೊಂಡು ಮತ್ತೊಂದು ಒಂಟೆಯ ಹಿಂದೆ ಓಡಿದೆ. ಇದನ್ನು ಕಂಡ ಸೋಹನ್ ರಾಮ್ ಹಿಡಿಯಲು ಒಂಟೆ ಹಿಂದೆ ಓಡಿದ್ದಾರೆ. ಬಳಿಕ ಒಂಟೆಯನ್ನು ಎಳೆದುಕೊಂಡ ಹೊಲದ ಕಡೆ ಬಂದಿದ್ದಾರೆ. ಈ ವೇಳೆ ಕೋಪಗೊಂಡ ಒಂಟೆ ಮಾಲೀಕನ ಕತ್ತನ್ನು ಕಚ್ಚಿಕೊಂಡಿದೆ. ಅಲ್ಲಿಯೇ ಇದ್ದ ಆತನ ಮಗ ಹಾಗೂ ಮತ್ತಿತರರು ಒಂಟೆಯಿಂದ ಮಾಲೀಕನನ್ನು ಬಿಡಿಸಲು ಯತ್ನಿಸಿದ್ದಾರೆ. ಆದರೆ ಒಂಟೆ ಮಾಲೀಕನ ಕುತ್ತಿಗೆಯನ್ನು ಬಿಗಿಯಾಗಿ ಕಚ್ಚಿದೆ. ಇದರಿಂದಾಗಿ ತೀವ್ರ ರಕ್ತಸ್ತ್ರಾವವಾಗಿ ಸೋಹನ್ ರಾಮ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಾಲೀಕನ ಬಲಿ ಪಡೆದ ಘಟನೆಯಿಂದ ಜನರು ಉದ್ರಿಕ್ತಗೊಂಡಿದ್ದಾರೆ. ಅಲ್ಲದೇ ಒಂಟೆಗೆ ದೊಣ್ಣೆಗಳಿಂದ ಮನಸೋಇಚ್ಛೆ ಹೊಡೆದಿದ್ದಾರೆ. ಇದರಿಂದಾಗಿ ಒಂಟೆಯೂ ಗಂಭೀರವಾಗಿ ಗಾಯಗೊಂಡು ಮೃತಪಟ್ಟದೆ ಎನ್ನಲಾಗಿದೆ.
ಮಾಲೀಕ ಸೋಹನ್ ರಾಮ್ ಕಳೆದ 20 ದಿನಗಳ ಹಿಂದೆಯಷ್ಟೇ ಈ ಒಂಟೆಯನ್ನು ಖರೀದಿಸಿದ್ದರು. ಅಂದಿನಿಂದಲೇ ಒಂಟೆ ರೋಷದಿಂದ ವರ್ತಿಸುತ್ತಿತ್ತು. ಹೊಸ ಜಾಗ, ಹೊಸ ಜನರನ್ನು ನೋಡಿ ಈ ರೀತಿ ವರ್ತಿಸುತ್ತಿದೆ. ದಿನಕಳೆದಂತೆ ಇದು ಸರಿಹೋಗುತ್ತೆ ಅಂತ ಮಾಲೀಕ ಸೋಹನ್ ರಾಮ್ ತಿಳಿಸಿದ್ದರು. ಆದರೆ ಈ ಒಂಟೆ ಮೇಲೆ ಕರುಣೆ ತೋರಿದ ಮಾಲೀಕನನ್ನೇ ಬಲಿ ಪಡೆದಿದೆ.
ಒಂಟೆಯನ್ನು ಹೊಡೆದು ಹತ್ಯೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.