ಹಿಮ್ಮಡಿಗಳು ಬಿರುಕು ಬಿಟ್ಟಿದ್ಯಾ? – ಒಡೆಯುವ ಹಿಮ್ಮಡಿ ಸಮಸ್ಯೆಗೆ ಇಲ್ಲಿದೆ ಪರಿಹಾರ!

ಸೌಂದರ್ಯ ಎನ್ನುವುದು ಮುಖಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಮುಖದೊಂದಿಗೆ, ಕೈಕಾಲುಗಳು ಹಾಗೂ ಪಾದಗಳು ಕೂಡ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ. ಆದರೆ, ಹೆಚ್ಚಿನವರು ಮುಖದ ಅಂದಕ್ಕೆ ಮಾತ್ರ ಹೆಚ್ಚನ ಗಮನಕೊಟ್ಟು, ಪಾದಗಳ ಆರೈಕೆ ಬಗ್ಗೆ ಗಮನ ಕೊಡುವುದಿಲ್ಲ. ಹೀಗಾಗಿಯೇ ಸಾಕಷ್ಟು ಮಂದಿ ಹಿಮ್ಮಡಿ ಒಡೆಯುವ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಿಮ್ಮಡಿ ಒಡೆಯುವುದು, ಕಾಲಿನ ಅಂದವನ್ನು ಹಾಳು ಮಾಡುತ್ತದೆ.
ಇದನ್ನೂ ಓದಿ: ಅಜೀರ್ಣ ಸಮಸ್ಯೆಗೆ ಅಡುಗೆ ಮನೆಯಲ್ಲಿದೆ ಪರಿಹಾರ! – ನಿತ್ಯ ಇಂಗು ಸೇವಿಸೋದ್ರಿಂದ ಎಷ್ಟೊಂದು ಲಾಭ!
ದೇಹದಲ್ಲಿನ ತೇವಾಂಶದ ಕೊರತೆ, ಬದಲಾಗುತ್ತಿರುವ ಹವಾಮಾನ, ಸದಾ ನಿಂತುಕೊಂಡು ಕೆಲಸ ಮಾಡುವುದು ಮತ್ತು ಸರಿಯಾದ ಪಾದರಕ್ಷೆಗಳನ್ನ ಬಳಸದಿರುವುದು – ಹೀಗೆ ವಿವಿಧ ಕಾರಣಗಳಿಂದ ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯೆಂದರೆ ಹಿಮ್ಮಡಿ ಒಡೆಯುವುದು ಅಥವಾ ಸೀಳುವುದು. ಇದು ಕೇವಲ ಸೌಂದರ್ಯದ ಸಮಸ್ಯೆಯಷ್ಟೇ ಅಲ್ಲದೆ, ಕೆಲವು ಬಾರಿ ತೀವ್ರ ನೋವು ಮತ್ತು ರಕ್ತಸ್ರಾವಕ್ಕೂ ಕಾರಣವಾಗಬಹುದು. ಆದರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ದುಬಾರಿ ಬ್ಯೂಟಿ ಪ್ರಾಡಕ್ಟ್ಗಳ ಮೊರೆ ಹೋಗಬೇಕಿಲ್ಲ. ಪಾದಗಳಿಗೆ ಸೂಕ್ತ ಪೋಷಣೆ ಮತ್ತು ತೇವಾಂಶವನ್ನ ನೀಡುವುದರ ಮೂಲಕ ಮನೆಯಲ್ಲೇ ಸಿಗುವ ನೈಸರ್ಗಿಕ ವಸ್ತುಗಳನ್ನ ಬಳಸಿ ಈ ಸಮಸ್ಯೆಯನ್ನ ಸುಲಭವಾಗಿ ನಿವಾರಿಸಿಕೊಳ್ಳಬಹುದು. ಆ ಪರಿಣಾಮಕಾರಿ ನೈಸರ್ಗಿಕ ಮನೆಮದ್ದುಗಳು ಇಲ್ಲಿವೆ..
ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಯ ಮಸಾಜ್: ರಾತ್ರಿ ಮಲಗುವ ಮುನ್ನ ನಿಮ್ಮ ಪಾದಗಳನ್ನ ಶುದ್ಧ ನೀರಿನಿಂದ ತೊಳೆದು ಸಂಪೂರ್ಣವಾಗಿ ಒಣಗಿಸಿ. ನಂತರ ಉಗುರುಬೆಚ್ಚಗಿನ ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನ ಒಡೆದ ಹಿಮ್ಮಡಿಗಳ ಮೇಲೆ ಹಚ್ಚಿ ಹಗುರವಾಗಿ ಮಸಾಜ್ ಮಾಡಿ. ಎಣ್ಣೆ ಹಚ್ಚಿದ ನಂತರ ಹತ್ತಿಯ ಸಾಕ್ಸ್ ಧರಿಸಿ ಮಲಗುವುದರಿಂದ ಪಾದದ ಚರ್ಮಕ್ಕೆ ಉತ್ತಮ ತೇವಾಂಶ ಸಿಗುತ್ತದೆ ಮತ್ತು ಗಾಯ ಬೇಗನೆ ವಾಸಿಯಾಗುತ್ತದೆ.
ವ್ಯಾಸಲಿನ್ ಮತ್ತು ನಿಂಬೆ ರಸದ ಮಿಶ್ರಣ: ಒಂದು ಚಮಚ ವ್ಯಾಸಲಿನ್ಗೆ 4 ರಿಂದ 5 ಹನಿ ನಿಂಬೆ ರಸವನ್ನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಲೇಪನವನ್ನ ಒಡೆದ ಹಿಮ್ಮಡಿಗಳಿಗೆ ಹಚ್ಚಿ. ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಸಿಡ್ ಪಾದದಲ್ಲಿರುವ ಮೃತ ಚರ್ಮದ ಕೋಶಗಳನ್ನ ತೆರವುಗೊಳಿಸಲು ನೆರವಾದರೆ, ವ್ಯಾಸಲಿನ್ ಚರ್ಮದಲ್ಲಿನ ತೇವಾಂಶವನ್ನ ಕಾಯ್ದಿರಿಸಲು ಸಹಾಯ ಮಾಡುತ್ತದೆ.
ಬಾಳೆಹಣ್ಣು ಮತ್ತು ಜೇನುತುಪ್ಪದ ಫೇಸ್/ಫುಟ್ ಪ್ಯಾಕ್: ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನ ಪೇಸ್ಟ್ ಮಾಡಿ, ಅದಕ್ಕೆ ಒಂದು ಚಮಚ ಜೇನುತುಪ್ಪವನ್ನ ಬೆರೆಸಿ. ಈ ಪೇಸ್ಟ್ಅನ್ನ ಹಿಮ್ಮಡಿಗಳ ಮೇಲೆ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಬಿಡಿ. ನಂತರ ಉಗುರುಬೆಚ್ಚಗಿನ ನೀರಿನಿಂದ ಪಾದಗಳನ್ನ ತೊಳೆದುಕೊಳ್ಳಿ. ಇದು ಪಾದದ ಚರ್ಮಕ್ಕೆ ಆಳವಾದ ಪೋಷಣೆ ಒದಗಿಸಿ ಮೃದುಗೊಳಿಸುತ್ತದೆ. ನಿಯಮಿತವಾಗಿ ಈ ಸರಳ ಉಪಾಯಗಳನ್ನ ಪಾಲಿಸುವುದರಿಂದ ನಿಮ್ಮ ಹಿಮ್ಮಡಿಗಳನ್ನ ಸದಾ ನಯವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು.
ನೈಸರ್ಗಿಕ ಆಲೋವೆರಾ ಜೆಲ್: ಅಲೋವೆರಾದಲ್ಲಿ ಆಂಟಿ-ಬ್ಯಾಕ್ಟೀರಿಯಲ್ ಮತ್ತು ಹೀಲಿಂಗ್ ಗುಣಲಕ್ಷಣಗಳಿರುತ್ತವೆ. ಪಾದಗಳನ್ನ ಶುಚಿಗೊಳಿಸಿದ ನಂತರ ತಾಜಾ ಅಲೋವೆರಾ ಜೆಲ್ ಅನ್ನು ಹಿಮ್ಮಡಿಗೆ ಹಚ್ಚುವುದರಿಂದ ಚರ್ಮದ ಸೀಳುಗಳು ಬೇಗನೆ ಭರ್ತಿಯಾಗುತ್ತವೆ ಹಾಗೂ ಉರಿ ಅಥವಾ ಕಿರಿಕಿರಿಯನ್ನ ಶಮನಗೊಳಿಸುತ್ತದೆ.
ಕಲ್ಲುಪ್ಪು ಮತ್ತು ಉಗುರುಬೆಚ್ಚಗಿನ ನೀರು: ಒಂದು ಟಬ್ ಅಥವಾ ಬಕೆಟ್ನಲ್ಲಿ ಉಗುರುಬೆಚ್ಚಗಿನ ನೀರನ್ನ ತೆಗೆದುಕೊಂಡು ಅದಕ್ಕೆ 2 ಚಮಚ ಕಲ್ಲುಪ್ಪು ಹಾಕಿ. ಈ ನೀರಿನಲ್ಲಿ ನಿಮ್ಮ ಪಾದಗಳನ್ನು 15 ನಿಮಿಷಗಳ ಕಾಲ ನೆನೆಸಿಡಿ. ನಂತರ ಪ್ಯೂಮಿಸ್ ಕಲ್ಲಿನಿಂದ ಹಗುರವಾಗಿ ಉಜ್ಜಿ ಮೃತ ಚರ್ಮವನ್ನ ತೆಗೆಯಿರಿ. ಪ್ರಕ್ರಿಯೆಯ ಕೊನೆಯಲ್ಲಿ ಉತ್ತಮ ಮಾಯಿಶ್ಚರೈಸರ್ ಹಚ್ಚಲು ಮರೆಯದಿರಿ.

ನೋಡಿರಿ

