ದೆಹಲಿ ಪಿಜಿ ದುರಂತದ ಬಗ್ಗೆ ಸಿಡಿದೆದ್ದ ಕಾಕ್ರೋಚ್ ಪಾರ್ಟಿ – ಮೃತರ ಕುಟುಂಬಗಳಿಗೆ ₹1 ಕೋಟಿ ಪರಿಹಾರಕ್ಕೆ ಆಗ್ರಹ

ದೆಹಲಿ ಪಿಜಿ ದುರಂತದ ಬಗ್ಗೆ ಸಿಡಿದೆದ್ದ ಕಾಕ್ರೋಚ್ ಪಾರ್ಟಿ – ಮೃತರ ಕುಟುಂಬಗಳಿಗೆ ₹1 ಕೋಟಿ ಪರಿಹಾರಕ್ಕೆ ಆಗ್ರಹ

ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ಸಂಭವಿಸಿದ PG ಕಟ್ಟಡ ಕುಸಿತ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ವಿದ್ಯಾರ್ಥಿಗಳು ವಾಸಿಸುತ್ತಿದ್ದ ಐದು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದುಬಿದ್ದ ಪರಿಣಾಮ, ಈವರೆಗೆ 7 ಮಂದಿ ಮೃತಪಟ್ಟಿದ್ದು, 12 ಮಂದಿಯನ್ನು ರಕ್ಷಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕಟ್ಟಡದಲ್ಲಿ ಇತ್ತೀಚೆಗೆ ದುರಸ್ತಿ ಮತ್ತು ನಿರ್ಮಾಣ ಕಾಮಗಾರಿ ನಡೆದಿತ್ತು ಎನ್ನಲಾಗಿದ್ದು, ನೆಲಮಾಳಿಗೆಯಲ್ಲಿ ನೀರು ಸಂಗ್ರಹವಾಗಿರುವುದು ಹಾಗೂ ಕಾಮಗಾರಿ ಕೂಡ ಕಟ್ಟಡ ಕುಸಿತಕ್ಕೆ ಕಾರಣವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಕಟ್ಟಡದ ಕಾನೂನುಬದ್ಧತೆ, ಹೆಚ್ಚುವರಿ ಮಹಡಿಗಳ ನಿರ್ಮಾಣ ಮತ್ತು ಸುರಕ್ಷತಾ ನಿಯಮಗಳ ಪಾಲನೆ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಕ್ಯಾಂಟರ್‌ ಪಲ್ಟಿ – 12 ಭಕ್ತರು ಸ್ಥಳದಲ್ಲೇ ಸಾ*ವು

ಈ ನಡುವೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಕಟ್ಟಡದ ಮಾಲೀಕ ಹರಿರಾಮ್ ಗುಪ್ತಾ, ಅವರ ಪತ್ನಿ ಉರ್ಮಿಳಾ ಗುಪ್ತಾ ಹಾಗೂ ಪುತ್ರ ಮಹೇಶ್ ಗುಪ್ತಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯವು ದಂಪತಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಹಾಗೂ ಪುತ್ರನನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

ಇದೇ ವೇಳೆ ನಿರ್ಲಕ್ಷ್ಯದ ಆರೋಪದ ಹಿನ್ನೆಲೆಯಲ್ಲಿ MCDಯ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ದೆಹಲಿ ಸರ್ಕಾರವು PG ಕಟ್ಟಡಗಳ ಸುರಕ್ಷತೆಗಾಗಿ ಹೊಸ ನೀತಿ ರೂಪಿಸುವುದರ ಜೊತೆಗೆ, ಪ್ರಮುಖ PG ಪ್ರದೇಶಗಳಲ್ಲಿನ ಕಟ್ಟಡಗಳಿಗೆ ತುರ್ತು ಸ್ಟ್ರಕ್ಚರಲ್ ಆಡಿಟ್ ನಡೆಸಲು ಮುಂದಾಗಿದೆ. ಈ ದುರಂತದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವಸತಿ ಕಟ್ಟಡಗಳ ಸುರಕ್ಷತೆ ಮತ್ತು ಅಧಿಕಾರಿಗಳ ಜವಾಬ್ದಾರಿಯ ಬಗ್ಗೆ ದೊಡ್ಡ ಪ್ರಶ್ನೆಗಳು ಎದ್ದಿವೆ.

ದೆಹಲಿಯ ಪಿಜಿ ಕಟ್ಟಡ ಕುಸಿದು ಏಳು ಮಂದಿ ಮೃತಪಟ್ಟ ಘಟನೆ ಬೆನ್ನಲ್ಲೇ ಕಾಕ್ರೋಚ್‌ ಜನತಾ ಪಾರ್ಟಿ ಸರ್ಕಾರದ ಮುಂದೆ ಏಳು ಬೇಡಿಕೆಗಳನ್ನು ಮಂಡಿಸಿದೆ. ಕಟ್ಟಡ ಮಾಲಕನ ವಿರುದ್ಧ ಮಾತ್ರವಲ್ಲದೆ ರಾಜಕಾರಣಿಗಳು ಹಾಗೂ ಇತರರೊಂದಿಗಿನ ಸಂಪರ್ಕ ಒಳಗೊಂಡ ದೊಡ್ಡ ಪಿಜಿ ಮಾಫಿಯಾ ಕುರಿತು ಸ್ವತಂತ್ರ ಕ್ರಿಮಿನಲ್ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ. ವಿದ್ಯಾರ್ಥಿಗಳ ವಸತಿ ಕಟ್ಟಡಗಳ ಸುರಕ್ಷತಾ ಪರಿಶೀಲನೆ, ಅಕ್ರಮ ನಿರ್ಮಾಣಗಳ ವಿರುದ್ಧ ಕ್ರಮ, ಸರ್ಕಾರಿ ಹಾಸ್ಟೆಲ್‌ಗಳ ನಿರ್ಮಾಣ ಹಾಗೂ ಮೃತರ ಕುಟುಂಬಗಳಿಗೆ ₹1 ಕೋಟಿ ಮತ್ತು ಗಾಯಾಳುಗಳಿಗೆ ₹20 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದೆ.

Kishor KV

Leave a Reply

Your email address will not be published. Required fields are marked *