ಅಡುಗೆ ಮಾಡಲ್ಲ, ಡ್ಯಾನ್ಸ್ ಕ್ಲಾಸ್‌ಗೆ ಹೋಗಬೇಕೆಂದ ಹೆಂಡತಿಯನ್ನ ಕೊ*ದ ಪಾಪಿ ಗಂಡ

ಅಡುಗೆ ಮಾಡಲ್ಲ, ಡ್ಯಾನ್ಸ್ ಕ್ಲಾಸ್‌ಗೆ ಹೋಗಬೇಕೆಂದ ಹೆಂಡತಿಯನ್ನ ಕೊ*ದ ಪಾಪಿ ಗಂಡ

ಡ್ಯಾನ್ಸ್ ಕ್ಲಾಸ್‌ಗೆ ಹೋಗಬೇಕೆಂಬ ಆಸೆ… ಅಡುಗೆ ಮಾಡುವ ವಿಚಾರಕ್ಕೆ ಶುರುವಾದ ಜಗಳ… ಕೊನೆಗೆ ಪತ್ನಿಯೇ ಪ್ರಾಣ ಕಳೆದುಕೊಂಡಿದ್ದಾಳೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿರುವ ಈ ಘಟನೆ ಇದೀಗ ಭಾರೀ ಆಘಾತಕ್ಕೆ ಕಾರಣವಾಗಿದೆ.

ನಾಗ್ಪುರದ ಝಿಂಗಾಬಾಯಿ ಟಾಕಳಿ, ಸಾಯಿನಗರದ ಗೋವಿಂದ್ ಸಿಟಿಯಲ್ಲಿ ಈ ಘಟನೆ ನಡೆದಿದೆ. 38 ವರ್ಷದ ಯಾಮಿನಿ ಕೃಷ್ಣ ಲಾಲ್ ಯಾದವ್ ಮೃತ ಮಹಿಳೆ. ಅವರ ಪತಿ 41 ವರ್ಷದ ಕೃಷ್ಣ ಲಾಲ್ ಯಾದವ್ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಇದನ್ನೂ ಓದಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ- ಕೇರಳದಲ್ಲಿ ತಮಿಳುನಾಡಿನ 8 ವಿದ್ಯಾರ್ಥಿಗಳು ಸಾ*ವು

ಪೊಲೀಸರ ಪ್ರಕಾರ, ಘಟನೆ ನಡೆದ ದಿನ ಕೃಷ್ಣ ಲಾಲ್ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದರು. ತಮ್ಮ ಮತ್ತು ಮಕ್ಕಳಿಗಾಗಿ ಊಟ ತಯಾರಿಸುವಂತೆ ಪತ್ನಿಗೆ ಕೇಳಿದ್ದಾರೆ. ಆದರೆ, ಯಾಮಿನಿ ಅದೇ ಅಪಾರ್ಟ್‌ಮೆಂಟ್‌ನಲ್ಲಿ ನಡೆಯುತ್ತಿದ್ದ ಡ್ಯಾನ್ಸ್ ಕ್ಲಾಸ್‌ಗೆ ತೆರಳಲು ಸಿದ್ಧವಾಗುತ್ತಿದ್ದರು. ಹೀಗಾಗಿ ಅಡುಗೆ ಮಾಡಲು ನಿರಾಕರಿಸಿದ್ದಾರೆ. ಇದೇ ವಿಚಾರ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಜಗಳ ತಾರಕಕ್ಕೇರಿದಾಗ, ಪತಿ ಪತ್ನಿಯ ಕುತ್ತಿಗೆ ಮತ್ತು ಹೊಟ್ಟೆ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆ ವೇಳೆ ಆತ ಮದ್ಯದ ಅಮಲಿನಲ್ಲಿದ್ದನೆಂದೂ ವರದಿಯಾಗಿದೆ.

ಹಲ್ಲೆಯ ಬಳಿಕ ಯಾಮಿನಿಗೆ ಕುತ್ತಿಗೆ ಮತ್ತು ಹೊಟ್ಟೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆರಂಭದಲ್ಲಿ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಗಂಭೀರ ಗಾಯಗಳು ಪತ್ತೆಯಾದ ಬಳಿಕ ಪತಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಮನೆಯೊಳಗಿನ ಸಣ್ಣ ವಿಚಾರವೊಂದು ಹಿಂಸೆಗೆ ತಿರುಗಿ ಜೀವವನ್ನೇ ಬಲಿ ಪಡೆದಿರುವುದು ದುರಂತ. ಈ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Kishor KV

Leave a Reply

Your email address will not be published. Required fields are marked *