ಟರ್ಕಿ ಭೂಕಂಪಕ್ಕೆ ಬಲಿಯಾದ ಗೋಲ್ಕೀಪರ್ – ಫುಟ್ಬಾಲ್ ಆಟಗಾರನ ದುರಂತ ಅಂತ್ಯ
ಟರ್ಕಿಯಲ್ಲಿ ಈಗ ಸಾವು ನೋವಿನ ಆಕ್ರಂದನ ಹೃದಯ ಹಿಂಡುತ್ತಿದೆ. ದಿನೇ ದಿನೇ ಸಾವಿನ ಸಂಖ್ಯೆಯೂ ಏರುತ್ತಿದೆ. ಕಟ್ಟಡಗಳ ಅವಶೇಷಗಳನ್ನು ಹೊರತೆಗೆದಷ್ಟು ನೂರಾರು ಶವಗಳು ಸಿಗುತ್ತಿವೆ. ಹೀಗಿರುವಾಗಲೇ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಟರ್ಕಿ ದೇಶದ ಖ್ಯಾತ್ ಫುಟ್ಬಾಲ್ ಆಟಗಾರರೊಬ್ಬರು ಈ ದುರಂತಕ್ಕೆ ಬಲಿಯಾಗಿದ್ದಾರೆ. ಟರ್ಕಿಯ ಫುಟ್ಬಾಲ್ ಗೋಲ್ಕೀಪರ್ ಅಹ್ಮತ್ ಎಯುಪ್ ಟುರ್ಕಸ್ಲಾನ್ ಸಾವನ್ನಪ್ಪಿರುವುದು ದೃಢಪಟ್ಟಿದೆ.
ಇದನ್ನೂ ಓದಿ: ಭೀಕರ ಭೂಕಂಪಕ್ಕೆ ಮಹಾ ಮಾರಣಹೋಮ – 5,000ಕ್ಕೂ ಅಧಿಕ ಮಂದಿ ಬಲಿ, ಎಲ್ಲೆಲ್ಲೂ ನೋವಿನ ಚೀತ್ಕಾರ
ಅಹ್ಮತ್ ಎಯುಪ್ ಟುರ್ಕಸ್ಲಾನ್ ಅವರು ಟರ್ಕಿಯ ಸೆಕೆಂಡ್ ಡಿವಿಶನ್ ಕ್ಲಬ್ ಯೇನಿ ಮಲತ್ಯಾಸ್ಪೋರ್ ಕ್ಲಬ್ನಲ್ಲಿ ಗೋಲ್ ಕೀಪರ್ ಆಗಿ ಆಡುತ್ತಿದ್ದರು. ಕ್ಲಬ್ನ ಅಧಿಕೃತ ಪ್ರಕಟಣೆಯಲ್ಲಿ ಈ ಸಾವಿನ ಸುದ್ದಿ ತಿಳಿಸಲಾಗಿದೆ. ‘ನಮ್ಮ ಗೋಲ್ಕೀಪರ್ ಅಹಮತ್ ಎಯುಪ್ ತುರ್ಕಸ್ಲಾನ್ ಭೂಕಂಪದಲ್ಲಿ ಜೀವ ಕಳೆದುಕೊಂಡಿದ್ದಾರೆ. ನಿಮ್ಮ ನೆನಪು ಹಸಿರಾಗಿಯೇ ಇರುತ್ತದೆ’ ಎಂದು ಟ್ವೀಟ್ ಮೂಲಕ ಕ್ಲಬ್ ತಿಳಿಸಿದೆ. ಅಹ್ಮತ್ ಎಯುಪ್ ಟುರ್ಕಸ್ಲಾನ್ ಅವರಿಗೆ 28 ವರ್ಷ ವಯಸ್ಸಾಗಿತ್ತು.
ಘಾನಾ ಮೂಲದ ಕ್ರಿಸ್ಟಿಯನ್ ಆಟ್ಸು ಎಂಬ ಫುಟ್ಬಾಲ್ ಆಟಗಾರ ಕೂಡಾ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು. 31 ವರ್ಷದ ಕ್ರಿಸ್ಟಿಯನ್ ಆಟ್ಸು ಅವರನ್ನು ರಕ್ಷಣಾ ಕಾರ್ಯಕರ್ತರು ಕಾಪಾಡಿದ್ದಾರೆ. ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.