ವಿದೇಶಕ್ಕೆ ತೆರಳುವವರಿಗೆ ಗುಡ್ ನ್ಯೂಸ್ – ಇನ್ಮುಂದೆ ಕರೆನ್ಸಿ ಚಿಂತೆ ಇರಲ್ಲ!
ನವದೆಹಲಿ: ಹಿಂದೆ ಮನೆಯಿಂದ ಕಾಲೇಜು, ಆಫೀಸ್ ಗೆ ಹೋಗುವ ವೇಳೆ ಹಿರಿಯರು ಪರ್ಸ್ ನಲ್ಲಿ ದುಡ್ಡು ಇದ್ಯಾ? ಚಿಲ್ಲರೆ ಬೇಕಾ ಅಂತಾ ಕೇಳುತ್ತಿದ್ದರು. ಆನ್ ಲೈನ್ ಪೇಮೆಂಟ್ ಬಂದ ಮೇಲೆ ಹಣ ಇರ್ಲಿ ಇರದೇ ಇರ್ಲಿ ಆನ್ ಲೈನ್ ಪೇಮೆಂಟ್ ಇದೆಯಲ್ವಾ ಅಂತಾ ಮೊಬೈಲ್ ಹಿಡಿದು ಓಡಾಡುವುದು ಸಾಮಾನ್ಯವಾಗಿದೆ. ಅದೆಷ್ಟು ದೂರ ಪ್ರಯಾಣಿಸಿದರೂ ಭಂಡ ಧೈರ್ಯದಿಂದ ಜನ ಓಡಾಡುತ್ತಿದ್ದಾರೆ. ಆದರೆ ವಿದೇಶಗಳಿಗೆ ಹೋಗುವಾಗ ನಮ್ಮ ಖಾತೆಯಲ್ಲಿ ಎಷ್ಟೇ ಹಣ ಇದ್ರೂ ಕೂಡ ನಾವು ತೆರಳೋ ದೇಶದ ಕರೆನ್ಸಿಯನ್ನೇ ಬಳಸಬೇಕಿತ್ತು. ಇನ್ನು ಮುಂದೆ ವಿದೇಶಕ್ಕೆ ತೆರಳುವವರಿಗೆ ಕರೆನ್ಸಿ ಬದಲಾವಣೆ ಮಾಡುವ ಚಿಂತೆ ಬೇಡ. ಇನ್ನು ವಿದೇಶದಲ್ಲೂ ಆನ್ ಲೈನ್ ಪೇಮೆಂಟ್ ಮೂಲಕ ಹಣ ಪಾವತಿ ಮಾಡಬಹುದಾಗಿದೆ.
ಇದನ್ನೂ ಓದಿ: ಫೆ.13ರಿಂದ 17ರವರೆಗೆ ಬೆಂಗಳೂರು ಏರ್ ಶೋ – ವಿಮಾನ ಪ್ರಯಾಣಕ್ಕೂ ಮುನ್ನ ಈ ಸುದ್ದಿ ನೋಡಿ
ಹೌದು, ಇಷ್ಟು ದಿನ ವಿದೇಶಗಳಿಗೆ ತೆರಳುವವರು ರೂಪಾಯಿಯನ್ನು ಫಾರಿನ್ ಕರೆನ್ಸಿಯಾಗಿ ಪರಿವರ್ತಿಸಿಕೊಳ್ಳಬೇಕಿತ್ತು. ಅದಕ್ಕಾಗಿ ಫೋನ್ ಪೇ ಅಪ್ಲಿಕೇಶನ್ ಬಳಕೆದಾರರಿಗೆ ಹೊಸ ಫೀಚರ್ಸ್ ಪರಿಚಯಿಸಿದೆ. ಇನ್ನು ಫೋನ್ ಪೇಯಲ್ಲಿ ‘UPI International’ ಆಯ್ಕೆಯನ್ನು ಬಳಸಿ ವಿದೇಶಗಳಲ್ಲೂ ಹಣ ಪಾವತಿ ಮಾಡಬಹುದಾಗಿದೆ. ದೇಶದಲ್ಲಿ ಹೆಚ್ಚು ಬಳಸುವ ಯುಪಿಐ ಅಪ್ಲಿಕೇಶನ್ ಫೋನ್ ಪೇ ವಿದೇಶದಲ್ಲಿ ಪಾವತಿಯನ್ನು ಸಕ್ರೀಯಗೊಳಿಸಿರುವ ಭಾರತದ ಮೊದಲ ಕಂಪನಿಯಾಗಿದೆ ಅಂತಾ ವರದಿಯಾಗಿದೆ.
ವಿದೇಶದಲ್ಲಿ ಯಾವುದಾದರೊಂದು ವಸ್ತುವನ್ನು ಖರೀದಿಸಿದರೆ ಮಳಿಗೆಯಲ್ಲಿ ಫೋನ್ ಪೇ ಮೂಲಕ ಆರಾಮವಾಗಿ ಹಣ ಪಾವತಿ ಮಾಡಬಹುದಾಗಿದೆ. ಈ ವೇಳೆ ಒಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ವಿದೇಶಿ ಕರೆನ್ಸಿಯಲ್ಲಿ ಹಣ ಕಡಿತವಾಗುತ್ತದೆ. ಸದ್ಯ ಈ ಪಾವತಿ ವ್ಯವಸ್ಥೆ ಯುಎಇ, ಸಿಂಗಾಪುರ, ಮಾರಿಷಸ್, ನೇಪಾಲ, ಭೂತಾನ್‌ಗಳಲ್ಲಿ ಲಭ್ಯವಿದೆ. ಕಾಲಕ್ರಮೇಣ ಇನ್ನಷ್ಟು ದೇಶಗಳಿಗೆ ಇದು ವಿಸ್ತರಿಸಿಕೊಳ್ಳಲಿದೆ. ಈ ಹೊಸ ವ್ಯವಸ್ಥೆ ಯುಪಿಐ ವ್ಯವಸ್ಥೆಯಲ್ಲಿ ಪ್ರಮುಖ ಹೆಜ್ಜೆಯಾಗಿದೆ.