ಹಿಂದಿ, ತೆಲುಗಿನಲ್ಲಿ ‘ರಾಯ’ ಟಾರ್ಗೆಟ್! ಟಾಕ್ಸಿಕ್ ಫ್ಲಾಪ್ ಮಾಡೋ ಪ್ಲ್ಯಾನ್?

ಹಿಂದಿ, ತೆಲುಗಿನಲ್ಲಿ ‘ರಾಯ’ ಟಾರ್ಗೆಟ್! ಟಾಕ್ಸಿಕ್ ಫ್ಲಾಪ್ ಮಾಡೋ ಪ್ಲ್ಯಾನ್?

ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌’ ಸಿನಿಮಾ ರಿಲೀಸ್ ಆಗಿ ಈಗಾಗಲೇ ಪ್ರೇಕ್ಷಕರ ಮುಂದೆ ಬಂದಿದೆ. ಸಿನಿಮಾ ನೋಡಿದವರಲ್ಲಿ ಕೆಲವರು ಅದ್ಭುತ ಅಂತಿದ್ದಾರೆ. ಇನ್ನೂ ಕೆಲವರು, ಯಶ್‌ರಿಂದ ಇಂಥ ಸಿನಿಮಾ ನಿರೀಕ್ಷೆ ಮಾಡಿರಲಿಲ್ಲ ಅಂತಿದ್ದಾರೆ. ಹಾಗಾದ್ರೆ  ನಿಜಕ್ಕೂ ಆಗ್ತಾ ಇರೋದು ಏನು ಅನ್ನೋದ್ದನ್ನ ನೋಡೋಣ.

ಟಾಕ್ಸಿಕ್‌ ಮೊದಲ ದಿನವೇ ಭಾರತದಲ್ಲಿ ಸುಮಾರು 101 ಕೋಟಿ ರೂಪಾಯಿ ನೆಟ್‌ ಕಲೆಕ್ಷನ್ ಮಾಡಿದೆ ಎಂಬ ಟ್ರೇಡ್ ಅಂಕಿಅಂಶಗಳಿವೆ. ಎಡನೇ ದಿನ 31 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ.  ಒಟ್ಟು ನೆಟ್ ಕಲೆಕ್ಷನ್ ಇಲ್ಲಿ ತನಕ 250 ಕೋಟಿ ದಾಟಿದೆ ಎನ್ನಲಾಗಿದೆ. ದೊಡ್ಡ ಬಜೆಟ್ ಮೂವಿ ಮೇಲೆ ಮಿಶ್ರ ಪ್ರತಿಕ್ರಿಯೇ ಬರ್ತಾ ಇದೆ. ತುಂಬಾ ಹೋಪ್ ಇದ್ದ ಸಿನಿಮಾ ಯಾಕೆ ಹೀಗ್ ಆಯ್ತು ಅನ್ನೋ ಪ್ರಶ್ನೆ ಕೂಡ ಇದೆ. ಇದು ಬಿಡಿ

ಟಾಕ್ಸಿಕ್ ಲಾಭ ಮಾಡ್ತಾ? 

ಇಲ್ಲಿಯೇ ಒಂದು ಮುಖ್ಯ ವಿಚಾರ ಇದೆ. ಬಾಕ್ಸ್‌ಆಫೀಸ್‌ನಲ್ಲಿ ಸಿನಿಮಾ 500 ಕೋಟಿ ಗಳಿಸಿದರೆ ನಿರ್ಮಾಪಕರಿಗೆ 500 ಕೋಟಿ ಲಾಭ ಅಂತ ಅರ್ಥವಲ್ಲ. ಥಿಯೇಟರ್‌ಗಳ ಪಾಲು, ಡಿಸ್ಟ್ರಿಬ್ಯೂಟರ್ ಶೇರ್, ತೆರಿಗೆ, ನಿರ್ಮಾಣ ವೆಚ್ಚ, ಪ್ರಚಾರ ವೆಚ್ಚ ಮತ್ತು ಬೇರೆ ಹಕ್ಕುಗಳ ಲೆಕ್ಕಾಚಾರ ಇರುತ್ತದೆ. ಟಾಕ್ಸಿಕ್‌ ನಿರ್ಮಾಣ ಬಜೆಟ್ ಸುಮಾರು 500 ಕೋಟಿ ಎನ್ನುವ ವರದಿಗಳಿದ್ದರೂ, ನಿರ್ಮಾಪಕರು ಅಧಿಕೃತವಾಗಿ ಅಂತಿಮ ವೆಚ್ಚ ಮತ್ತು ಲಾಭವನ್ನು ಬಹಿರಂಗಪಡಿಸಿಲ್ಲ. ಹೀಗಾಗಿ ಈಗಲೇ ‘ನಿರ್ಮಾಪಕರಿಗೆ ಇಷ್ಟು ಕೋಟಿ ಲಾಭ’ ಅಥವಾ ‘ಇಷ್ಟು ಕೋಟಿ ನಷ್ಟ’ ಅಂತ ಖಚಿತವಾಗಿ ಹೇಳುವುದ್ದಕ್ಕೆ ಆಗಲ್ಲ.

ಆದರೆ ಸಿನಿಮಾ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಬಾಕ್ಸ್‌ಆಫೀಸ್‌ಗಿಂತ ವಿಭಿನ್ನ ಪ್ರೇಕ್ಷಕ ಪ್ರತಿಕ್ರಿಯೆ.ಟಾಕ್ಸಿಕ್‌ ನೋಡಿದವರಲ್ಲಿ ಕೆಲವರಿಗೆ ಯಶ್‌ ಅವರ ಲುಕ್‌, ಸ್ಕ್ರೀನ್ ಪ್ರೆಸೆನ್ಸ್, ಆ್ಯಕ್ಷನ್ ಮತ್ತು ಸಿನಿಮಾ ಕಟ್ಟಿಕೊಟ್ಟಿರುವ ದೃಶ್ಯ ವೈಭವ ಇಷ್ಟವಾಗಿದೆ. ಇನ್ನೂ ಕೆಲವರಿಗೆ ಕಥೆಯ ವೇಗ, ಸ್ಕ್ರೀನ್‌ಪ್ಲೇ, ಪಾತ್ರಗಳ ನಿರೂಪಣೆ ಮತ್ತು ಸಿನಿಮಾದ ಲೇಂಥ್ ಸಮಸ್ಯೆಯಾಗಿದೆ. ವಿಶೇಷವಾಗಿ ಮೊದಲಾರ್ಧದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿವೆ. ಇದೇ ಕಾರಣಕ್ಕೆ ಸಿನಿಮಾದ ರೇಟಿಂಗ್‌ಗಳಲ್ಲೂ ದೊಡ್ಡ ವ್ಯತ್ಯಾಸ ಕಾಣುತ್ತಿದೆ.

ಕನ್ನಡ ಪ್ರೇಕ್ಷಕರಲ್ಲಿ ಯಶ್‌ ಮೇಲಿನ ಭಾವನಾತ್ಮಕ ಕನೆಕ್ಷನ್‌ ಹೆಚ್ಚು ಇರುವುದರಿಂದ ಸಿನಿಮಾ ಮತ್ತು ಯಶ್‌ ಅಭಿನಯಕ್ಕೆ ಸಾಕಷ್ಟು ಬೆಂಬಲ ಸಿಕ್ಕಿದೆ. ಆದರೆ ತೆಲುಗು ಪ್ರೇಕ್ಷಕರಿಂದ ಬಂದ ಆರಂಭಿಕ ಪ್ರತಿಕ್ರಿಯೆ ಹೆಚ್ಚು ಕಠಿಣವಾಗಿದೆ ಎನ್ನುವ ವರದಿಗಳಿವೆ. ಹಿಂದಿ ಭಾಗದಲ್ಲಿ ಯಶ್‌ ಅವರ ಸ್ವಂತ ಧ್ವನಿಯ ಬಳಕೆಯ ಬಗ್ಗೆಯೂ ಪ್ರೇಕ್ಷಕರಿಂದ ವಿಭಿನ್ನ ಅಭಿಪ್ರಾಯಗಳು ಬಂದಿವೆ. ಅಂದರೆ ಟಾಕ್ಸಿಕ್‌ ಎಲ್ಲ ಭಾಷೆಗಳಲ್ಲೂ ಒಂದೇ ರೀತಿಯ ಅನುಭವ ನೀಡುತ್ತಿಲ್ಲ.

ಟಾಕ್ಸಿಕ್‌ – KGFಗೆ ಹೊಲಿಕೆ ಯಾಕೆ?

KGF ಮತ್ತು KGF Chapter 2 ಯಶ್‌ ಅವರನ್ನು ಕೇವಲ ಕನ್ನಡದ ಸ್ಟಾರ್‌ನಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬದಲಿಸಿತು. ರಾಕಿ ಭಾಯ್‌ ಪಾತ್ರದ ಮಾಸ್ ಇಮೇಜ್‌ ಜನರ ಮನಸ್ಸಿನಲ್ಲಿ ಅಷ್ಟು ಗಟ್ಟಿಯಾಗಿ ಕುಳಿತಿದೆ. ಹೀಗಾಗಿ ಟಾಕ್ಸಿಕ್‌ನಲ್ಲಿ ಯಶ್‌ ಬೇರೆ ರೀತಿಯ ಪಾತ್ರ, ಬೇರೆ ರೀತಿಯ ನಿರೂಪಣೆ ಮತ್ತು ಬೇರೆ ಜಗತ್ತನ್ನು ತೋರಿಸಿದಾಗ, ಕೆಲವರಿಗೆ ಅದು ಹೊಸತನವಾಗಿ ಕಾಣಿಸಿತು. ಮತ್ತಷ್ಟು ಜನರಿಗೆ ಮಾತ್ರ ‘ನಮಗೆ ಬೇಕಾಗಿದ್ದ ಯಶ್‌ ಇದು ಅಲ್ಲ’ ಅನ್ನಿಸಿತು.

  ಯಶ್ ಮೇಲೆ ದೊಡ್ಡ ನಿರೀಕ್ಷೆ

ಯಶ್‌ ಅವರ ಮೇಲಿನ ನಿರೀಕ್ಷೆ ಸಿನಿಮಾದ ಮೇಲಿನ ನಿರೀಕ್ಷೆಗಿಂತ ದೊಡ್ಡದಾಗಿದೆ. ಅವರು ನಾಲ್ಕು ವರ್ಷಗಳ ನಂತರ ಬಂದಿದ್ದಾರೆ. ಹೀಗಾಗಿ ಪ್ರೇಕ್ಷಕರು ಒಂದು ಸಾಮಾನ್ಯ ಸಿನಿಮಾ ನೋಡಲು ಬಂದಿರಲಿಲ್ಲ. KGFಗಿಂತ ದೊಡ್ಡ ಎಲಿವೇಶನ್‌, ಇನ್ನಷ್ಟು ಮಾಸ್‌ ಕ್ಷಣಗಳು, ಎಲ್ಲರಿಗೂ ಇಷ್ಟವಾಗುವ ಕಥೆ—ಇವೆಲ್ಲವನ್ನೂ ನಿರೀಕ್ಷಿಸಿದ್ದರು. ಆದರೆ ಟಾಕ್ಸಿಕ್‌ ತನ್ನದೇ ಆದ ಶೈಲಿಯಲ್ಲಿ ಸಿನಿಮಾ ಹೇಳಲು ಪ್ರಯತ್ನಿಸಿದೆ. ಇಲ್ಲಿಯೇ ಪ್ರೇಕ್ಷಕರು ಎರಡು ಗುಂಪುಗಳಾಗಿದ್ದಾರೆ. ಒಂದು ಗುಂಪು, “ಯಶ್‌ ಬೇರೆ ಪ್ರಯತ್ನ ಮಾಡಿದ್ದಾರೆ. ಅದನ್ನು ಸ್ವೀಕರಿಸಬೇಕು” ಅಂತಿದೆ.ಮತ್ತೊಂದು ಗುಂಪು, “ಪ್ರಯೋಗ ಒಳ್ಳೆಯದೇ, ಆದರೆ ಕಥೆ ಮತ್ತು ಎಮೋಷನ್‌ ಇನ್ನಷ್ಟು ಬಲವಾಗಿರಬೇಕಿತ್ತು” ಅಂತಿದೆ.

ಯಶ್‌ ಅವರ ಮುಂದಿನ ಭವಿಷ್ಯ ಏನು?

ಇಲ್ಲಿ ಟಾಕ್ಸಿಕ್‌ನ ಫಲಿತಾಂಶವನ್ನು ಯಶ್‌ ಅವರ ವೃತ್ತಿಜೀವನದ ಅಂತ್ಯ ಎಂದು ನೋಡುವುದು ತಪ್ಪು. ಒಂದು ಸಿನಿಮಾ ನಿರೀಕ್ಷೆ ತಲುಪಲಿಲ್ಲ ಅಂದ ಮಾತ್ರಕ್ಕೆ ಸ್ಟಾರ್‌ನ ಮಾರುಕಟ್ಟೆ ಮುಗಿಯುವುದಿಲ್ಲ. ಆದರೆ ಟಾಕ್ಸಿಕ್‌ ಒಂದು ಮುಖ್ಯ ಎಚ್ಚರಿಕೆಯ ಗಂಟೆ ಆಗಬಹುದು. ಮುಂದಿನ ಸಿನಿಮಾದಲ್ಲಿ ಯಶ್‌ ಕಥೆಯನ್ನು ಇನ್ನಷ್ಟು ಬಿಗಿಯಾಗಿ ಆಯ್ಕೆ ಮಾಡಬಹುದು. ಪ್ಯಾನ್ ಇಂಡಿಯಾ ಸಿನಿಮಾ ಅಂದರೆ ಕೇವಲ ದೊಡ್ಡ ಬಜೆಟ್‌, ದೊಡ್ಡ ಸ್ಟಾರ್‌, ದೊಡ್ಡ ಆ್ಯಕ್ಷನ್‌ ಸಾಕಾಗುವುದಿಲ್ಲ. ಕಥೆ ಎಲ್ಲ ಭಾಷೆಯ ಪ್ರೇಕ್ಷಕರಿಗೂ ಸಂಪರ್ಕವಾಗಬೇಕು. ಜನರು ಯಶ್‌ ಅವರನ್ನು ನೋಡಲು ಮಾತ್ರ ಟಿಕೆಟ್‌ ತೆಗೆದುಕೊಳ್ಳುವುದಿಲ್ಲ. ಯಶ್‌ ಯಾವ ಕಥೆಯನ್ನು ಆಯ್ಕೆ ಮಾಡಿದ್ದಾರೆ ಅನ್ನೋದನ್ನೂ ನೋಡುತ್ತಾರೆ. ಹೀಗಾಗಿ ಮುಂದಿನ ಪ್ರಾಜೆಕ್ಟ್‌ನಲ್ಲಿ ಕಥೆ, ಸ್ಕ್ರೀನ್‌ಪ್ಲೇ, ಎಮೋಷನ್‌ ಮತ್ತು ಮಾಸ್‌ ಎಲಿಮೆಂಟ್‌ಗಳ ನಡುವೆ ಸರಿಯಾದ ಬ್ಯಾಲೆನ್ಸ್‌ ಮಾಡುವುದು .  ಪ್ಯಾನ್ ಇಂಡಿಯಾ ಪ್ರೇಕ್ಷಕರಿಗೆ ಅದು ಎಷ್ಟು ಕನೆಕ್ಟ್ ಆಗುತ್ತದೆ? ಅನ್ನೋ ಪ್ರಶ್ನೆಗಳು ಮುಖ್ಯವಾಗುತ್ತವೆ.

KGF ಯಶ್‌ ಅವರನ್ನು ಶಿಖರಕ್ಕೆ ಕೊಂಡೊಯ್ದಿತು. ಟಾಕ್ಸಿಕ್‌ ಆ ಶಿಖರದಲ್ಲಿ ಇನ್ನೊಂದು ಹೆಜ್ಜೆ ಮುಂದೆ ಇಡುವ ಪ್ರಯತ್ನ. ಆದರೆ ಆ ಪ್ರಯತ್ನವನ್ನು ಎಲ್ಲರೂ ಒಂದೇ ರೀತಿಯಲ್ಲಿ ಸ್ವೀಕರಿಸಿಲ್ಲ. ಒಬ್ಬರಿಗೆ ಇದು ಧೈರ್ಯಶಾಲಿ ಪ್ರಯೋಗ. ಇನ್ನೊಬ್ಬರಿಗೆ ಇದು ನಿರೀಕ್ಷೆ ತಲುಪದ ಸಿನಿಮಾ. ಮತ್ಯಾರಿಗೋ ಯಶ್‌ ಅವರ ಮತ್ತೊಂದು ವಿಭಿನ್ನ ಅವತಾರ.  ಆದರೆ ಅಂತಿಮ ತೀರ್ಪು ಈಗಲೇ ಕೊಡಲು ಸಾಧ್ಯವಿಲ್ಲ. ಸಿನಿಮಾ ರಿಲೀಸ್ ಆಗಿ ಒಂದು ಈಗ ವೀಕೆಂಡ್ ಆಗಿದೆ. ವೀಕೆಂಡ್‌ ನಂತರವೂ ಜನರು ಥಿಯೇಟರ್‌ಗೆ ಬರುತ್ತಾರಾ? ವರ್ಡ್ ಆಫ್ ಮೌತ್ ಹೇಗಿರುತ್ತೆ? ಬಾಕ್ಸ್‌ಆಫೀಸ್ ಎಷ್ಟು ದಿನ ಸ್ಥಿರವಾಗಿರುತ್ತೆ ಅನ್ನೋದು ಟಾಕ್ಸಿಕ್‌ನ ಅಂತಿಮ ಫಲಿತಾಂಶವನ್ನು ನಿರ್ಧರಿಸಲಿದೆ.

Kishor KV

Leave a Reply

Your email address will not be published. Required fields are marked *