IPhone EMI ಸೂಸೈ*ಡ್ ಕೇಸ್‌ಗೆ ಬಿಗ್ ಟ್ವಿಸ್ಟ್ – ಮೂವರ ಸಾವಿಗೆ ಕಾರಣ ಬೇರೆನೇ ಇತ್ತಾ?

ಮಹಾರಾಷ್ಟ್ರದ ಕೊಹಡ್ಯಾ ಡೋಂಗರ್‌ನಲ್ಲಿ ನಡೆದ ಹೃದಯವಿದ್ರಾವಕ ಘಟನೆ ಇಡೀ ಭಾರತವನ್ನೇ ಬೆಚ್ಚಿಬೀಳಿಸಿದೆ. ಐಫೋನ್ ಖರೀದಿಯ ಇಎಂಐ ಪಾವತಿ ವಿಚಾರವಾಗಿ ಮನೆಯಲ್ಲಿ ಉಂಟಾದ ವಿವಾದದ ಬಳಿಕ 19 ವರ್ಷದ ಯುವಕ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಮಗನನ್ನು ರಕ್ಷಿಸಲು ತಂದೆ-ತಾಯಿ ನಡೆಸಿದ ಕೊನೇ ಹೋರಾಟ ದುರಂತದಲ್ಲಿ ಅಂತ್ಯಗೊಂಡಿದ್ದು, ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮಗನನ್ನ ಉಳಿಸಿಕೊಳ್ಳಲು ತಾಯಿ ಪಟ್ಟ ಕಷ್ಟ ಮನ ಕಲಕುವಂತಿದೆ. ಈ ಪ್ರಕರಣ ಸಂಬಂಧ ಒಂದೊಂದೇ ವಿಷಯಗಳು ಹೊರಬರುತ್ತಿವೆ. ಇದೀಗ ಅದೇ ಜಾಗದಲ್ಲಿ 2025ರಲ್ಲೂ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಎಂಬ ವಿಚಾರ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಷ್ಟೇ ಬೇರೆ ಬೇರೆ ಕಾರಣಗಳು ಈ ಕೇಸ್‌ನಲ್ಲಿ ಕೇಳಿ ಬರ್ತಿದೆ.
ಮನೆಯಲ್ಲಿ ಹೆಚ್ಚಾಗಿತ್ತು ಕೌಟುಂಬಿಕ ಕಲಹ
ಮೂಲಗಳ ಪ್ರಕಾರ, ದಂಪತಿಗಳು ಆರು ವರ್ಷಗಳ ಹಿಂದೆ ತಮ್ಮ ಹಿರಿಯ ಮಗನನ್ನು ಅನಾರೋಗ್ಯದಿಂದ ಕಳೆದುಕೊಂಡಿದ್ದರು. ಆ ಬಳಿಕ ಕುಟುಂಬದಲ್ಲಿ ಕಲಹ ಆರಂಭವಾಗಿತ್ತು. ಪೋಷಕರ ನಡುವಿನ ಸಂಬಂಧವೂ ಬಿಗಡಾಯಿಸಿತ್ತು ಎನ್ನಲಾಗಿದೆ. ಚಾಲಕರಾಗಿ ಕೆಲಸ ಮಾಡುತ್ತಿದ್ದ ಮುರಳೀಧರ್ ಕೆಲಸದ ಕಾರಣ ಸತತ ಹಲವು ತಿಂಗಳುಗಳ ಕಾಲ ಮನೆಗೆ ಬರುತ್ತಿರಲಿಲ್ಲ ಎಂದು ವರದಿಯಾಗಿದೆ. ಘಟನೆಗೆ ಎರಡು ದಿನ ಮೊದಲು ಅವರು ಮನೆಗೆ ಮರಳಿದ್ದರು. ಬಳಿಕ ಮನೆಯಲ್ಲಿ ಜಗಳ ನಡೆದಿತ್ತು ಎನ್ನಲಾಗಿದೆ. ಈ ಕೌಟುಂಬಿಕ ಪರಿಸ್ಥಿತಿ ಕುನಾಲ್ ಮೇಲೆ ಯಾವ ರೀತಿಯ ಪರಿಣಾಮ ಬೀರಿತ್ತು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಮ್ಮನ ಯೂಟ್ಯೂಬ್ ಚಾನೆಲ್‌ನಲ್ಲಿ ಇದ್ದ ಆರೋಪವೇನು?
ಸಂಗೀತಾ ಅವರಿಗೆ 29 ಸಾವಿರಕ್ಕೂ ಹೆಚ್ಚು ಸಬೈಬರ್ ಗಳಿರುವ ಯೂಟ್ಯೂಬ್ ಚಾನೆಲ್ ಇತ್ತು. ಅವರ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಕುಟುಂಬದೊಳಗಿನ ಉದ್ವಿಗ್ನತೆ ಮತ್ತು ಆಸ್ತಿ ವಿಚಾರದ ಆರೋಪಗಳ ಸುಳಿವು ಸಿಕ್ಕಿದೆ. ‘ನೀವು ನನ್ನ ಮತ್ತು ನನ್ನ ಮಗನ ಆಸ್ತಿಯ ಮೇಲಿನ ಹಕ್ಕನ್ನು ಕಸಿದುಕೊಂಡಿದ್ದೀರಿ. ಸಹೋದರರು ಮತ್ತು ಪೋಷಕರು ಒಂದಾಗಲು ನೀವು ಎಂದಿಗೂ ಬಿಡಲಿಲ್ಲ. ನೀವು ನನ್ನ ಸಂತೋಷದ ಕುಟುಂಬವನ್ನು ನಾಶಮಾಡಿದ್ದೀರಿ. ನೀವು ನನ್ನ ಕುಟುಂಬಕ್ಕೆ ವಿಷ ಹಾಕಿದ್ದೀರಿ… ನೀವು ನನ್ನ ಮಗನನ್ನು ಅವನ ಪೋಷಕರಿಂದ ಬೇರ್ಪಡಿಸಿದ್ದೀರಿ. ಈ ಪಾಪಕ್ಕೆ ನಿಮ್ಮ ಮುಂದಿನ ಏಳು ತಲೆಮಾರುಗಳು ಬಳಲುತ್ತವೆ. ಇದು ನನ್ನ ಶಾಪ’ ಎಂದು ಅವರು ಇತ್ತೀಚಿನ ವೀಡಿಯೋವೊಂದರಲ್ಲಿ ಹೇಳಿದ್ದರು. ಸಂಗೀತಾ ಯಾರನ್ನು ಉದ್ದೇಶಿಸಿ ಈ ಆರೋಪ ಮಾಡಿದ್ದರು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕುಟುಂಬದ ಕಲಹ, ಆಸ್ತಿ ವಿವಾದದ ಆರೋಪಗಳು ಹಾಗೂ ಅವುಗಳಿಗೆ ಈ ದುರಂತದೊಂದಿಗೆ ಯಾವುದೇ ಸಂಬಂಧವಿದೆಯೇ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ನೋಡಿರಿ

