ಗಿಲ್ ರೆಕಾರ್ಡ್ ಪುಡಿಗಟ್ಟಿದ ಪಂತ್ – ಗೆಲುವಿಗಾಗಿ ಟೀಂ IND ಅಡ್ಡದಾರಿ?
RR ನಿಂದ ಯಶಸ್ವಿ ಜೈಸ್ವಾಲ್ OUT?

ಗಿಲ್ ರೆಕಾರ್ಡ್ ಪುಡಿಗಟ್ಟಿದ ಪಂತ್ – ಗೆಲುವಿಗಾಗಿ ಟೀಂ IND ಅಡ್ಡದಾರಿ?RR ನಿಂದ ಯಶಸ್ವಿ ಜೈಸ್ವಾಲ್ OUT?

ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್ ಪಂದ್ಯದಲ್ಲಿ ಸಿಕ್ಸರ್‌ಗಳ ಶತಕ ಪೂರೈಸುವ ಮೂಲಕ, ಟೆಸ್ಟ್ ಕ್ರಿಕೆಟ್‌ನಲ್ಲಿ 100 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾಗಿದ್ದಾರೆ.

ಇನ್ನೂ ಪಂತ್‌ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲೇ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 69 ಎಸೆತಗಳಲ್ಲಿ 66 ರನ್ ಚಚ್ಚುವ ಮೂಲಕ ಪಂತ್ 2885 ರನ್‌ಗಳಿಸಿದ್ದಾರೆ. ಈ ಅದ್ಭುತ ಪ್ರದರ್ಶನದೊಂದಿಗೆ ಪಂತ್ ಭಾರತ ತಂಡದ ಹಾಲಿ ನಾಯಕ ಶುಭ್‌ಮನ್ ಗಿಲ್ ಅವರ ದಾಖಲೆಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

ಭಾರತದ ಯುವ ವಿಕೆಟ್ ಕೀಪರ್ ಧ್ರುವ್ ಜುರೆಲ್ ಹಿಡಿದ ವಿವಾದಾತ್ಮಕ ಕ್ಯಾಚ್‌ಗೆ ಥರ್ಡ್ ಅಂಪೈರ್ ‘ಔಟ್’ ಎಂದು ತೀರ್ಪು ನೀಡಿದ್ದು, ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಜುರೆಲ್ ಕ್ಯಾಚ್ ಹಿಡಿಯುವ ಹೊತ್ತಿಗೆ ಚೆಂಡು ಮೈದಾನದ ಹುಲ್ಲಿಗೆ ತಾಗಿರುವಂತೆ ಬರಿಗಣ್ಣಿಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆದ್ರೂ  ಸುದೀರ್ಘವಾಗಿ ರಿಪ್ಲೇಗಳನ್ನು ಪರಿಶೀಲಿಸಿದ ಥರ್ಡ್ ಅಂಪೈರ್, ಜುರೆಲ್ ಅವರ ಬೆರಳುಗಳು ಚೆಂಡಿನ ಕೆಳಗಿದ್ದವು ಎಂದು ತೀರ್ಮಾನಿಸಿ ‘ಔಟ್’ ಎಂದು ಘೋಷಿಸಿದರು. ಇದು ವಿವಾದಕ್ಕೆ ಕಾರಣವಾಗಿದೆ.

ಗೆಲುವಿಗಾಗಿ ಟೀಮ್ ಇಂಡಿಯಾ ಅಡ್ಡದಾರಿ ಹಿಡಿದಿದೆ ಅಂತ ಭಾರತದ ವಿರುದ್ಧ ಗಂಭೀರ ಆರೋಪವನ್ನ  ಶ್ರೀಲಂಕಾ ನಾಯಕ ಧನಂಜಯ ಡಿ ಸಿಲ್ವಾ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಅಂಪೈರ್‌ಗೆ ಧನಂಜಯ ಡಿ ಸಿಲ್ವಾ ದೂರು ಸಲ್ಲಿಸಿದ್ದಾರೆ. ಭಾರತದ ಆಟಗಾರ ಮಾನವ್ ಸುತಾರ್ ರನ್ ತೆಗೆಯಲು ಓಡುವಾಗ ಪಿಚ್ ಮಧ್ಯದಲ್ಲಿ ಕಾಲಿಟ್ಟಿದ್ದಕ್ಕೆ ಅಂಪೈರ್‌ಗೆ ದೂರು ಕೊಟ್ಟಿದ್ದಾರೆ. ಗೆಲ್ಲುವುದ್ದಾಗಿ ಭಾರತ ಆಟಗಾರರು ಈ ರೀತಿ ಪಿಚ್ ಹಾಳು ಮಾಡಿದ್ದಾರೆ ಅನ್ನೋದು ಲಂಕಾ ನಾಯಕನ ಆರೋಪ.

ಇದನ್ನೂ ಓದಿ: ಲಂಕೆಗೆ ಸುತಾರ್ ಲಗಾಮು – ಸರ್ ಜಡೇಜಾ ಉತ್ತರಾಧಿಕಾರಿನಾ?

ಚೊಚ್ಚಲ ಪಂದ್ಯವಾಡಿದ ಸೂರ್ಯಬಂಡಾರರನ್ನು ಗೋಲ್ಡನ್ ಡಕ್‌ಗೆ ಔಟ್ ಮಾಡುವ ಮೂಲಕ ಮಾನವ್ ಸುತಾರ್ 32 ವರ್ಷಗಳ ಹಿಂದಿನ ಅನಿಲ್ ಕುಂಬ್ಳೆ ದಾಖಲೆಯನ್ನು ಪುನರಾವರ್ತಿಸಿ ಇತಿಹಾಸ ನಿರ್ಮಿಸಿದ್ದಾರೆ. ಕೊನೆಯ ಬಾರಿಗೆ 1994 ರಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ್ದರು. ವೆಸ್ಟ್ ಇಂಡೀಸ್‌ ಪರ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಕ್ಯಾಮರೂನ್ ಕಫಿಯನ್ನು ಕುಂಬ್ಳೆ ತಮ್ಮ ಮೊದಲ ಎಸೆತದಲ್ಲೇ ಔಟ್ ಮಾಡಿದ್ದರು.

ಶ್ರೀಲಂಕಾ ವಿರುದ್ಧ ಗಾಲೆ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ಮಿಂಚಿದ್ದ ದೇವದತ್ತ ಪಡಿಕ್ಕಲ್‌ ದ್ವಿತೀಯ ಇನಿಂಗ್ಸ್‌ನಲ್ಲಿ 44 ರನ್‌ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ಸಂಜಯ್ ಮಂಜ್ರೇಕರ್ ಮತ್ತು ರಾಹುಲ್ ದ್ರಾವಿಡ್ ನಂತರ ತವರಿನಿಂದ ಹೊರಗೆ ಟೆಸ್ಟ್ ಪಂದ್ಯದಲ್ಲಿ 200 ರನ್ ಗಳಿಸಿದ ಭಾರತದ 3ನೇ ನಂಬರ್ 3 ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹಾಗೇ ಕನ್ನಡಿಗರಾದ ರಾಹುಲ್​-ಪಡಿಕ್ಕಲ್​ ಲಂಕಾ ನೆಲದ ಟೆಸ್ಟ್​ನಲ್ಲಿ ಎರಡೂ ಇನಿಂಗ್ಸ್​ಗಳಲ್ಲಿ 50 ಪ್ಲಸ್​ ರನ್​ ಜತೆಯಾಟವಾಡಿದ 4ನೇ ಭಾರತೀಯ ಜೋಡಿ  ಆಗಿದ್ದಾರೆ.

IPL 2027 ಟೂರ್ನಿಗೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಅವರ ಭವಿಷ್ಯ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ತಂಡದ ಆಡಳಿತ ಮಂಡಳಿ ಅವರನ್ನು ಉಳಿಸಿಕೊಳ್ಳಬೇಕೇ, ಟ್ರೇಡ್ ಮಾಡಬೇಕೇ ಅಥವಾ ಬಿಡುಗಡೆ ಮಾಡಬೇಕೇ ಎಂಬ ಬಗ್ಗೆ ಪರಿಶೀಲಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಜೈಸ್ವಾಲ್ ಅವರ ಮೈದಾನದ ಪ್ರದರ್ಶನ ಮಾತ್ರವಲ್ಲದೆ, ಅವರ ವರ್ತನೆ ಕುರಿತು ಟೀಮ್‌ ಮ್ಯಾನೇಜ್‌ಮೆಂಟ್‌ ಸಂಪೂರ್ಣ ತೃಪ್ತಿ ಇಲ್ಲ ಎನ್ನಲಾಗುತ್ತಿದೆ.

ಕನ್ನಡಿಗ ದೇವದತ್ ಪಡಿಕ್ಕಲ್ ಅವರ ಸಾಧನೆಯನ್ನು ಆರ್‌ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ವಿಶೇಷ ಎಐ   ವಿಡಿಯೋ ಮೂಲಕ ಸಂಭ್ರಮಿಸಿದ್ದಾರೆ. ಬೆಂಗಳೂರಿನ ರಸ್ತೆಗಳಲ್ಲಿ ಪಡಿಕ್ಕಲ್ ಸಾಗುವ ಹಾಗೂ ಮಸಾಲೆ ದೋಸೆ, ಟೀ ಸವಿಯುವ ಈ ವಿಡಿಯೋಗೆ ಹಿನ್ನೆಲೆಯಲ್ಲಿ ಡಾ. ರಾಜ್‌ಕುಮಾರ್ ಅಭಿನಯದ ‘ನಾವಾಡುವ ನುಡಿಯೇ ಕನ್ನಡ ನುಡಿ’ ಹಾಡನ್ನು ಬಳಸಲಾಗಿದೆ. ತಮಿಳುನಾಡು ಮೂಲದವರಾಗಿದ್ದರೂ ಕಾರ್ತಿಕ್ ಅವರು ಕನ್ನಡತನದ ಹಾಡಿನೊಂದಿಗೆ ಪಡಿಕ್ಕಲ್ ಅವರನ್ನು ಶ್ಲಾಘಿಸಿರುವುದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಡೆಲ್ಲಿ ಪ್ರೀಮಿಯರ್ ಲೀಗ್ 2026ರ ಪಂದ್ಯವೊಂದರಲ್ಲಿ ಬ್ಯಾಟರ್ ಲಕ್ಷಯ್ ತಾರೇಜಾ ಬಾರಿಸಿದ ಚೆಂಡು ನೇರವಾಗಿ ಮುಖಕ್ಕೆ ಬಡಿದು ಅಂಪೈರ್ ಧರ್ಮೇಶ್ ಭಾರದ್ವಾಜ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಐಸಿಯುಗೆ ದಾಖಲಿಸಲಾಗಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದ್ದು, ಚೆಂಡು ಬಡಿದಿರೋ ವಿಡಿಯೋ ಸಖತ್ ವೈರಲ್ ಆಗ್ತಿದೆ.

ತಮಿಳುನಾಡು ಪ್ರೀಮಿಯರ್​ ಲೀಗ್​ ಪಂದ್ಯದ ವೇಳೆ ಮೊಬೈಲ್​ ಬಳಸಿ ಗರ್ಲ್‌ಫ್ರೆಂಡ್ ಮ್ಯಾಸೇಜ್ ಕಳುಹಿಸುತ್ತಿದ್ದ ಸಮಯದಲ್ಲಿ ಸಿಕ್ಕಿಬಿದ್ದಿರುವ ಕ್ರಿಕೆಟಿಗನೊಬ್ಬನಿಗೆ ಬಿಸಿಸಿಐ ಒಂದು ಲಕ್ಷ ರೂ. ದಂಡ ಶಿಕ್ಷೆ ವಿಧಿಸಿದೆ. ತಮಿಳುನಾಡು ಪರ ರಣಜಿ ಪಂದ್ಯವನ್ನೂ ಆಡಿರುವ ಆ ಆಟಗಾರನನ್ನು ಸಂಪೂರ್ಣ ಟೂರ್ನಿಯಿಂದಲೂ ನಿಷೇಧಿಸಲಾಗಿದೆ.  ಆಲ್ರೌಂಡರ್​ ಆಗಿರುವ ಆ ಆಟಗಾರನ ಹೆಸರು ಬಹಿರಂಗಪಡಿಸಲಾಗಿಲ್ಲ.

Kishor KV