ರಾಜ್ಯದ ಜನರಿಗೆ ಮತ್ತೊಂದು ಬಿಗ್ ಶಾಕ್ – BMTC, KSRTC ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ

ಕೆಎಸ್ಆರ್ಟಿಸಿ , ಬಿಎಂಟಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಏರಿಕೆ ಮಾಡುವ ಕುರಿತು ಚರ್ಚೆ ತೀವ್ರಗೊಂಡಿದೆ. ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಿದ್ದು, ಸಮಿತಿ ನೀಡುವ ವರದಿ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ದರ ಏರಿಕೆ ಕುರಿತು ಮಾತನಾಡಿರುವ ಸಾರಿಗೆ ಸಚಿವ ಭೈರತಿ ಸುರೇಶ್, ಈಗಾಗಲೇ ಆರು ಬಾರಿ ಡೀಸೆಲ್ ದರ ಹೆಚ್ಚಳವಾಗಿದೆ. ಹೀಗಾಗಿ ಟಿಕೆಟ್ ದರ ಪರಿಷ್ಕರಣೆ ಅನಿವಾರ್ಯವಾಗಬಹುದು ಎಂದು ಹೇಳಿದ್ದಾರೆ. ಡೀಸೆಲ್ ದರ ಏರಿಕೆಯಿಂದ ವಾರಕ್ಕೆ 7ರಿಂದ 8 ಕೋಟಿ ರೂ. ನಷ್ಟವಾಗುತ್ತಿದೆ ಎಂದು ಅವರು ತಿಳಿಸಿದ್ದು, ಈ ಮೂಲಕ ಬೆಲೆ ಏರಿಕೆಯ ಸೂಚನೆಯನ್ನು ನೀಡಿದ್ದಾರೆ. ಟಿಕೆಟ್ ದರ ನಿಗದಿ ಮಾಡುವ ಸಂಬಂಧ ರಾಜ್ಯ ಸರ್ಕಾರ ಸಮಿತಿ ರಚಿಸಿದ್ದು, ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ನೇತೃತ್ವದ ಸಮಿತಿ ಈಗಾಗಲೇ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಿ ದರ ಏರಿಕೆ ಕುರಿತು ಶಿಫಾರಸು ಮಾಡುವಂತೆ ಸಮಿತಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: ಆರೋಗ್ಯ ಸಚಿವ ಯುಟಿ ಖಾದರ್, ಹಲವು ಮಹತ್ವದ ನಿರ್ಧಾರ – ಪಿಜಿ, ಹಾಸ್ಟೆಲ್ , ಮದುವೆಗಳಲ್ಲಿ ಆಹಾರ ಚೆಕ್
ಟಿಕೆಟ್ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ತಮ್ಮದೇ ಆದ ಪ್ರಸ್ತಾವನೆಗಳನ್ನು ಸರ್ಕಾರದ ಮುಂದಿಟ್ಟಿವೆ ಎನ್ನಲಾಗಿದೆ. ಕೆಎಸ್ಆರ್ಟಿಸಿ ಸುಮಾರು ಶೇ.33ರಷ್ಟು ದರ ಹೆಚ್ಚಳವನ್ನು ಕೋರಿದ್ದರೆ, ಬಿಎಂಟಿಸಿ ಶೇ.44ರಷ್ಟು ಏರಿಕೆಗೆ ಮನವಿ ಮಾಡಿದೆ ಎಂದು ತಿಳಿದುಬಂದಿದೆ. ಆದರೆ ನಿಗಮಗಳ ಬೇಡಿಕೆಯಂತೆ ನೇರವಾಗಿ ದರ ಹೆಚ್ಚಿಸುವ ಬದಲು, ಪ್ರಯಾಣಿಕರ ಮೇಲಿನ ಆರ್ಥಿಕ ಹೊರೆಯನ್ನೂ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ನೋಡಿರಿ

