ಬಿಹಾರದ ಅಶೋಕ ಧಾಮ ದೇವಾಲಯದಲ್ಲಿ ಕಾಲ್ತುಳಿತ – 7 ಭಕ್ತರು ಸಾ*ವು, 12 ಕ್ಕೂ ಹೆಚ್ಚು ಮಂದಿಗೆ ಗಾಯ

ಬಿಹಾರದ ಅಶೋಕ ಧಾಮ ದೇವಾಲಯದಲ್ಲಿ ಕಾಲ್ತುಳಿತ – 7 ಭಕ್ತರು ಸಾ*ವು, 12 ಕ್ಕೂ ಹೆಚ್ಚು ಮಂದಿಗೆ ಗಾಯ

ಬಿಹಾರದಲ್ಲಿ ಭೀಕರ ದುರಂತ ನಡೆದಿದೆ. ಲಖಿಸರಾಯ್ ಜಿಲ್ಲೆಯ ಅಶೋಕ ಧಾಮ ದೇವಾಲಯದಲ್ಲಿ ಇಂದು ಬೆಳಗ್ಗೆ  ಭೀಕರ ಕಾಲ್ತುಳಿತ ಸಂಭವಿಸಿದೆ.  ಈ ದುರಂತದಲ್ಲಿ ಕನಿಷ್ಠ 7 ಭಕ್ತರು ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಶ್ರಾವಣ ಮಾಸದ ಮೂರನೇ ಸೋಮವಾರ ಆಗಿರುವುದ್ದರಿಂದ ಶಿವನಿಗೆ ಜಲಾಭಿಷೇಕ ನೆರವೇರಿಸಲು ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ದೇವಾಲಯಕ್ಕೆ ಆಗಮಿಸಿದ್ರು.   ಬೆಳಗ್ಗೆ 6.30ರಿಂದ 6.45ರ ಸುಮಾರಿಗೆ ಸಮೀಪದ ರೈಲು ನಿಲ್ದಾಣಕ್ಕೆ ಎರಡು ರೈಲುಗಳು ಬಂದ ಬಳಿಕ ಭಕ್ತರ ಸಂಖ್ಯೆ ಏಕಾಏಕಿ ಹೆಚ್ಚಾಯಿತು. ಜನದಟ್ಟಣೆ ಹೆಚ್ಚಾದ ಪರಿಣಾಮ ಬ್ಯಾರಿಕೇಡ್‌ನ ಒಂದು ಭಾಗ ಮುರಿದು, ಭಕ್ತರು ಪರಸ್ಪರರ ಮೇಲೆ ಬಿದ್ದಿದ್ದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ:  ಪುಣ್ಯಫಲಕ್ಕಾಗಿ ನಾಗರ ಪಂಚಮಿ ಸಮಯದಲ್ಲಿ ನಾಗನ ಈ ದೇವಸ್ಥಾನಗಳಿಗೆ ಭೇಟಿ ನೀಡಿ

ಇದೇ ವೇಳೆ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಬಿದ್ದಿದ್ದು, ಅದರಲ್ಲಿ ವಿದ್ಯುತ್ ಹರಿಯುತ್ತಿದೆ ಎಂಬ ವದಂತಿಯೂ ಹರಡಿದೆ. ಇದು ಆತಂಕ ಸೃಷ್ಟಿಯಾಗಿ ಭಕ್ತರು ದಿಕ್ಕಾಪಾಲಾಗಿ ಓಡಲು ಆರಂಭಿಸಿದ್ದು, ಹಲವರು ಕೆಳಗೆ ಬಿದ್ದು ಕಾಲ್ತುಳಿತ ಸಂಭವಿಸಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಘಟನೆಯಲ್ಲಿ ಗಾಯಗೊಂಡವರನ್ನು ಲಖಿಸರಾಯ್ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರಲ್ಲಿ ಬಹುತೇಕರು ಮಹಿಳೆಯರು ಎಂದು ವರದಿಯಾಗಿದೆ. ಘಟನೆ ಬಳಿಕ ಪೊಲೀಸರು, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದಾರೆ.

Kishor KV

Leave a Reply

Your email address will not be published. Required fields are marked *