ರಕ್ತದಲ್ಲಿನ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸುವುದು ಹೇಗೆ? – ಇಲ್ಲಿದೆ ಸಿಂಪಲ್ ಟಿಪ್ಸ್!

ಪ್ರತಿಯೊಬ್ಬ ಮನುಷ್ಯನ ಆರೋಗ್ಯ ಉತ್ತಮವಾಗಿರಬೇಕು ಎಂದರೆ ದೇಹದಲ್ಲಿರುವ ಕೆಂಪು, ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್ಲೆಟ್ಗಳು ಸರಿಯಾದ ಪ್ರಮಾಣದಲ್ಲಿ ಇರಲೇಬೇಕು. ಮುಖ್ಯವಾಗಿ ರಕ್ತವು ಸರಿಯಾಗಿ ಹೆಪ್ಪುಗಟ್ಟುವುದನ್ನು ಖಚಿತಪಡಿಸಿಕೊಳ್ಳಲು ಪ್ಲೇಟ್ಲೆಟ್ ಮಟ್ಟವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ನೈಸರ್ಗಿಕವಾಗಿ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸುವುದು ಹೇಗೆ?ಈ ಪ್ಲೇಟ್ಲೆಟ್ ಕೌಂಟ್ ಕಡಿಮೆಯಾದರೆ ಏನಾಗುತ್ತದೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಿಸಿ ನೀರಿಗೆ ಇದನ್ನ ಮಿಕ್ಸ್ ಮಾಡಿ ಕುಡಿದ್ರೆ ದೇಹದಲ್ಲಾಗುತ್ತೆ ಮ್ಯಾಜಿಕ್!
ದೇಹದಲ್ಲಿ ಪ್ಲೇಟ್ಲೆಟ್ಗಳ ಪ್ರಮಾಣ ಕಡಿಮೆಯಾದರೆ ಸಣ್ಣ ಗಾಯದಲ್ಲಿಯೂ ಹೆಚ್ಚು ರಕ್ತಸ್ರಾವ, ದೇಹದಲ್ಲಿ ಸುಲಭವಾಗಿ ನೀಲಿ ಕಲೆಗಳು ಕಾಣಿಸಿಕೊಳ್ಳುವುದು, ಮೂಗಿನಿಂದ ಅಥವಾ ಒಸಡುಗಳಿಂದ ರಕ್ತಸ್ರಾವ, ಆಯಾಸದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದನ್ನ ವೈದ್ಯಕೀಯ ಭಾಷೆಯಲ್ಲಿ ಥ್ರಾಂಬೋಸೈಟೋಪೀನಿಯಾ ಎಂದು ಕರೆಯಲಾಗುತ್ತದೆ. ವೈದ್ಯರ ಪ್ರಕಾರ, ಪ್ಲೇಟ್ಲೆಟ್ಗಳ ಪ್ರಮಾಣ ಕಡಿಮೆಯಾಗಲು ಡೆಂಗ್ಯೂ, ವೈರಲ್ ಸೋಂಕುಗಳು, ಕೆಲವು ಔಷಧಿಗಳು, ವಿಟಮಿನ್ ಕೊರತೆ, ಮೂಳೆಮಜ್ಜೆಯ ಸಮಸ್ಯೆಗಳು ಅಥವಾ ಇತರ ಆರೋಗ್ಯ ಸಮಸ್ಯೆಗಳು ಕಾರಣವಾಗಬಹುದು. ಆದ್ದರಿಂದ ಮೊದಲು ಮೂಲ ಕಾರಣವನ್ನ ಪತ್ತೆಹಚ್ಚಿ ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ಸೌಮ್ಯ ಪ್ರಕರಣಗಳಲ್ಲಿ ಪೌಷ್ಟಿಕ ಆಹಾರ ಮತ್ತು ಆರೋಗ್ಯಕರ ಜೀವನಶೈಲಿ ಸಹಾಯಕವಾಗಬಹುದು, ಆದರೆ ಗಂಭೀರ ಪ್ರಕರಣಗಳಲ್ಲಿ ವೈದ್ಯಕೀಯ ಚಿಕಿತ್ಸೆ ಅನಿವಾರ್ಯ.
ಆರೋಗ್ಯ ತಜ್ಞರು ಹೇಳುವಂತೆ, ಪ್ಲೇಟ್ಲೆಟ್ಗಳ ಉತ್ಪಾದನೆಗೆ ವಿಟಮಿನ್ C, ವಿಟಮಿನ್ B12, ಫೋಲೇಟ್, ಕಬ್ಬಿಣ ಹಾಗೂ ವಿಟಮಿನ್ K ಸಮೃದ್ಧ ಆಹಾರಗಳು ನೆರವಾಗಬಹುದು. ಕಿತ್ತಳೆ, ನಿಂಬೆ, ಕಿವಿ, ಪಪ್ಪಾಯಿ, ಬೆರ್ರಿ ಹಣ್ಣುಗಳು, ಪಾಲಕ್, ಬ್ರೊಕೊಲಿ, ಹಸಿರು ಸೊಪ್ಪುಗಳು, ಬೇಳೆಕಾಳುಗಳು, ಮೊಟ್ಟೆ, ಹಾಲಿನ ಉತ್ಪನ್ನಗಳು ಹಾಗೂ ಕಾಳು-ಬೀಜಗಳನ್ನ ನಿಯಮಿತವಾಗಿ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಲಾಗಿದೆ.
ಪಪ್ಪಾಯಿ ಹಣ್ಣು ಮತ್ತು ವಿಶೇಷವಾಗಿ ಪಪ್ಪಾಯಿ ಎಲೆಯ ಸಾರವು ಡೆಂಗ್ಯೂ ರೋಗಿಗಳಲ್ಲಿ ಪ್ಲೇಟ್ಲೆಟ್ ಮಟ್ಟವನ್ನ ಹೆಚ್ಚಿಸಲು ಸಹಾಯಕವಾಗಬಹುದು ಎಂಬ ಕೆಲವು ಅಧ್ಯಯನಗಳಿವೆ. ಆದರೆ ಇದನ್ನ ವೈದ್ಯರ ಸಲಹೆಯಿಲ್ಲದೆ ಚಿಕಿತ್ಸೆಯ ಪರ್ಯಾಯವಾಗಿ ಬಳಸಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ. ಇದರ ಜೊತೆಗೆ ಸಾಕಷ್ಟು ನೀರು ಕುಡಿಯುವುದು, ದೇಹವನ್ನ ಹೈಡ್ರೇಟ್ ಆಗಿಡುವುದು, ಸಮತೋಲನ ಆಹಾರ ಸೇವಿಸುವುದು ಮತ್ತು ಸಮರ್ಪಕ ವಿಶ್ರಾಂತಿ ಪಡೆಯುವುದೂ ರಕ್ತದ ಆರೋಗ್ಯಕ್ಕೆ ಸಹಕಾರಿ. ಸೋಂಕಿನ ಸಮಯದಲ್ಲಿ ದೇಹದ ಚೇತರಿಕೆಗೆ ಇದು ನೆರವಾಗುತ್ತದೆ.
ಆಹಾರ ಸೇವಿಸುವಷ್ಟೇ ಅಲ್ಲ, ಕೆಲವು ಅಭ್ಯಾಸಗಳನ್ನ ತಪ್ಪಿಸುವುದೂ ಮುಖ್ಯ. ಅತಿಯಾದ ಮದ್ಯಪಾನ, ಧೂಮಪಾನ, ಪೌಷ್ಟಿಕಾಂಶ ಕಡಿಮೆ ಇರುವ ಜಂಕ್ ಫುಡ್ಗಳ ಅತಿಯಾದ ಸೇವನೆ ಹಾಗೂ ವೈದ್ಯರ ಸಲಹೆಯಿಲ್ಲದೆ ಔಷಧ ಅಥವಾ ಪೂರಕಗಳನ್ನ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಪ್ಲೇಟ್ಲೆಟ್ ಕೌಂಟ್ ಕಡಿಮೆಯಿದೆ ಎಂದು ತಿಳಿದ ಕೂಡಲೇ ಸ್ವಯಂ ಔಷಧೋಪಚಾರಕ್ಕೆ ಮುಂದಾಗಬಾರದು. ವಿಶೇಷವಾಗಿ ಡೆಂಗ್ಯೂ, ನಿರಂತರ ರಕ್ತಸ್ರಾವ, ತೀವ್ರ ಆಯಾಸ ಅಥವಾ ಪ್ಲೇಟ್ಲೆಟ್ಗಳು ತುಂಬಾ ಕಡಿಮೆಯಾಗಿರುವ ಸಂದರ್ಭಗಳಲ್ಲಿ ತಕ್ಷಣ ವೈದ್ಯರನ್ನ ಸಂಪರ್ಕಿಸಬೇಕು. ಅಗತ್ಯವಿದ್ದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ, ರಕ್ತ ಪರೀಕ್ಷೆ ಹಾಗೂ ಇತರೆ ವೈದ್ಯಕೀಯ ಆರೈಕೆ ಅಗತ್ಯವಾಗಬಹುದು.
ಆರೋಗ್ಯ ತಜ್ಞರ ಅಭಿಪ್ರಾಯದಂತೆ, ಯಾವುದೇ ಒಂದು ಆಹಾರ ಅಥವಾ ಮನೆಮದ್ದು ಮಾತ್ರ ಪ್ಲೇಟ್ಲೆಟ್ಗಳನ್ನ ತಕ್ಷಣ ಹೆಚ್ಚಿಸುತ್ತದೆ ಎಂಬುದಕ್ಕೆ ಸಾಕಷ್ಟು ವೈಜ್ಞಾನಿಕ ಸಾಕ್ಷ್ಯ ಇಲ್ಲ. ಆರೋಗ್ಯಕರ ಆಹಾರ, ಸಮರ್ಪಕ ಚಿಕಿತ್ಸೆ ಮತ್ತು ವೈದ್ಯರ ಸಲಹೆಗಳನ್ನ ಅನುಸರಿಸುವುದು ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಒಟ್ಟಾರೆ ರಕ್ತದಲ್ಲಿನ ಪ್ಲೇಟ್ಲೆಟ್ಗಳ ಪ್ರಮಾಣ ಕಡಿಮೆಯಾದರೆ ಆತಂಕಪಡುವ ಬದಲು ಕಾರಣವನ್ನ ಪತ್ತೆಹಚ್ಚಿ, ವೈದ್ಯಕೀಯ ಸಲಹೆಯೊಂದಿಗೆ ಪೌಷ್ಟಿಕ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನ ಅನುಸರಿಸುವುದು ಉತ್ತಮ. ಇದು ದೇಹದ ಚೇತರಿಕೆಗೆ ನೆರವಾಗುವುದರ ಜೊತೆಗೆ ಒಟ್ಟಾರೆ ಆರೋಗ್ಯವನ್ನೂ ಸುಧಾರಿಸಲು ಸಹಕಾರಿಯಾಗುತ್ತದೆ.

ನೋಡಿರಿ

