ಶಾಲೆಗೆ ರಜೆ ಕೊಡಿಸಿದ ಕಾಡಾನೆಗಳ ಹಿಂಡು – ಸುಳ್ಯದಲ್ಲಿ ಗಜಪಡೆಯ ಕಾಟಕ್ಕೆ ಸ್ಕೂಲ್ ಬಂದ್

ಸುಳ್ಯದಲ್ಲಿ ಕಾಡಾನೆಗಳ ಕಾಟಕ್ಕೆ ಕೃಷಿಕರು ಮಾತ್ರವಲ್ಲ. ಶಾಲೆಯ ಮಕ್ಕಳು ಕೂಡಾ ಸಂಕಷ್ಟಕ್ಕೀಡಾಗಿದ್ದಾರೆ. ಶಾಲೆಯೊಂದರ ಪಕ್ಕದಲ್ಲೇ ಕಾಡಾನೆಗಳು ಬೀಡು ಬಿಟ್ಟಿದ್ದು, ಆನೆ ಬಂತೊಂದಾನೆ ಯಾವೂರ ಆನೆ ಎಂದು ಹಾಡಿ ನಲಿಯುತ್ತಿದ್ದ ಪುಟಾಣಿಗಳು ಕಣ್ಣೆದುರೇ ಆನೆಗಳ ಹಿಂಡು ನೋಡಿ ಬೆಚ್ಚಿಬಿದ್ದಿದ್ದಾರೆ. ಶಾಲಾ ಪರಿಸರದಲ್ಲೇ ಕಾಡಾನೆಗಳ ಸಂಚಾರ ಇದ್ದಿದ್ದರಿಂದ ಶಾಲೆಗೆ ಸೋಮವಾರ ರಜೆ ನೀಡಲಾಗಿತ್ತು.
ಇದನ್ನೂ ಓದಿ:ಬೆಂಗಳೂರು ಟ್ರಾಫಿಕ್ ಜಾಮ್‌ನಲ್ಲಿ ದೇಶಕ್ಕೆ ಫಸ್ಟ್! – ವಿಶ್ವದಲ್ಲೇ ನಂಬರ್ ಎರಡನೇ ಸ್ಥಾನವೂ ಬೆಂಗಳೂರಿಗೆ!
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ದುಗಲಡ್ಕ, ಕಂದಡ್ಕ, ನೀರಬಿದಿರೆ ಹಾಗೂ ಕೊಯಿಕುಳಿ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ಭಾನುವಾರದಿಂದಲೇ ಕೊಯಿಕುಳಿ ಶಾಲೆಯ ಬಳಿ ಆರು ಆನೆಗಳು ಬೀಡುಬಿಟ್ಟಿದ್ದವು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸೋಮವಾರ ಶಾಲೆಗೆ ರಜೆ ಘೋಷಿಸಲಾಗಿತ್ತು. ಮಂಗಳವಾರ ಶಾಲೆ ತೆರೆದಿದ್ದರೂ ಮಕ್ಕಳು ಮತ್ತು ಪೋಷಕರು, ಶಾಲಾ ಸಿಬ್ಬಂದಿಯ ಆತಂಕ ಕಡಿಮೆಯಾಗಿಲ್ಲ.
ಕಳೆದ ಹಲವು ದಿನಗಳಿಂದ ಕಂದಡ್ಕ ಪ್ರದೇಶದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು, ಇದೀಗ ನೀರಬಿದಿರೆ, ಕೊಯಿಕುಳಿ ಭಾಗದಲ್ಲಿ ಸಂಚರಿಸುತ್ತಿವೆ. ಕೃಷಿ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಕೃಷಿ ಬೆಳೆಗಳಿಗೆ ಹಾನಿ ಮಾಡಿವೆ. ಎರಡು ಗುಂಪುಗಳಲ್ಲಿ ಸಂಚರಿಸುತ್ತಿರುವ ಕಾಡಾನೆಗಳ ಹಿಂಡಿನಲ್ಲಿ ಮರಿ ಸೇರಿ ಒಟ್ಟು ಆರು ಆನೆಗಳಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಎಲಿಫೆಂಟ್ ಟಾಸ್ಕ್ ಫೋರ್ಸ್ ಸಿಬ್ಬಂದಿ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಾಡಾನೆಗಳ ಹಾವಳಿ ಹಿನ್ನೆಲೆಯಲ್ಲಿ ಸುಳ್ಯ ಶಾಸಕಿ ಭಾಗೀರತಿ ಮುಳ್ಯ ಕೂಡಾ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಆನೆಗಳ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.
ಕೊಯಿಕುಳಿ ಶಾಲೆಯಲ್ಲಿ ಮಂಗಳವಾರ ಶಾಲೆ ಮರು ಆರಂಭಿಸಿದರು ಕೂಡಾ ಮಕ್ಕಳ ಜೊತೆ ಪೋಷಕರು ಕೂಡಾ ಶಾಲೆಗೆ ಬಂದಿದ್ದರು. ಅರಣ್ಯ ಇಲಾಖೆಯವರು ಶಾಲಾ ಅವಧಿಯಲ್ಲಿ ಮಕ್ಕಳ ಸುರಕ್ಷತೆಗಾಗಿ ಸಿಬ್ಬಂದಿಯನ್ನು ನಿಯೋಜಿಸುವ ಭರವಸೆ ನೀಡಿದ್ದಾರೆ.

ನೋಡಿರಿ

