ಇದರಲ್ಲಿ ಏನೋ ಮ್ಯಾಜಿಕ್ ಇದೆ – ಭಾರತಕ್ಕೆ ಗೆಲುವು ತಂದುಕೊಟ್ಟ ಸಿರಾಜ್ ಬ್ಯಾಟ್ ಚೆಕ್

ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ. ಶ್ರೀಲಂಕಾ ಇಲೆವೆನ್ ವಿರುದ್ಧ ನಡೆದ ಈ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಿರಾಜ್ ಕೇವಲ 15 ಎಸೆತಗಳಲ್ಲಿ 32 ರನ್ ಚಚ್ಚುವ ಮೂಲಕ ಟೀಮ್ ಇಂಡಿಯಾಗೆ ರೋಚಕ ಜಯ ತಂದುಕೊಟ್ಟಿದ್ದರು.
ಇದನ್ನೂ ಓದಿ: ಸ್ಪಿನ್ ಬೌಲಿಂಗ್ ನಲ್ಲಿ ಬ್ಯಾಟಿಂಗ್ ಕಷ್ಟ ಕಷ್ಟ – ಅನುಭವಿಗಳಲ್ಲದೆ ಲಂಕಾ ಟೆಸ್ಟ್ ಸರಣಿ ಗೆಲ್ಲುತ್ತಾ ಭಾರತ?
ಕೊಲಂಬೊದಲ್ಲಿ ನಡೆದ ಲಂಕಾ ವಿರುದ್ಧದ ಅಭ್ಯಾಸ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಭಾರತ ತಂಡಕ್ಕೆ ಗೆಲ್ಲಲು 45 ಓವರ್ಗಳಲ್ಲಿ 207 ರನ್ಗಳ ಗುರಿ ನೀಡಲಾಗಿತ್ತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಕೊನೆಯ 8 ಎಸೆತಗಳಲ್ಲಿ 27 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಕ್ರೀಸ್ನಲ್ಲಿದ್ದ ಮೊಹಮ್ಮದ್ ಸಿರಾಜ್ 6, 1, 6, 6, 6, 4 ಚಚ್ಚುವ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು. ಈ ಮೂಲಕ ಭಾರತ ತಂಡಕ್ಕೆ 6 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ.
ಸಿರಾಜ್ ಅವರ ಈ ಅನಿರೀಕ್ಷಿತ ಬ್ಯಾಟಿಂಗ್ ಪರಾಕ್ರಮವನ್ನು ಕಂಡು ಶ್ರೀಲಂಕಾ ಆಟಗಾರರು ಆಶ್ಚರ್ಯಚಕಿತರಾದರು. ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡುವಾಗ, ಶ್ರೀಲಂಕಾದ ಫೀಲ್ಡರ್‌ಗಳು ಸಿರಾಜ್ ಅವರನ್ನು ಸುತ್ತುವರಿದರು. ತಮಾಷೆಯಾಗಿ ಅವರ ಕೈಲಿದ್ದ ಬ್ಯಾಟ್ ಅನ್ನು ಕಸಿದುಕೊಂಡು, “ಇದರಲ್ಲಿ ಏನೋ ಮ್ಯಾಜಿಕ್ ಇದೆ” ಎಂಬಂತೆ ತಿರುಗಿಸಿ ಪರಿಶೀಲಿಸಲು ಆರಂಭಿಸಿದರು. ಸಿರಾಜ್ ಕೂಡ ನಗುತ್ತಲೇ ತಮ್ಮ ಬ್ಯಾಟ್ ಅನ್ನು ಅವರಿಗೆ ತೋರಿಸಿದರು. ಇದೀಗ ಈ ಬ್ಯಾಟ್ ಪರಿಶೀಲನೆಯ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ನೋಡಿರಿ

