ಕ್ಯಾನ್ಸರ್ ಪೀಡಿತೆಯನ್ನು ವಿಮಾನದಿಂದ ಕೆಳಗಿಳಿಸಿದ ಸಿಬ್ಬಂದಿ – ದೆಹಲಿಯಲ್ಲಿ ಅಮಾನವೀಯ ವರ್ತನೆ
ನವದೆಹಲಿ: ಕೆಲದಿನಗಳಿಂದ ವಿಮಾನ ಪ್ರಯಾಣ ಒಂದಿಲ್ಲೊಂದು ವಿಚಾರಗಳಿಂದ ಸುದ್ದಿಯಾಗುತ್ತಿದೆ. ಇತ್ತೀಚೆಗೆ ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬಳು ಪ್ರಯಾಣಿಸುವ ವೇಳೆ ಆಕೆಯ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ್ದ. ಈ ಪ್ರಕರಣ ಈಗ ಕೋರ್ಟ್ ಮೆಟ್ಟಿಲೇರಿದೆ. ಇದಾದ ಬಳಿಕ ಮಹಿಳೆಯರಿಬ್ಬರು ಜಡೆ ಹಿಡಿದುಕೊಂಡು ಹೊಡೆದಾಡಿಕೊಂಡಿರುವ ದೃಶ್ಯ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳಾ ಕ್ಯಾನ್ಸರ್ ರೋಗಿಯೊಬ್ಬರನ್ನು ವಿಮಾನದಿಂದ ಕೆಳಗೆ ಇಳಿಸಿದ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಅಮೆರಿಕಕ್ಕೆ ಹೋಗೋ ಪ್ಲಾನ್ ಇದ್ಯಾ? – ಭಾರತೀಯರಿಗೆ ವೀಸಾ ಪಡೆಯಲು ಹೊಸ ನಿಯಮ
ಜನವರಿ 30 ರಂದು ಮೀನಾಕ್ಷಿ ಸೇನ್ ಗುಪ್ತಾ ಎಂಬಾಕೆ ಅಮೆರಿಕ ಏರ್ಲೈನ್ಸ್ ವಿಮಾನದಲ್ಲಿ ಪ್ರಯಾಣ ಬೆಳೆಸಲು ಬಂದಿದ್ದರು. ಈ ವೇಳೆ ವಿಮಾನದ ಸಿಬ್ಬಂದಿಯ ಬಳಿ ಮೀನಾಕ್ಷಿ ತಮ್ಮ ಕೈಚೀಲವನ್ನು ಕ್ಯಾಬಿನ್ನಲ್ಲಿ ಇಡಲು ಫ್ಲೈಟ್ ಅಟೆಂಡೆಂಟ್ ಬಳಿ ವಿನಂತಿಸಿದ್ದರು. ಆದರೆ, ಅವರಿಗೆ ವಿಮಾನದ ಗಗನಸಖಿ ಯಾವುದೇ ಸಹಕಾರ ನೀಡಲಿಲ್ಲ. ಅದು ಭಾರ ಇದ್ದ ಕಾರಣ ಗಗನ ಸಖಿಯ ನೆರವು ಕೋರಿದ್ದರು. ಆದರೆ, ವಿಮಾನದ ಸಿಬ್ಬಂದಿ ಸಹಾಯ ಮಾಡುವುದರ ಬದಲಾಗಿ, ಇದು ತಮ್ಮ ಕೆಲಸವಲ್ಲ ಎಂದು ಹೇಳಿದ್ದಾರೆ. ಮಾತ್ರವಲ್ಲ ಮೀನಾಕ್ಷಿ ಅವರನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ.
ಮೀನಾಕ್ಷಿ ಸೇನ್ಗುಪ್ತಾ ಈ ಘಟನೆ ವಿರುದ್ಧ ದೂರು ದಾಖಲಿಸಿದ ನಂತರ ಇದು ಬೆಳಕಿಗೆ ಬಂದಿದೆ. ಈ ಬಗ್ಗೆ ಮೀನಾಕ್ಷಿ ಗುಪ್ತಾ ದೆಹಲಿ ಪೊಲೀಸರಿಗೆ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ನೀಡಿದ ದೂರಿನಲ್ಲಿ ‘ತನ್ನ ಕೈಗಳು ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಿಂದ ದುರ್ಬಲವಾಗಿರುವುದರಿಂದ ಹ್ಯಾಂಡ್ಬ್ಯಾಗ್ ಮೇಲಿಡಲು ಸಾಧ್ಯವಿಲ್ಲ ಎಂದು ತಿಳಿಸಿದರೂ ಗಗನಸಖಿ ಸಹಾಯ ಮಾಡಲಿಲ್ಲ. ವಿಮಾನದ ನಿಗದಿತ ಸೀಟಿಗೆ ತೆರಳಲು ತಾನು ವೀಲ್ಚೇರ್ ಸಹಾಯವನ್ನು ಪಡೆದಿದ್ದೆ. ಇದು ಎಲ್ಲರಿಗೂ ಕಾಣಿಸುವಂತಿತ್ತು. ಇದರಿಂದ ನಾನು ಆರೋಗ್ಯವಾಗಿಲ್ಲ ಎಂದು ಎಲ್ಲರಿಗೂ ಗೊತ್ತಾಗುತ್ತದೆ. ನಾನು ಯಾವುದೇ ಭಾರವನ್ನು ಕೈಯಲ್ಲಿ ಎತ್ತಿಕೊಳ್ಳುವಂತೆ ಇಲ್ಲ. ಹೆಚ್ಚು ನಡೆಯುವುದರಿಂದ ಮತ್ತು ಭಾರ ಎತ್ತುವುದರಿಂದ ನಾನು ದೈಹಿಕವಾಗಿ ದುರ್ಬಲವಾಗುತ್ತೇನೆ. ಗ್ರೌಂಡ್ ಸ್ಟಾಫ್ಗಳು ನನಗೆ ತುಂಬಾ ಬೆಂಬಲ ನೀಡಿದ್ದಾರೆ. ವಿಮಾನದೊಳಗೆ ಹೋಗಲು ಮತ್ತು ಸೀಟಿನ ಬದಿಯಲ್ಲಿ ಬ್ಯಾಗ್ ಇರಿಸಲು ನನಗೆ ಸಹಾಯ ಮಾಡಿದರು. ಆದರೆ ವಿಮಾನದೊಳಗೆ ನನಗೆ ಗಗನಸಖಿಯರು ಸಹಾಯ ಮಾಡಲಿಲ್ಲ. ನನ್ನ ಮನವಿಯನ್ನು ನಿರಾಕರಿಸಿದರು ಎಂದಿದ್ದಾರೆ.
ಗಗನಸಖಿಯೊಂದಿಗೆ ನಾನು ಹಲವು ಬಾರಿ ಸಹಾಯ ಯಾಚಿಸಿದೆ. ಆದರೆ ಗಗನಸಖಿ ತುಂಬಾ ನಿಷ್ಟುರವಾಗಿ ನಡೆಸಿಕೊಂಡರು. ನಿಮಗೆ ಈ ವಿಮಾನದದಲ್ಲಿ ಆರಾಮದಾಯಕವಾಗಿಲ್ಲದಿದ್ದರೆ ವಿಮಾನದಿಂದ ಇಳಿದುಹೋಗಬಹುದೆಂದು ಹೇಳಿದ್ದಾರೆ. ಅಲ್ಲದೇ ನನ್ನನ್ನು ವಿಮಾನದಿಂದ ಇಳಿಸುವ ನಿರ್ಧಾರಕ್ಕೆ ಬಂದರು ಎಂದು ಸೇನ್ಗುಪ್ತಾ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸೇನ್ಗುಪ್ತಾ ಅವರು ತಮ್ಮ ನೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹೊರಹಾಕಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗಿದ್ದು, ವಿಷಯದ ಕುರಿತು ಮಧ್ಯಪ್ರವೇಶಿಸುವಂತೆ ನೆಟ್ಟಿಗರು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ದೆಹಲಿಯ ಮಹಿಳಾ ಆಯೋಗಕ್ಕೆ ಟ್ಯಾಗ್ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಘಟನೆ ಬಗ್ಗೆ ವಿವರಣೆ ನೀಡುವಂತೆ ಭಾರತದ ವಿಮಾನಯಾನ ನಿರ್ದೇಶನಾಲಯವು ಅಮೆರಿಕ ಏರ್ಲೈನ್ಸ್ಗೆ ಸೂಚಿಸಿದೆ.