ಗಿಲ್ ವಿಶ್ವಕ್ಕೆ ನಂಬರ್ 1 – ಲಕ್ಷ್ಮಣ್ ಗೆಲುವು ಗಂಭೀರ್‌ಗೆ ಕಂಟಕ?
ENG ಕೋಚ್ ರೇಸ್.. ದ್ರಾವಿಡ್ OUT

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಟೀಮ್ ಇಂಡಿಯಾದ ಸ್ವಿಂಗ್ ಸುಲ್ತಾನ್ ಎಂದೇ ಫೇಮಸ್ ಆಗಿರುವ ಮೊಹಮ್ಮದ್ ಶಮಿ ಅವರ ಕೆರಿಯರ್ ಎಂಡ್ ಆಗಲಿದ್ಯಾ?. ಯಾಕೆಂದರೆ, ಟೀಮ್ ಇಂಡಿಯಾ ಆಯ್ಕೆ ಸಮಿತಿ ಯಾವ ಪಂದ್ಯಕ್ಕೂ ಶಮಿಯನ್ನು ಪರಿಗಣಿಸುತ್ತಿಲ್ಲ. 2023ರ ಏಕದಿನ ವಿಶ್ವಕಪ್‌ನಲ್ಲಿ ಕೇವಲ 7 ಪಂದ್ಯಗಳಿಂದ 24 ವಿಕೆಟ್ ಪಡೆದು ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ವೇಗಿ ಶಮಿ ಈಗ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಸೆಲೆಕ್ಟ್ ಆಗಿಲ್ಲ. ಶಮಿ ಪ್ಲೇಸ್‌ಗೆ ಗುರ್ನೂರ್ ಬ್ರಾರ್ಗೆ ಚಾನ್ಸ್ ಕೊಟ್ಟಿದ್ದು, ಶಮಿ ಕೆರಿಯರ್ ಮುಗಿದಂತೆ ಎಂದು ಹೇಳಲಾಗ್ತಿದೆ.
ಅಫ್ಘಾನಿಸ್ತಾನ ಹಾಗೂ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ಇದೀಗ ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ನಂಬರ್ ಒನ್ ಪಟ್ಟಕ್ಕೇರಿದ್ದಾರೆ. ಕಳೆದ ವಾರ ಕೇವಲ 1 ಪಾಯಿಂಟ್ನಿಂದ ಅಗ್ರಸ್ಥಾನದಿಂದ ವಂಚಿತರಾಗಿದ್ದ ಗಿಲ್, ಈ ವಾರ ನಂಬರ್ 1 ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿದ್ರೆ, ರೋಹಿತ್ ಶರ್ಮಾ 4ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾಗೆ ರಹಾನೆ ಗುಡ್ ಬೈ – TESTನಲ್ಲಿ ಸೋಲನ್ನೇ ಕಾಣದ ಕ್ಯಾಪ್ಟನ್
ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಇಶಾನ್ ಕಿಶನ್ ನಂಬರ್ 1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ, 916 ರೇಟಿಂಗ್ ಪಾಯಿಂಟ್ ಗಳಿಸಿ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರ ದಾಖಲೆಗಳನ್ನು ಹಿಂದಿಕ್ಕಿದ್ದಾರೆ. ಟಿ20 ಶ್ರೇಯಾಂಕದಲ್ಲಿ ಅಭಿಷೇಕ್ ಶರ್ಮಾ 3 ನೇ ಸ್ಥಾನಕ್ಕೆ ಕುಸಿದಿದ್ದಾರೆ.
T20 ಬ್ಯಾಟ್ಸ್‌ಮನ್‌ಗಳ ರಾಂಕಿಂಗ್ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ 230 ಸ್ಥಾನಗಳಲ್ಲಿ ಏರಿಕೆ ಕಂಡಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಗೂ ಮುನ್ನ ವೈಭವ್ 278ನೇ ಸ್ಥಾನದಲ್ಲಿದ್ದರು. ಇದೀಗ ಈ ಸರಣಿಯಲ್ಲಿ 151 ರನ್ ಗಳಿಸುವ ಮೂಲಕ T20 ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಜಿಗಿತ ಕಂಡು, 48ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
15 ವರ್ಷದ ವೈಭವ್ ಸೂರ್ಯವಂಶಿ ತಮ್ಮ ನಿರ್ಭೀತ ಆಟದಿಂದ ಇಡೀ ಕ್ರಿಕೆಟ್ ಲೋಕವನ್ನೇ ಅಚ್ಚರಿಗೊಳಿಸಿದ್ದಾರೆ. ಇದೀಗ ವೈಭವ್‌ಗೆ ನೀವು ಎದುರಿಸಲು ಇಷ್ಟಪಡದ ಅಥವಾ ನಿಮಗೆ ಭಯ ಹುಟ್ಟಿಸುವ ಒಬ್ಬ ಬೌಲರ್ ಯಾರು ಎಂದು ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ವೈಭವ್ ಕೋಯಿ ನಹೀ ಹೈ ಅಭಿ.. ಅಂದ್ರೆ ಇದುವರೆಗೆ ಯಾರೂ ಇಲ್ಲ ಅಂತ ಹೇಳಿದ್ದಾರೆ. ಈ ಮೂಲಕ ಜಾಗತಿಕ ವೇದಿಕೆಯಲ್ಲಿರುವ ಬೌಲರ್‌ಗಳ ಬಗ್ಗೆ ಯಾವುದೇ ಭಯವಿಲ್ಲ ಅನ್ನೋದನ್ನ ಸೂರ್ಯವಂಶಿ ಹೇಳಿದ್ದಾರೆ.
ಐರ್ಲೆಂಡ್, ಇಂಗ್ಲೆಂಡ್ ವಿರುದ್ಧ ಸರಣಿ ಸೋಲಿನ ನಂತರ ಕೋಚ್ ಗೌತಮ್ ಗಂಭೀರ್ ವಿರುದ್ಧ ತೀವ್ರ ಟೀಕೆ ಕೇಳಿಬರುತ್ತಿವೆ. ಮತ್ತೊಂದೆಡೆ, ಕೋಚ್ ವಿವಿಎಸ್ ಲಕ್ಷ್ಮಣ್ ನೇತೃತ್ವದ ತಂಡ ಜಿಂಬಾಬ್ವೆ ವಿರುದ್ಧ ಟಿ20 ಸರಣಿಯನ್ನು ಗೆದ್ದಿರುವುದು ಗಂಭೀರ್‌ಗೆ ಟಾಂಗ್ ಕೊಟ್ಟಂತಾಗಿದೆ. ಈ ವಿಚಾರದ ಬಗ್ಗೆ ಮಾತಾನಾಡಿದ RCB ಮಾಜಿ ಪ್ಲೇಯರ್, ಎಬಿ ಡಿವಿಲಿಯರ್ಸ್ ವಿವಿಎಸ್ ಲಕ್ಷ್ಮಣ್ ಯಶಸ್ಸು ಗೌತಮ್ ಗಂಭೀರ್ ಮೇಲೆ ಒತ್ತಡ ಹೇರಿದೆ ಎಂದಿದ್ದಾರೆ.
ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಸೋತ ಪಾಕಿಸ್ತಾನಕ್ಕೆ ಐಸಿಸಿ ಶಾಕ್ ನೀಡಿದೆ. ಪಾಕ್ ಬೌಲರ್‌ಗಳಾದ ಮೊಹಮ್ಮದ್ ಅಬ್ಬಾಸ್ ಮತ್ತು ಖುರ್ರಮ್ ಶಹಜಾದ್, ಪಂದ್ಯದ ವೇಳೆ ಅವಾಚ್ಯ ಶಬ್ದಗಳನ್ನು ಬಳಸಿದ್ದು, ಲೆವೆಲ್ 1 ರ ಉಲ್ಲಂಘನೆಯಾಗಿದೆ. ಮೊಹಮ್ಮದ್ ಅಬ್ಬಾಸ್ಗೆ ವಾಗ್ದಂಡನೆ ನೀಡಿದರೆ, ಖುರ್ರಮ್ ಶಹಜಾದ್ ಅವರ ಪಂದ್ಯ ಶುಲ್ಕದ 15% ಮೊತ್ತ ದಂಡ ಜೊತೆಗೆ ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ.
ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ್ ನಡುವಿನ ಮೊದಲ ಟೆಸ್ಟ್ ಪಂದ್ಯ ಅಪರೂಪದ ದಾಖಲೆಗೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಒಟ್ಟು 40 ವಿಕೆಟ್ಗಳು ಉರುಳಿದ್ದವು. ಈ 40 ವಿಕೆಟ್ಗಳನ್ನು ಕಬಳಿಸಿದ್ದು ವೇಗಿಗಳು ಎಂಬುದು ವಿಶೇಷ. ಅಂದರೆ ಪಾಕಿಸ್ತಾನ್ ಪರ ಎರಡು ಇನಿಂಗ್ಸ್ಗಳಲ್ಲಿ 20 ವಿಕೆಟ್ಗಳನ್ನು ವೇಗದ ಬೌಲರ್ಗಳು ಮಾತ್ರ ಕಬಳಿಸಿದ್ದರು. ಇತ್ತ ವೆಸ್ಟ್ ಇಂಡೀಸ್ ವೇಗಿಗಳು ಕೂಡ ಎರಡು ಇನಿಂಗ್ಸ್ಗಳಿಂದ 20 ವಿಕೆಟ್ ಉರುಳಿಸಿದ್ದರು. ಈ ಮೂಲಕ ವೇಗಿಗಳು ಅಪರೂಪದ ದಾಖಲೆ ಬರೆದಿದ್ದಾರೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಗುರುಪೂರ್ಣಿಮೆ ದಿನ, ರಮಾಕಾಂತ್ ಅಚ್ರೇಕರ್ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸಚಿನ್, ಇಲ್ಲಿ ನಿಂತು ಕೈಮುಗಿದಾಗ ಭಾವುಕನಾಗುತ್ತೇನೆ. ಎಷ್ಟು ಕಾಲ ಉರುಳಿದರೂ, ಎಷ್ಟು ಸಮಯ ಕಳೆದರೂ ನಿಮ್ಮ ಮಾರ್ಗದರ್ಶನಕ್ಕೆ ನಾನು ಅದೆಷ್ಟು ಧನ್ಯವಾದ ಹೇಳಿದರೂ ಸಾಲದು. ನನ್ನ ಮೇಲೆ ಭರವಸೆ ಇಟ್ಟು ಕೈಹಿಡಿದು ಮುನ್ನಡೆಸಿದ ನಿಮಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಸ್ಥಾನದಿಂದ ಬ್ರೆಂಡನ್ ಮೆಕಲಮ್ ಅವರನ್ನು ವಜಾಗೊಳಿಸಲಾಗಿದ್ದು, ಸ್ಟೀಫನ್ ಫ್ಲೆಮಿಂಗ್ ಕೋಚ್ ಆಗಿ ಕಾಣಿಸಿಕೊಳ್ಳುವುದು ಬಹುತೇಕ ಕನ್ಫರ್ಮ್ ಆಗಿದೆ. ಈ ಮೂಲಕ ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ರೇಸ್‌ನಿಂದ ಭಾರತದ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಹಿಂದೆ ಸರಿದಿದ್ದಾರೆ. ಈ ಹಿಂದೆ ಇಂಗ್ಲೆಂಡ್ ತಂಡಕ್ಕೆ ದ್ರಾವಿಡ್ ಕೋಚ್ ಆಗುವುದು ಬಹುತೇಕ ಖಚಿತ ಎಂದು ಹೇಳಲಾಗಿತ್ತು.

ನೋಡಿರಿ

