ಗುರುವಾರ ಹಳದಿ ಬಣ್ಣದ ಬಟ್ಟೆ ಯಾಕೆ ಧರಿಸುತ್ತಾರೆ ಗೊತ್ತಾ? – ಮದುವೆ ಆಗದವರು ತಪ್ಪದೇ ನೋಡಿ

ಜಾತಕದಲ್ಲಿ ಗುರು ಗ್ರಹವನ್ನು ಜ್ಞಾನ, ಶಿಕ್ಷಣ, ಸಂಪತ್ತು, ಸಂತಾನ ಭಾಗ್ಯ, ಮದುವೆ ಮತ್ತು ಆಧ್ಯಾತ್ಮಿಕತೆಯ ಕಾರಕ ಎಂದು ನಂಬಲಾಗಿದೆ. ಗುರುವಿನ ಆಶೀರ್ವಾದವಿದ್ದರೆ ಜೀವನದಲ್ಲಿ ಅಭಿವೃದ್ಧಿ, ಗೌರವ ಮತ್ತು ಸಮೃದ್ಧಿ ಲಭಿಸುತ್ತದೆ. ಗುರುವಾರ ಹಳದಿ ಬಟ್ಟೆಗಳನ್ನು ಧರಿಸುವುದನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಹಾಗಿದ್ರೆ ಗುರುವಾರ ಯಾಕೆ ಹಳದಿ ಬಟ್ಟೆ ಧರಿಸುತ್ತಾರೆ ಅನ್ನೋದ್ದನ್ನ ನೋಡೋಣ.
ಇದನ್ನೂ ಓದಿ: ಶ್ರಾವಣ ಮಾಸದ ಸೋಮವಾರ ಶಿವನನ್ನ ಹೀಗೆ ಪೂಜಿಸಿ – ಶಿವನ ಆಶೀರ್ವಾದಕ್ಕೆ ಈ ಮಂತ್ರ ಪಠಿಸಿ
ಜ್ಯೋತಿಷ್ಯ ತಜ್ಞರ ಪ್ರಕಾರ, ಯಾರ ಜಾತಕದಲ್ಲಿ ಗುರು ಗ್ರಹವು ದುರ್ಬಲವಾಗಿದೆಯೋ, ಅವರು ಗುರುವಾರದಂದು ಹಳದಿ ಬಣ್ಣದ ವಸ್ತುಗಳನ್ನು ಬಳಸುವುದು ಅಥವಾ ದಾನ ಮಾಡುವುದು ಅತ್ಯಂತ ಶ್ರೇಷ್ಠ. ಈ ದಿನದಂದು ವಿಶೇಷವಾಗಿ ಹಣೆಯ ಮೇಲೆ ಹಳದಿ ಶ್ರೀಗಂಧ ಅಥವಾ ಹಳದಿ ತಿಲಕವನ್ನು ಧರಿಸಲಾಗುತ್ತದೆ. ಅಷ್ಟೇ ಅಲ್ಲದೆ, ಹಳದಿ ಬೇಳೆ (ಕಡಲೆಬೇಳೆ), ಅರಿಶಿನ, ಕೇಸರಿ, ಬೆಲ್ಲ ಮತ್ತು ತುಪ್ಪದಂತಹ ವಸ್ತುಗಳನ್ನು ದಾನ ಮಾಡುವುದರಿಂದ ಗ್ರಹದೋಷಗಳು ನಿವಾರಣೆಯಾಗುತ್ತವೆ ಎನ್ನಲಾಗುತ್ತೆ.
ವೈವಾಹಿಕ ಜೀವನದಲ್ಲಿ ತೊಂದರೆ ಎದುರಿಸುತ್ತಿರುವವರು ಅಥವಾ ವಿವಾಹ ಯೋಗ ತಡವಾಗುತ್ತಿರುವವರು ಗುರುವಾರದಂದು ವಿಶೇಷ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ಈ ದಿನ ಸಂಪೂರ್ಣ ಭಕ್ತಿಯಿಂದ ಶ್ರೀ ಮಹಾವಿಷ್ಣು ಹಾಗೂ ಗುರುರಾಯರನ್ನು ಪೂಜಿಸಿ, ಕಡ್ಡಾಯವಾಗಿ ಹಳದಿ ಬಟ್ಟೆಗಳನ್ನು ಧರಿಸಬೇಕು. ಪೂಜೆಯ ನಂತರ ಹಳದಿ ಬಣ್ಣದ ಸಾತ್ವಿಕ ಆಹಾರವನ್ನೇ ಸೇವಿಸುವುದರಿಂದ ವಿವಾಹದಲ್ಲಿ ಉಂಟಾಗುವ ಅಡೆತಡೆಗಳು ನಿವಾರಣೆಯಾಗಿ, ಕಲ್ಯಾಣ ಯೋಗ ಕೂಡಿಬರುತ್ತದೆ ಎಂದು ನಂಬಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಗುರುವಾರ ಹಳದಿ ಬಣ್ಣಕ್ಕೆ ಪ್ರಾಮುಖ್ಯತೆ ನೀಡುವುದರ ಹಿಂದೆ ಜ್ಯೋತಿಷ್ಯ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರಣಗಳು ಒಟ್ಟಾಗಿ ಕೆಲಸ ಮಾಡುತ್ತವೆ. ಹಳದಿ ಬಣ್ಣವು ನಮ್ಮ ಮನಸ್ಸಿನಲ್ಲಿ ಧನಾತ್ಮಕ ಶಕ್ತಿಯನ್ನು ಮತ್ತು ಉತ್ಸಾಹವನ್ನು ತುಂಬುತ್ತದೆ. ಜೀವನದಲ್ಲಿ ಜ್ಞಾನ, ಸಂಪತ್ತು, ವೈವಾಹಿಕ ಸಂತೋಷ ಮತ್ತು ಯಶಸ್ಸನ್ನು ಬಯಸುವ ಪ್ರತಿಯೊಬ್ಬರಿಗೂ ಗುರುವಾರದ ಹಳದಿ ಬಣ್ಣದ ಆಚರಣೆಯು ಉತ್ತಮ ಫಲವನ್ನು ನೀಡುತ್ತದೆ ಎಂದು ನಂಬಲಾಗಿದೆ.

ನೋಡಿರಿ

