ಇಂದು ಬೆಂಗಳೂರಿಗೆ ಮೋದಿ.. ವಾಹನ ಸವಾರರೇ ಅಲರ್ಟ್ – ಟ್ರಾಫಿಕ್ ರೂಲ್ಸ್ ನಲ್ಲಿ ಏನೆಲ್ಲಾ ಬದಲಾವಣೆ..!?
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜನೆಗೊಳಿಸಲಾಗಿರುವ ‘ಇಂಡಿಯಾ ಎನರ್ಜಿ ವೀಕ್’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಫೆಬ್ರವರಿ 5 ರಿಂದ 8 ರವರೆಗೆ ಮೂರು ದಿನ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮವನ್ನ ಮೋದಿ ಉದ್ಘಾಟನೆ ಮಾಡಲಿದ್ದಾರೆ.
ಇದನ್ನೂ ಓದಿ : ‘ಕೇಕ್ ಗೌನ್’ ತೊಟ್ಟು ಹೆಜ್ಜೆ ಹಾಕಿದ ಸುಂದರಿ – ಹೇಗಿತ್ತು ಗಿನ್ನೆಸ್ ದಾಖಲೆ ಬರೆದ ಕ್ಷಣ..!?
ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ದೇಶ ವಿದೇಶದಿಂದ ಗಣ್ಯರು ಆಗಮಿಸುವ ನಿರೀಕ್ಷೆ ಇದೆ. ಇದರ ಜೊತೆ ಪ್ರಧಾನಿಗಳ ಭದ್ರತೆ ಹಿನ್ನೆಲೆ ಬೆಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ವಿಶೇಷವಾಗಿ ಬೆಂಗಳೂರು -ತುಮಕೂರು ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ಫೆಬ್ರವರಿ 5, 6, 7 ರಂದು ಬೆಂಗಳೂರು ನಗರದೊಳಗೆ ಎಲ್ಲಾ ರೀತಿಯ ಲಘು, ಮಧ್ಯಮ ಹಾಗೂ ಭಾರಿ ಸರಕು ಸಾಗಣೆ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ತನಕ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಯಾವ್ಯಾವ ಮಾರ್ಗದಲ್ಲಿ ಬರುವ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ ಅನ್ನೋ ಮಾಹಿತಿ ಇಲ್ಲಿದೆ.
– ತುಮಕೂರು ರಸ್ತೆಯಿಂದ ಬೆಂಗಳೂರು ನಗರದೊಳಗೆ ಸರಕು ಸಾಗಣೆ ವಾಹನಗಳ ನಿರ್ಬಂಧ
– ಮೈಸೂರು ರಸ್ತೆಯಿಂದ ನಾಯಂಡಹಳ್ಳಿ ಮತ್ತು ಸೋಮನಹಳ್ಳಿಯವರೆಗೆ
– ಬಳ್ಳಾರಿ ರಸ್ತೆಯಿಂದ ಬೆಂಗಳೂರು ನಗರದೊಳಗೆ
– ಹೊಸಕೋಟೆ ರಸ್ತೆಯಿಂದ ಹೆಬ್ಬಾಳದವರೆಗೆ
ಮೂರು ದಿನ ಭಾರಿ ಸರಕು ಸಾಗಣೆ ವಾಹನಗಳ ನಿರ್ಬಂಧದ ಜೊತೆ ಬದಲಿ ಮಾರ್ಗವನ್ನೂ ಸೂಚಿಸಲಾಗಿದೆ. ಅದರ ವಿವರ ಇಲ್ಲಿದೆ.
– ತುಮಕೂರು ಕಡೆಯಿಂದ ಬಳ್ಳಾರಿ ರಸ್ತೆ, ಹೈದರಾಬಾದ್ ಕಡೆಗೆ ಸಂಚರಿಸುವ ವಾಹನಗಳು ಡಾಬಸ್ ಪೇಟೆಯಲ್ಲಿ ಎಡ ತಿರುವು ಪಡೆದು ದೊಡ್ಡಬಳ್ಳಾಪುರ ಕಡೆ ಸಂಚರಿಸಬೇಕು.
-ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಸಂಚರಿಸುವ ವಾಹನಗಳು ಸೊಂಡೆಕೊಪ್ಪ ಕ್ರಾಸ್ನಲ್ಲಿ ಬಲ ತಿರುವು ಪಡೆದು ತಾವರೆಕೆರೆ ಮುಖಾಂತರ ಮಾಗಡಿ ರಸ್ತೆಗೆ ಸಂಪರ್ಕ ಪಡೆದು ಆ ಮೂಲಕ ನೈಸ್ ರಸ್ತೆ ತಲುಪಿ ಮೈಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ಕಡೆ ಸಂಚರಿಸಬೇಕು.
-ಬಳ್ಳಾರಿ ರಸ್ತೆ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ದೇವನಹಳ್ಳಿ ಬಲ ತಿರುವು ಪಡೆದು ದೊಡ್ಡಬಳ್ಳಾಪುರ ರಸ್ತೆಯ ಮೂಲಕ ತುಮಕೂರು ಕಡೆಗೆ ಸಂಪರ್ಕ ಪಡೆಯುವುದು.
-ಹೊಸಕೋಟೆಯಿಂದ ತುಮಕೂರು ಕಡೆಗೆ ಸಂಚರಿಸುವ ವಾಹನಗಳು ಬೂದಿಗೆರೆ ಕ್ರಾಸ್ ಮುಖಾಂತರ ದೇವನಹಳ್ಳಿ, ದೊಡ್ಡಬಳ್ಳಾಪುರ ಮೂಲಕ ಡಾಬಸ್ ಪೇಟೆ ಮೂಲಕ ತುಮಕೂರು ಕಡೆ ಸಂಚಾರ ಮಾಡಬಹುದು.