ಭಾರತದ ಹೊಸ ಬೌಲಿಂಗ್ ಅಸ್ತ್ರ ಅಶೋಕ್ ಶರ್ಮಾ – ಅಣ್ಣನ ತ್ಯಾಗಕ್ಕೆ ಸಿಕ್ಕ ಪ್ರತಿಫಲ

ಅಣ್ಣ ಮತ್ತು ತಮ್ಮನಿಗೆ ಒಂದೇ ಗುರಿ. ಕ್ರಿಕೆಟರ್ ಆಗಬೇಕೆಂಬ ಹಂಬಲ. ಆದರೆ, ಬಡತನದ ಬೇಗುದಿಯಲ್ಲಿ ಬೇಯುತ್ತಿರುವ ಕುಟುಂಬಕ್ಕೆ ಇವರ ಆಸೆ ಈಡೇರಿಸಲು ಸಾಧ್ಯವಾಗುವುದಿಲ್ಲ. ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಸಿಗುತ್ತದೆ. ಆಗ ಅಣ್ಣ ತನ್ನ ಕನಸನ್ನು ತ್ಯಾಗ ಮಾಡುತ್ತಾರೆ. ತಮ್ಮನ ಗುರಿಯನ್ನು ಮುನ್ನೆಡೆಸುತ್ತಾರೆ. ಇದರ ಪ್ರತಿಫಲವೇ ಟೀಮ್ ಇಂಡಿಯಾಕ್ಕೆ ಸಿಕ್ಕ ಹೊಸ ಬೌಲಿಂಗ್ ಅಸ್ತ್ರ. ಆ ಯುವಕನೇ ಅಶೋಕ್ ಶರ್ಮಾ.
ಇದನ್ನೂ ಓದಿ:ಬುಮ್ರಾಗಿಲ್ಲ ಬದಲಿ.. ಪಾಂಡ್ಯಗಿಲ್ಲ ರಿಪ್ಲೇಸ್ – 10 ವರ್ಷಗಳಾದ್ರೂ ಪರ್ಯಾಯ ಸಿಕ್ಕಿಲ್ವಾ?
ಜಿಂಬಾಬ್ವೆ ವಿರುದ್ಧ ಮೊದಲ ಪಂದ್ಯ. ಟೀಮ್ ಇಂಡಿಯಾ ಸೇರುವ ಕನಸು ನನಸಾದ ಕ್ಷಣ. ಭಾರತದ ಸಹಾಯಕ ಕೋಚ್ ಸುನೀಲ್ ಜೋಶಿಯವರಿಂದ ಭಾರತ ತಂಡದ ಕ್ಯಾಪ್ ಸಿಗುತ್ತಿದ್ದಂತೆ ಅತೀವ ಸಂತೋಷ. ಹೌದು. ಭಾರತಕ್ಕೆ ಸಿಕ್ಕ ಬೌಲಿಂಗ್ ಅಸ್ತ್ರವೇ ಈ ಅಶೋಕ್ ಶರ್ಮಾ. ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಚೊಚ್ಚಲ ಅವಕಾಶ ಪಡೆದಿದ್ದಾರೆ ಅಶೋಕ್ ಶರ್ಮಾ. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಜಿಂಬಾಬ್ವೆ ವಿರುದ್ಧದ ಪಂದ್ಯದ ಟಾಸ್‌ಗೂ ಮುನ್ನ ಭಾರತ ತಂಡದ ಸಹಾಯಕ ಕೋಚ್ ಸುನೀಲ್ ಜೋಶಿ ಅವರು ಭಾರತ ತಂಡದ ಕ್ಯಾಪ್ ನೀಡುವ ಮೂಲಕ ಯುವ ವೇಗಿ ಅಶೋಕ್ ಶರ್ಮಾ ಅವರನ್ನು ಟೀಮ್ ಇಂಡಿಯಾಗೆ ಅಧಿಕೃತವಾಗಿ ಬರ ಮಾಡಿಕೊಂಡರು.
ದೇಶದ ಪರ ಚೊಚ್ಚಲ ಪಂದ್ಯವಾಡಿದ ಆಶೋಕ್ ಶರ್ಮಾ ಕ್ರಿಕೆಟ್ ಬದುಕಿನ ಹಾದಿ ಕಷ್ಟಕರವಾಗಿತ್ತು. ಕಠಿಣ ಪರಿಶ್ರಮ, ಫಿಟ್ನೆಸ್ ಮತ್ತು ವೇಗದ ಬೌಲಿಂಗ್ ಮೂಲಕ ಅಶೋಕ್ ತನ್ನ ಟೀಮ್ ಇಂಡಿಯಾಕ್ಕೆ ಸೇರುವ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಭಾರತ ತಂಡದ ಈ ವೇಗದ ಬೌಲರ್ ಅಶೋಕ್ ಶರ್ಮಾ ಅವರ ಈ ಪರಿಶ್ರಮದ ಹಿಂದೆ ಕುಟುಂಬದ ಅಪಾರ ತ್ಯಾಗವೂ ಅಡಗಿದೆ. ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬದ ಕಥೆ ಕೇಳಿದರೆ ನಿಜಕ್ಕೂ ಮನಕಲಕುವಂತಿದೆ. ಹಿರಿಯ ಸಹೋದರ ಅಕ್ಷಯ್ ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿದ್ದರು. ಕ್ರಿಕೆಟ್‌ಗಾಗಿ ಬೆವರು ಹರಿಸಿದ್ದರು. ಕಠಿಣ ಪರಿಶ್ರಮ ಪಟ್ಟಿದ್ದರು. ಆದರೆ, ಮನೆಯ ಪರಿಸ್ಥಿತಿ ಅವರಿಗೆ ಮುಂದೆ ಹೆಜ್ಜೆಯಿಡಲು ಬಿಡಲಿಲ್ಲ. ಹೀಗಾಗಿ ತನ್ನ ಕನಸನ್ನು ಬದಿಗಿಟ್ಟ ಸಹೋದರ ಅಕ್ಷಯ್, ತಮ್ಮ ಅಶೋಕ್ ಕನಸನ್ನು ಸಾಕಾರಗೊಳಿಸಲು ನಿರ್ಧರಿಸಿದರು. ಆ ತೀರ್ಮಾನವೇ ಇಂದು ಟೀಂ ಇಂಡಿಯಾಗೆ ಮತ್ತೊಬ್ಬ ವೇಗದ ಬೌಲರ್‌ನ್ನು ನೀಡಿದೆ.
ದಿನಪತ್ರಿಕೆ ವಿತರಣೆ ಮಾಡಿ ಕುಟುಂಬವನ್ನು ಸಾಗಿಸುತ್ತಿದ್ದ ತಂದೆ, ಇಬ್ಬರು ಮಕ್ಕಳಲ್ಲಿ ಒಬ್ಬರ ವೃತ್ತಿಜೀವನವನ್ನು ಮಾತ್ರ ಮುಂದುವರಿಸಲು ಸಾಧ್ಯ ಎಂದು ಹೇಳಿದ್ದರು. ಅಕ್ಷಯ್ ತಮ್ಮ ಅವಕಾಶವನ್ನು ಬಿಟ್ಟು, ಅಶೋಕ್‌ಗೆ ಸಂಪೂರ್ಣ ಬೆಂಬಲ ನೀಡಿದರು. ಪ್ರತಿದಿನ ಸುಮಾರು 45 ಕಿ.ಮೀ ದೂರ ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಅಭ್ಯಾಸಕ್ಕೆ ಬಿಡುತ್ತಿದ್ದರು. ನಂತರ ಅಶೋಕ್‌ಗೆ ಅರವಳ್ಳಿ ಕ್ರಿಕೆಟ್ ಅಕಾಡೆಮಿಯಲ್ಲಿ ಉಚಿತ ತರಬೇತಿ ಹಾಗೂ ವಸತಿ ದೊರೆಯಿತು. ಇದೇ ಅಶೋಕ್ ಬದುಕಿನ ದೊಡ್ಡ ಟರ್ನಿಂಗ್ ಪಾಯಿಂಟ್ಯ ಕೋಚ್ ಜಗಸಿಮ್ರಾನ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ಬೌಲಿಂಗ್ ಆಕ್ಷನ್, ಫಿಟ್ನೆಸ್, ಬಯೋಮೆಕಾನಿಕ್ಸ್ ಹಾಗೂ ಆಹಾರ ಕ್ರಮದಲ್ಲಿ ಸಂಪೂರ್ಣ ಬದಲಾವಣೆ ಮಾಡಲಾಯಿತು. ಸಕ್ಕರೆ ಸೇವನೆ ಬಿಟ್ಟು ಕಟ್ಟುನಿಟ್ಟಿನ ಆಹಾರ ಪದ್ಧತಿ ಅನುಸರಿಸಲು ಶುರುಮಾಡಿದರು.
ರೆಡ್ ಬುಲ್ ಸ್ಪೀಡ್ ಹಂಟ್ ಸ್ಪರ್ಧೆ ಹಾಗೂ ರಾಜಸ್ಥಾನ್ ರಾಯಲ್ಸ್ ನೆಟ್ ಬೌಲರ್ ಅವಕಾಶ ಸಿಕ್ಕಿರುವುದು ಅಶೋಕ್‌ಗೆ ಮತ್ತೊಂದು ದಾರಿ ತೋರಿಸಿತು. ನಂತರ ಗುಜರಾತ್ ಟೈಟಾನ್ಸ್ ಪರ ಐಪಿಎಲ್‌ನಲ್ಲಿ ಗಂಟೆಗೆ 154.2 ಕಿ.ಮೀ ವೇಗದ ಎಸೆತ ಹಾಕಿ ಕ್ರಿಕೆಟ್ ದಿಗ್ಗಜರ ಗಮನ ಸೆಳೆದರು. ಅದೇ ಪ್ರದರ್ಶನ ಭಾರತ ‘ಎ’ ತಂಡಕ್ಕೆ ಆಯ್ಕೆಯಾಗುವಂತೆ ಮಾಡಿತ್ತು. ಇದೀಗ ಅಶೋಕ್ ಶರ್ಮಾ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ಬದುಕಿನ ಮಹತ್ತರ ಇನ್ನಿಂಗ್ಸ್ ಶುರುಮಾಡಿದ್ದಾರೆ.

ನೋಡಿರಿ

