15 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ – ಸೆಪ್ಟೆಂಬರ್‌ನಿಂದಲೇ ಐತಿಹಾಸಿಕ ಕಾನೂನು ಜಾರಿ

15 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ – ಸೆಪ್ಟೆಂಬರ್‌ನಿಂದಲೇ ಐತಿಹಾಸಿಕ ಕಾನೂನು ಜಾರಿ

15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿರ್ತಾರಾ?, ಇನ್‌ಸ್ಟಾಗ್ರಾಮ್, ವಾಟ್ಸಾಪ್, ಫೇಸ್‌ಬುಕ್, ಯೂಟ್ಯೂಬ್ ನೋಡ್ತಾ ಇರ್ತಾರಾ?, ಹೆತ್ತವರಿಗೆ ಮಕ್ಕಳು ಮೊಬೈಲ್‌ನಲ್ಲಿ ಮುಳುಗುತ್ತಿದ್ದಾರೆ ಎಂಬ ಚಿಂತೆ ಇದೆಯಾ? ಹಾಗಾದ್ರೆ ಈ ಸುದ್ದಿ ನೋಡಿ. ಸದ್ಯದಲ್ಲೇ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡಲಾಗಿದೆ. ಮಕ್ಕಳು ಸೆಪ್ಟೆಂಬರ್‌ನಿಂದ ಹೊಸ ಖಾತೆಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ:ನೀಟ್ ಪರೀಕ್ಷೆ ಅಕ್ರಮದ ಬಗ್ಗೆ ಮೌನ ಮುರಿದ ಮೋದಿ – ಅತ್ಯಂತ ಕಠಿಣ ಶಿಕ್ಷೆಯ ಎಚ್ಚರಿಕೆ

15 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಸುವುದನ್ನು ನಿಷೇಧಿಸುವ ಮೊದಲ ದೇಶವಾಗಿ ಫ್ರಾನ್ಸ್ ಗುರುತಿಸಿಕೊಳ್ಳಲಿದೆ. ಫ್ರೆಂಚ್ ಸಂಸತ್ತು ಈ ಕಾನೂನನ್ನು ಜಾರಿಗೆ ತರಲು ಒಂದು ಶಾಸನವನ್ನು ಅನುಮೋದಿಸಿದೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಸೆಪ್ಟೆಂಬರ್ ವೇಳೆಗೆ ಹೊಸ ನಿಯಮಗಳು ಜಾರಿಗೆ ತರುವುದಾಗಿ ಘೋಷಣೆ ಮಾಡಿದ್ದಾರೆ. ಫ್ರೆಂಚ್ ಶಾಸಕರು ತಮ್ಮ ದೇಶದಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಸುವುದನ್ನು ನಿಷೇಧಿಸುವ ಪರ ಮತ ಹಾಕಿದ್ದಾರೆ. ಮಂಗಳವಾರ ಫ್ರೆಂಚ್ ಸೆನೆಟ್‌ನಲ್ಲಿ ಈ ಹೊಸ ಕಾನೂನು ಮೊದಲು ಅಂಗೀಕೃತವಾಯಿತು. ನಂತರ ನ್ಯಾಷನಲ್ ಅಸೆಂಬ್ಲಿಯಲ್ಲಿ 279 ವೋಟ್‌ಗಳಲ್ಲಿ 81 ವೋಟ್‌ಗಳ ಅಂತರದಿಂದ ಅನುಮೋದನೆ ಪಡೆಯಿತು. ಆ ಮೂಲಕ ಫ್ರಾನ್ಸ್ ಈಗ 15 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಪ್ರವೇಶವನ್ನು ನಿರ್ಬಂಧಿಸುವ ಕಠಿಣ ಕಾನೂನನ್ನು ಜಾರಿಗೆ ತಂದ ಯುರೋಪಿಯನ್ ಒಕ್ಕೂಟದ ಮೊದಲ ದೇಶವಾಗಿದೆ.

ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಸೋಶಿಯಲ್ ಮೀಡಿಯಾದ ಪರಿಣಾಮದ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ ಫ್ರೆಂಚ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಫ್ರಾನ್ಸ್‌ನ ಆರೋಗ್ಯ ಮೇಲ್ವಿಚಾರಣಾ ಸಂಸ್ಥೆಯ ಪ್ರಕಾರ, 12 ರಿಂದ 17 ವರ್ಷದ ಮಕ್ಕಳಲ್ಲಿ ಸುಮಾರು 90% ಮಂದಿ ಪ್ರತಿದಿನ ಸ್ಮಾರ್ಟ್‌ಫೋನ್ ಬಳಸಿ ಇಂಟರ್ನೆಟ್ ನೋಡುತ್ತಾರೆ, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ದಿನಕ್ಕೆ ಎರಡರಿಂದ ಐದು ಗಂಟೆಗಳವರೆಗೆ ತಮ್ಮ ಡಿವೈಸ್‌ಗಳಲ್ಲಿ ಸಮಯ ಕಳೆಯುತ್ತಾರೆ ಎಂದು ಹೇಳಲಾಗಿದೆ. ಆರೋಗ್ಯ ಮೇಲ್ವಿಚಾರಣಾ ಸಂಸ್ಥೆಯು, ಅತಿಯಾದ ಸೋಶಿಯಲ್ ಮೀಡಿಯಾ ಬಳಕೆಯು ಕಡಿಮೆ ಆತ್ಮವಿಶ್ವಾಸ, ಸ್ವಯಂ ಹಾನಿ, ಆತ್ಮಹತ್ಯೆ ಮತ್ತು ಡ್ರಗ್ ಬಳಕೆ ಸೇರಿದಂತೆ ವಿವಿಧ ಹಾನಿಕಾರಕ ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಕಂಡುಹಿಡಿದಿದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸೆಪ್ಟೆಂಬರ್‌ನಿಂದ ಹೊಸ ಖಾತೆಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ, ಆದರೆ ಈಗಾಗಲೇ ಇರುವ ಪ್ರೊಫೈಲ್‌ಗಳಿಗೆ ಪೂರ್ಣ ನಿಷೇಧ ಮುಂದಿನ ವರ್ಷ ಜನವರಿಯಿಂದ ಜಾರಿಗೆ ಬರಲಿದೆ. ಈ ನಿಷೇಧವು ಇನ್‌ಸ್ಟಾಗ್ರಾಮ್, ವಾಟ್ಸಾಪ್, ಫೇಸ್‌ಬುಕ್, ಸ್ನ್ಯಾಪ್, ಎಕ್ಸ್, ಯೂಟ್ಯೂಬ್ ಮತ್ತು ಟಿಕ್‌ಟಾಕ್ ಸೇರಿದಂತೆ ಅನೇಕ ಜನಪ್ರಿಯ ಸೋಶಿಯಲ್ ಮೀಡಿಯಾ ಪ್ಲ್ಯಾಟ್‌ಫಾರ್ಮ್‌ಗಳ ಮೇಲೆ ಪರಿಣಾಮ ಬೀರಲಿದೆ. ಆದರೆ ಈ ನಿಷೇಧವು ಶೈಕ್ಷಣಿಕ ಮತ್ತು ವೈಜ್ಞಾನಿಕ ಸಂಬಂಧಿತ ವಿಷಯಗಳಿಗೆ ಅನ್ವಯವಾಗೋದಿಲ್ಲ ಅನ್ನೋದು ಗಮನಾರ್ಹ.

Sulekha