ವಿವಾಹಿತೆಯನ್ನ ಮದುವೆಯಾಗುವುದಾಗಿ ಹೇಳಿದ ದೈವನರ್ತಕ – ಪಾತ್ರಿ ನುಡಿ ಕೇಳಿ ಜನ ಕೆರಳಿದ್ದೇಕೆ..!?
ಕಾಂತಾರ ಸಿನಿಮಾದ ಬಳಿಕ ಕರಾವಳಿ ಭಾಗದ ದೈವಾರಾಧನೆಗೆ ಎಲ್ಲಿಲ್ಲದ ಮಹತ್ವ ಬಂದಿದೆ. ಹಾಗೇ ದೈವದ ಮೇಲೆ ಜನರಿಗೆ ಭಕ್ತಿ ಹಾಗೂ ನಂಬಿಕೆ ಕೂಡ ಹೆಚ್ಚಾಗಿದೆ. ದೈವಾರಾಧನೆ ನೋಡಬೇಕು ಅಂತಾ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರರಾಜ್ಯಗಳಿಂದಲೂ ಬರುತ್ತಿದ್ದಾರೆ. ಆದ್ರೆ ಇದೇ ದೈವ ದರ್ಶನಗಳನ್ನ ದುರ್ಬಳಕೆ ಮಾಡಿಕೊಂಡು ಜನ್ರಿಗೆ ಮೋಸ ಮಾಡಲಾಗ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಅದಕ್ಕೆ ಕಾರಣವೇ ಈ ಘಟನೆ.
ಇದನ್ನೂ ಓದಿ : ಹಿಟ್ಟು ಕಲಸಿ ಲಟ್ಟಣಿಗೆ ಹಿಡಿದ ಬಿಲ್ಗೇಟ್ಸ್ – ಕುಬೇರನ ರೊಟ್ಟಿ ತಯಾರಿಕೆಗೆ ನೆಟ್ಟಿಗರು ಶಾಕ್!
ದೈವ ದರ್ಶನದ ವೇಳೆ ಪಾತ್ರಿಯನೊಬ್ಬ ವಿವಾಹಿತ ಮಹಿಳೆಗೆ ಮದುವೆಯಾಗುವುದಾಗಿ ನುಡಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಂಬಾರಕೊಡ್ಲೆ ಗ್ರಾಮದಲ್ಲಿ ದೈವ ದರ್ಶನದ ಮದುವೆಯಾಗುವುದಾಗಿ ನುಡಿದಿದ್ದು ಟೀಕೆಗೆ ಗುರಿಯಾಗಿದೆ.
ದೈವ ದರ್ಶನಕ್ಕೆಂದು ಬೆಳಗಾವಿಯಿಂದ ಬಂದಿದ್ದ ವಿವಾಹಿತ ಮಹಿಳೆಗೆ ದುರ್ಗಾದೇವಿ ಆಹ್ವಾನವಾಗುತ್ತೆ ಎಂದು ನಂಬಲಾದ ಪಾತ್ರಿಯೊಬ್ಬರು ಮದುವೆಯಾಗುವುದಾಗಿ ವಾಗ್ದಾನ ಮಾಡಿದ್ದಾರೆ. ದೇವತಾ ಕಾರ್ಯದಲ್ಲಿ ಪಂಚೆಯನ್ನುಟ್ಟು ಮೈ ಮೇಲೆ ಅರಿಶಿನ ಚೆಲ್ಲಿಕೊಳ್ಳುತ್ತಾ ಕಾಂತಾರ ಸ್ಟೈಲ್‌ನಲ್ಲಿ ಓ… ಎಂದು ಕೂಗುತ್ತ ಈ ಬಾಲಕಿಯನ್ನ ಈ ಬಾಲಕ ಮದುವೆಯಾಗುತ್ತಾನೆ. ಇವತ್ತಿನಿಂದ ಈ ಬಾಲಕಿ ನನ್ನ ಅರ್ಧಾಂಗಿಯಾಗಿ, ಅರ್ಧನಾರೀಶ್ವರಿಯಾಗಿ ನನ್ನ ಹೃದಯದಲ್ಲಿ ನೆಲೆಸುತ್ತಾಳೆ. ಇಂದು ಅಥವಾ ನಾಳೆ ಧರ್ಮಸ್ಥಳ, ಮಂತ್ರಾಲಯ, ಇದೇ ಸ್ಥಳದಲ್ಲಿ ಈ ಬಾಲಕಿ ಕೊರಳಿಗೆ ಈ ಬಾಲಕನ ಕೈಯಿಂದ ತಾಳಿ ಬೀಳುತ್ತೆ. ಇದು ಸತ್ಯ ಸತ್ಯ ಎಂದು ಪಾತ್ರಿ ನುಡಿದಿದ್ದಾರೆ. ಈ ರೀತಿ ಪಾತ್ರಿ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಡಿಕೆ ಹಿಂಗಾರದಿಂದ ಬಡಿದುಕೊಳ್ಳುತ್ತ ಡಮರು, ಡಕ್ಕೆ, ತಾಳದ ಲಯಕ್ಕೆ ನರ್ತನ ಮಾಡುತ್ತ ಪಾತ್ರಿ ವರ್ತಿಸಿದ್ದಾರೆ. ವಿವಾಹಿತ ಮಹಿಳೆಯನ್ನ ಮದುವೆಯಾಗುವ ದೃಷ್ಟಿಯಿಂದ ದೈವದ ಹೆಸರನ್ನ ಬಳಿಸಿಕೊಂಡಿದ್ದಾನೆ ಎಂದು ಪಾತ್ರಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ನರ್ತಕ ಪಾತ್ರಿಗೂ ಮದುವೆಯಾಗಿ ಹೆಂಡತಿ ಬಿಟ್ಟು ಹೋಗಿದ್ದಾಳೆ, ವಿವಾಹಿತ ಮಹಿಳೆಗೂ ಗಂಡ ಬಿಟ್ಟಿರುವ ಮಾಹಿತಿ ಇದ್ದು ದೇವರ ಹೆಸರಿನಲ್ಲಿ ಪಾತ್ರಿ ಈ ರೀತಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಪಾತ್ರಿಯ ಮೇಲೆ ದುರ್ಗಾದೇವಿ ಆಹ್ವಾನವಾಗುತ್ತೆ ಎಂದು ನಂಬಿ ಇಲ್ಲಿಗೆ ಭಕ್ತರು ಬರುತ್ತಾರೆ. ಹತ್ತಾರು ವರ್ಷಗಳಿಂದ ಈ ಸ್ಥಳದಲ್ಲಿ ಈ ಆಚರಣೆ ನಡೆದುಕೊಂಡು ಬರುತ್ತಿದೆ.