ನಾಡಗೀತೆಗೆ ಬೌದ್ಧ ಪದ ಸೇರ್ಪಡೆಗೆ ಶಿಫಾರಸು – ಸರ್ಕಾರಕ್ಕೆ ವರದಿ ಸಲ್ಲಿಸಿದ ತಜ್ಞರ ಸಮಿತಿ

ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ನಾಡಗೀತೆ ಜಯಭಾರತ ಜನನಿಯ ತನುಜಾತೆ ಹಾಡಿನಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಯಾಕೆಂದರೆ, ಪಾರಸಿಕ ಜೈನರುದ್ಯಾನ ಎಂಬ ಸಾಲಿಗೆ ಬೌದ್ಧ ಪದವನ್ನು ಸೇರಿಸಲು ತಜ್ಞರ ಸಮಿತಿಯು ಸರ್ಕಾರಕ್ಕೆ ಸರ್ವಾನುಮತದಿಂದ ಶಿಫಾರಸು ಮಾಡಿದೆ.
ಇದನ್ನೂ ಓದಿ:ಚಿಕನ್ ಹಾಗೂ ಮೊಟ್ಟೆ ದರದಲ್ಲಿ ಭಾರೀ ಏರಿಕೆ – ಕೆಜಿಗೆ 350 ರೂ. ಗಡಿ ದಾಟಿದ ಕೋಳಿ ಮಾಂಸ
ರಾಷ್ಟ್ರಕವಿ ಕುವೆಂಪು ಅವರು 1924ರಲ್ಲಿ ಜಯಭಾರತ ಜನನಿಯ ತನುಜಾತೆ ಹಾಡುಬರೆದಿದ್ದರು. ಇದೀಗ ಈ ನಾಡಗೀತೆಯಲ್ಲಿ ಬದಲಾವಣೆ ತರಲು ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಹಾಡಿನ ಮೊದಲ ಕರಡು ಪ್ರತಿಯಲ್ಲಿ ಬೌದ್ಧರುದ್ಯಾನ ಎಂಬ ಪದವಿತ್ತು. ಆದರೆ, 1930ರಲ್ಲಿ ಅವರ ಕೊಳಲು ಕವನ ಸಂಕಲನದಲ್ಲಿ ಈ ಹಾಡು ಪ್ರಕಟವಾದಾಗ ಅದು ಜೈನರುದ್ಯಾನ ಎಂದಾಗಿತ್ತು. ಇದೀಗ ಬೌದ್ಧ ಪದವನ್ನು ಸೇರಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ನೇತೃತ್ವದ ತಜ್ಞರ ಸಮಿತಿಯು ರಾಜ್ಯಸರ್ಕಾರಕ್ಕೆ ಅಧಿಕೃತ ವರದಿಯೊಂದನ್ನು ಸಲ್ಲಿಸಿದೆ.
ಬೌದ್ಧ ಧರ್ಮಕ್ಕೆ ಇರುವ ಐತಿಹಾಸಿಕ ಮಹತ್ವವನ್ನು ಪರಿಗಣಿಸಿ, ನಾಡಗೀತೆಯಲ್ಲಿ ಮತ್ತೆ ಬೌದ್ಧ ಪದವನ್ನು ಸೇರಿಸಬೇಕು ಎಂದು ಕೋರಿ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಅವರು 2025ರ ನವೆಂಬರ್‌ನಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಈ ಪತ್ರದ ಹಿನ್ನೆಲೆಯಲ್ಲಿ ಅಂದಿನ ಸಿಎಂ ಸೂಚನೆಯಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 8 ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಇದರ ಪದನಿಮಿತ್ತ ಅಧ್ಯಕ್ಷರಾಗಿದ್ದು, ಸಾಹಿತಿಗಳಾದ ಹಂಪ ನಾಗರಾಜಯ್ಯ, ಕುವೆಂಪು ಅವರ ಅಳಿಯ ಡಾ. ಕೆ. ಚಿದಾನಂದ, ಎಸ್.ಜಿ. ಸಿದ್ದರಾಮಯ್ಯ, ಆಶಾ ದೇವಿ, ದ್ವಾರಕಾನಾಥ್ ಚೊಕ್ಕ, ಮೂಡ್ನಾಕೂಡು ಚಿನ್ನಸ್ವಾಮಿ, ಕಾಳೇಗೌಡ ನಾಗವಾರ ಹಾಗೂ ಬರಗೂರು ರಾಮಚಂದ್ರಪ್ಪ ಅವರು ಸಮಿತಿಯ ಸದಸ್ಯರಾಗಿದ್ದರು. ಬರಗೂರು ರಾಮಚಂದ್ರಪ್ಪ ಹೊರತುಪಡಿಸಿದಂತೆ ಉಳಿದ ಎಲ್ಲರೂ ಸಭೆ ಸೇರಿ ಸುದೀರ್ಘವಾಗಿ ಚರ್ಚೆ ನಡೆಸಿ ಬೌದ್ಧರುದ್ಯಾನ ಪದ ಸೇರ್ಪಡೆ ಶಿಫಾರಸು ಮಾಡುವ ತೀರ್ಮಾನ ಕೈಗೊಂಡಿದ್ದರು.
ಈ ವಿಚಾರದ ಬಗ್ಗೆ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕುವೆಂಪು ರಚಿತ ಗೀತೆಯ ಮೊದಲ ಕರಡಿನಲ್ಲಿ ಬೌದ್ಧ ಪದವನ್ನು ಬಳಸಿದ್ದರಿಂದ ಹಾಗೂ ತಮ್ಮ ಇತರೆ ಸಾಹಿತ್ಯದಲ್ಲಿ ಬುದ್ಧನ ಕುರಿತು ಗೌರವ ವ್ಯಕ್ತಪಡಿಸಿರುವುದರಿಂದ, ಈ ಪದ ಸೇರ್ಪಡೆಯು ಅವರ ಆಶಯಗಳಿಗೆ ವಿರುದ್ಧವಾಗಿಲ್ಲ. ಹೊಸ ಪದದ ಸೇರ್ಪಡೆಯಿಂದ ಹಾಡಿನ ಉದ್ದ ಹೆಚ್ಚಾಗುವುದಿಲ್ಲ ಎಂದಿದ್ದಾರೆ. ಈ ಶಿಫಾರಸಿನ ಕುರಿತು ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.

ನೋಡಿರಿ

