16 ವರ್ಷಗಳ ನಂತರ ಫಿಫಾ ವಿಶ್ವಕಪ್ ಫೈನಲ್‌ಗೆ ಸ್ಪೇನ್ ಲಗ್ಗೆ – ಫ್ರಾನ್ಸ್ ಕನಸು ನುಚ್ಚುನೂರು, ಆಟಗಾರರ ಕಣ್ಣೀರು

16 ವರ್ಷಗಳ ನಂತರ ಫಿಫಾ ವಿಶ್ವಕಪ್ ಫೈನಲ್‌ಗೆ ಸ್ಪೇನ್ ಲಗ್ಗೆ – ಫ್ರಾನ್ಸ್ ಕನಸು ನುಚ್ಚುನೂರು, ಆಟಗಾರರ ಕಣ್ಣೀರು

ಫಿಫಾ ವಿಶ್ವಕಪ್ ಕನಸು ಮುಡಿಗೇರಿಸಿಕೊಳ್ಳುವ ಫ್ರಾನ್ಸ್ ಕನಸು ನುಚ್ಚುನೂರಾಗಿದೆ. ಮಂಗಳವಾರ ನಡೆದ ಫಿಫಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸ್ಪೇನ್ ತಂಡವು ಫ್ರಾನ್ಸ್‌ನ ಮೂರನೇ ವಿಶ್ವಕಪ್ ಪ್ರಶಸ್ತಿಯ ಕನಸಿಗೆ ತೆರೆ ಎಳೆದಿದೆ.

ಇದನ್ನೂ ಓದಿ:ಫಿಫಾ ವಿಶ್ವಕಪ್‌ ಸೆಮಿಫೈನಲ್ ಫೈಟ್ – ಗೆಲುವಿಗಾಗಿ ಬದ್ಧವೈರಿಗಳ ನಡುವೆ ಕಾದಾಟ

ಫಿಫಾ ವಿಶ್ವಕಪ್ ಫೈನಲ್ ತಲುಪುವಲ್ಲಿ ಸ್ಪೇನ್ ಯಶಸ್ವಿಯಾಗಿದೆ. ಸ್ಪೇನ್ ತಂಡವು ಫೈನಲ್‌ನಲ್ಲಿ ಇಂಗ್ಲೆಂಡ್ ಅಥವಾ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ. ಫ್ರಾನ್ಸ್ ತಂಡಕ್ಕೆ ಯುರೋಪಿಯನ್ ಚಾಂಪಿಯನ್ ಸ್ಪೇನ್ ಕಠಿಣ ಸವಾಲು ಹಾಕಿತು. ಇದರ ಪರಿಣಾಮ ಫ್ರಾನ್ಸ್ ಸ್ಪೇನ್ ಎದುರು ಮಂಡಿಯೂರಿತು. ಬಲಿಷ್ಠ ಆಕ್ರಮಣಕಾರಿ ಆಟಗಾರರನ್ನು ಹೊಂದಿದ್ದರೂ ಫ್ರಾನ್ಸ್‌ಗೆ ಗೆಲ್ಲಲು ಸಾಧ್ಯವಾಗದಿರುವುದು ಅಚ್ಚರಿ ತಂದಿದೆ.

ಒಂದು ಕಾಲದಲ್ಲಿ ಶಾರ್ಟ್ ಪಾಸ್‌ಗಳ ಮೂಲಕ ಇಡೀ ವಿಶ್ವ ಫುಟ್‌ಬಾಲ್ ಅನ್ನು ಆಳಿದ್ದ ಸ್ಪೇನ್‌ನ ಸಾಂಪ್ರದಾಯಿಕ ಟಿಕಿ-ಟಾಕಾ ಶೈಲಿ ಮೂಲಕ ಜಯಭೇರಿ ದಾಖಲಿಸಿದೆ. ಸೆಮಿಫೈನಲ್‌ನಲ್ಲಿ ಬಲಿಷ್ಠ ಫ್ರಾನ್ಸ್ ತಂಡವನ್ನು ಮಣಿಸಿದ ಸ್ಪೇನ್, ಕೇವಲ ಪಂದ್ಯವನ್ನಷ್ಟೇ ಗೆಲ್ಲಲಿಲ್ಲ. ಬದಲಿಗೆ ಆಧುನಿಕ ಫುಟ್‌ಬಾಲ್ ಜಗತ್ತಿಗೆ ತನ್ನ ಹೊಚ್ಚ ಹೊಸ ತಂತ್ರಗಾರಿಕೆಯಾದ ಟಿಕಿ-ಟಾಕಾ 2.0  ಅನ್ನು ಪರಿಚಯಿಸಿತು. ಜೊತೆಗೆ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 2-0 ಗೋಲುಗಳಿಂದ ಮಣಿಸಿ ಸ್ಪೇನ್ ಇಡೀ ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ.

ಟೆಕ್ಸಾಸ್‌ನ ಡಲ್ಲಾಸ್ ಸ್ಟೇಡಿಯಂನಲ್ಲಿ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಸ್ಪೇನ್ ತಂಡ ಟಿಕಿ-ಟಾಕಾ ತಂತ್ರಗಾರಿಕೆಗೆ ಒತ್ತು ನೀಡಿತು. ಟಿಕಿ-ಟಾಕಾ 2.0 ಎಂಬುದು ಹೊಸ ಫುಟ್‌ಬಾಲ್ ತಂತ್ರಗಾರಿಕೆಯಾಗಿದೆ. ಹಳೆಯ ಶೈಲಿಯಲ್ಲಿ ಕೇವಲ ಚೆಂಡನ್ನು ತನ್ನ ಬಳಿ ಇಟ್ಟುಕೊಳ್ಳುವುದಕ್ಕಷ್ಟೇ ಪ್ರಾಮುಖ್ಯತೆ ಇರುತ್ತಿತ್ತು. ಆದರೆ ಈ ಹೊಸ ಟಿಕಿ-ಟಾಕಾ ತಂತ್ರದಲ್ಲಿ ಚೆಂಡಿನ ನಿಯಂತ್ರಣದ ಜೊತೆಗೆ ಎದುರಾಳಿ ಕೋಟೆಗೆ ನೇರವಾಗಿ ಲಗ್ಗೆ ಇಡಲಾಗುತ್ತೆ. ಇದೇ ತಂತ್ರದೊಂದಿಗೆ ಕಣಕ್ಕಿಳಿದ ಸ್ಪೇನ್ ಆಟಗಾರರು ಆರಂಭದಿಂದಲೇ ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದರು. ಪರಿಣಾಮ ಸ್ಪೇನ್ ಇಡೀ ಪಂದ್ಯದಲ್ಲಿ ಶೇಕಡಾ 62 ಕ್ಕಿಂತ ಹೆಚ್ಚು ಸಮಯ ಚೆಂಡನ್ನು ತನ್ನ ಬಳಿಯೇ ಇಟ್ಟುಕೊಳ್ಳುವ ಮೂಲಕ ಫ್ರಾನ್ಸ್ ಆಟಗಾರರನ್ನು ಓಡಾಡುವಂತೆ ಮಾಡಿತು. ಇದರಿಂದ ಒತ್ತಡಕ್ಕೆ ಒಳಗಾದ ಫ್ರಾನ್ಸ್ ಆಟಗಾರರು ಚೆಂಡಿನ ಮೇಲಿನ ನಿಯಂತ್ರಣ ಕಳೆದುಕೊಂಡರು. ಇತ್ತ ಸ್ಪೇನ್​ ತಂಡದ ಮಿಡ್‌ಫೀಲ್ಡರ್‌ಗಳಾದ ಪೆಡ್ರೆ ಮತ್ತು ಫ್ಯಾಬಿಯನ್ ರೂಯಿಝ್ ಪರಸ್ಪರ ನೂರಾರು ಶಾರ್ಟ್ ಪಾಸ್‌ಗಳನ್ನು ನೀಡುತ್ತಾ ಫ್ರಾನ್ಸ್‌ನ ರಕ್ಷಣಾ ಕೋಟೆಯನ್ನು ನಿರಾಯಾಸವಾಗಿ ಭೇದಿಸಿದರು.

ಫ್ರಾನ್ಸ್ ನಾಯಕ ಕಿಲಿಯನ್ ಎಂಬಾಪೆ ಸ್ಪೇನ್‌ನ ಬಿಗಿಯಾದ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಪಂದ್ಯದ 31ನೇ ನಿಮಿಷದಲ್ಲಿ ಫ್ರಾನ್ಸ್‌ನ ಪ್ರಮುಖ ಡಿಫೆಂಡರ್ ವಿಲಿಯಂ ಸಲಿಬಾ ಗಾಯಗೊಂಡು ಮೈದಾನ ತೊರೆದದ್ದು ಫ್ರಾನ್ಸ್‌ಗೆ ಭಾರಿ ಹಿನ್ನಡೆಯಾಯಿತು. ಇತ್ತ ಟಿಕಿ-ಟಾಕಾ ಶೈಲಿಯಲ್ಲೇ ಪಂದ್ಯ ಮುಂದುವರೆಸಿದ ಸ್ಪೇನ್, ಎಂಬಾಪೆಯ ಕೌಂಟರ್ ಅಟ್ಯಾಕ್​ ಅನ್ನು ಸಂಪೂರ್ಣ ನಿಯಂತ್ರಿಸಿದರು. ಪರಿಣಾಮ ಒತ್ತಡಕ್ಕೆ ಒಳಗಾದ ಎಂಬಾಪೆ ಕೆಲ ಅವಕಾಶಗಳು ಲಭಿಸಿದರೂ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲರಾದರು.

Sulekha