ಜಾಮೀನಿನ ಮೇಲೆ ಆಚೆ ಬಂದು ಹೆಂಡತಿ, ಮಕ್ಕಳು ಸೇರಿ 6 ಮಂದಿಯ ಹ*ತ್ಯೆ – ಭೀಕರ ಕೃತ್ಯಕ್ಕೆ ಬೆಚ್ಚಿ ಬಿದ್ದ ತೆಲಂಗಾಣ

ನೀಚ ಕೃತ್ಯ ಮಾಡಿ ಜೈಲು ಸೇರಿದ ಪಾಪಿಯೊಬ್ಬ ಮತ್ತೆ ಭೀಕರ ಕೃತ್ಯವೆಸಗಿದ್ದಾನೆ. ಜೈಲು ಸೇರಿದ್ದ ವ್ಯಕ್ತಿ ಜಾಮೀನಿನ ಮೇಲೆ ಹೊರ ಬಂದ ನಂತ್ರ ತನ್ನ ಪತ್ನಿ, ಇಬ್ಬರು ಮಕ್ಕಳು ಹಾಗೂ ಸಂತ್ರಸ್ತೆ ಸೇರಿದಂತೆ 6 ಮಂದಿಯನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ತಾಲೂಕಿನಲ್ಲಿ ನಡೆದಿದೆ.
28 ವರ್ಷದ ರಾಜ್‌ಕುಮಾರ್ ಎಂಬ ನೀಚ ಒಟ್ಟು 6 ಮಂದಿಯನ್ನು ಹತ್ಯೆ ಮಾಡಿದ್ದಾನೆ. ಪೋಕ್ಸೋ ಪ್ರಕರಣದ 17 ವರ್ಷದ ಸಂತ್ರಸ್ತೆಯನ್ನು, ಆಕೆಯ ತಾಯಿ ಮತ್ತು ಅಜ್ಜಿಯನ್ನು ಆರೋಪಿ ರಾಜ್ ಕುಮಾರ್ ಕೊಂದಿದ್ದಾನೆ . ಆರೋಪಿಯು ಸಂತ್ರಸ್ತೆಯ ತಾಯಿ ಮತ್ತು ಅಜ್ಜಿಯನ್ನು ಅವರ ಮನೆಯಲ್ಲಿಯೇ ಕೊಂದು, 17 ವರ್ಷದ ಬಾಲಕಿಯನ್ನು ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಅಜ್ಜಿ, ಮಾನ, ಅಮ್ಮನನ್ನ ಕೊಂದು ತಾನು ಸೂ*ಸೈಡ್- ತ್ರಿಬಲ್ ಮ*ರ್ಡರ್‌ಗೆ ಬೆಚ್ಚಿ ಬಿದ್ದ ಬೆಂಗಳೂರು
ನಂತರ ಅವನು ತನ್ನ ಮನೆಗೆ ಹಿಂತಿರುಗಿ ತನ್ನ ಪತ್ನಿ ಸರಿತಾ ಮತ್ತು ಅವರ ಇಬ್ಬರು ಮಕ್ಕಳಾದ ಪರೀಕ್ಷಿತ್ (3) ಮತ್ತು ಧೈವಿಕ್ಷಿತ್ (2) ಅವರನ್ನು ಹರಿತವಾದ ಆಯುಧದಿಂದ ಕೊಂದಿದ್ದಾನೆ. ಹತ್ಯೆಗಳ ನಂತರ, ಅವನು ತನ್ನ ಪೋಷಕರಿಗೆ ಕರೆ ಮಾಡಿ ತನ್ನ ಕುಟುಂಬವನ್ನು ಕೊಂದಿರುವುದಾಗಿ ತಿಳಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಮಾಹಿತಿ ಪಡೆದ ನಂತರ, ಫ್ಯೂಚರ್ ಸಿಟಿ ಆಯುಕ್ತ ತರುಣ್ ಜೋಶಿ, ಚೆವೆಲ್ಲಾ ಡಿಸಿಪಿ ಯೋಗೇಶ್ ಗೌತಮ್ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಭೀಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಲಾಯಿತು.
ಪೊಲೀಸರ ಪ್ರಕಾರ, ಸಂತ್ರಸ್ತ ಬಾಲಕಿ ಮತ್ತು ಆಕೆಯ ತಾಯಿ ಮೇ 16ರಂದು ಪೊಲೀಸ್ ಠಾಣೆಯಲ್ಲಿ ರಾಜ್‌ಕುಮಾರ್ ತನಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ಹಿಂದೆ ಆರೋಪಿಯನ್ನು ಬಂಧಿಸಿದ್ದರು. ಬಳಿಕ ಇತ್ತೀಚೆಗೆ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ತಿಳಿದು ಬಂದಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ನೋಡಿರಿ

