ಅರಬೈಲ್ ಘಾಟ್‌ನಲ್ಲಿ ಕ್ರೂಸರ್- ಲಾರಿ ಡಿಕ್ಕಿ, 7 ಯುವಕರು ಸಾವು – ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಅರಬೈಲ್ ಘಾಟ್‌ನಲ್ಲಿ ಕ್ರೂಸರ್- ಲಾರಿ ಡಿಕ್ಕಿ, 7 ಯುವಕರು ಸಾವು – ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಡುವೆಯೇ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್‌ನ ಬಳಗಾ‌ರ್ ಸಮೀಪ  ಭೀಕರ ರಸ್ತೆ ದುರಂತ ನಡೆದಿದೆ.  ಈ ಆ್ಯಕ್ಸಿಡೆಂಟ್‌ನಲ್ಲಿ ಧಾರವಾಡ ಮೂಲದ ಏಳು ಯುವಕರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಧಾರವಾಡದಿಂದ ಧರ್ಮಸ್ಥಳ ಹಾಗೂ ಚಿಕ್ಕಮಗಳೂರಿನ ಪ್ರವಾಸಕ್ಕೆ ಬುಧವಾರ ರಾತ್ರಿ ತೂಫಾನ್ ಕ್ರೂಸರ್ ವಾಹನದಲ್ಲಿ ಒಟ್ಟು 10 ಮಂದಿ ಹೊರಟಿದ್ದರು. ಮುಂಜಾನೆ ಯಲ್ಲಾಪುರದ ಅರಬೈಲ್ ಘಾಟ್ ತಲುಪುತ್ತಿದ್ದಾಗ ಎದುರಿನಿಂದ ಬಂದ ಲಾರಿಗೆ ಕ್ರೂಸರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಐವರು ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಮದುವೆ ಆಗಿ ಜಸ್ಟ್ 5 ತಿಂಗಳಿಗೆ ಹೆಂಡತಿಯನ್ನ ಹೆಲ್ಮೆಟ್‌ನಿಂದ ಹೊಡೆದು ಕೊ*ದ ಪಾಪಿ ಗಂಡ

ಮೃತರನ್ನು ಬಸವರಾಜ್ (48), ಅಭಿಷೇಕ್ ಈಶ್ವರ್ (28), ಅಕ್ಷಯ (26), ಅಭಿಷೇಕ್ (26), ಸಂಜಯ್ ಅಂಗಡಿ ಹಾಗೂ ಮತ್ತೋರ್ವ ಯುವಕ ಎಂದು ಗುರುತಿಸಲಾಗಿದೆ. ಶಿವರಾಜ್ ದುರ್ಗಪ್ಪ ಮಡಿವಾಳ್ (22), ಮಂಜುನಾಥ್ ಅಶೋಕ್ ಚುಲಕಿ (32), ಸಚಿನ್ ಹಾಗೂ ಚೆನ್ನಬಸಯ್ಯ ಬಸಲಿಂಗಯ್ಯ ಸಂಪಗಾವ (28) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಾಥಮಿಕ ಮಾಹಿತಿಯಂತೆ, ಮೃತರು ಮತ್ತು ಗಾಯಾಳುಗಳೆಲ್ಲರೂ ಧಾರವಾಡ ಮೂಲದವರಾಗಿದ್ದು, ಬೆಂಗಳೂರಿನ ಖಾಸಗಿ ಆಹಾರ ವಿತರಣಾ ಸಂಸ್ಥೆಯೊಂದರಲ್ಲಿ ಪಾರ್ಟ್‌ಟೈಮ್ ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದರು. ಬಿಡುವಿನ ವೇಳೆಯಲ್ಲಿ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಅವರು ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿರುವುದು ಕುಟುಂಬಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಈ ಘೋರ ದುರಂತದಲ್ಲಿ ಮೃತಪಟ್ಟ ಸಚಿನ್ ಅವರ ತಾಯಿ ಈರಮ್ಮ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆ ಪ್ರತಿಯೊಬ್ಬರ ಕರುಳನ್ನು ಹಿಂಡುವಂತಿದೆ. “ನನಗೆ ಇದ್ದಿದ್ದೇ ಇಬ್ಬರು ಗಂಡು ಮಕ್ಕಳು. ನನ್ನ ಮಗ ಸಚಿನ್ ದುಬೈನಲ್ಲಿದ್ದ, ಕೇವಲ ಇಪ್ಪತ್ತು ದಿನಗಳ ಹಿಂದಷ್ಟೇ ಅವನು ಊರಿಗೆ ವಾಪಸ್ ಬಂದಿದ್ದ. ಇಲ್ಲಿ ಸ್ವಂತ ಖರ್ಚಿಗೆ ಹಾಗೂ ಹಣಕ್ಕಾಗಿ ಸ್ವಿಗ್ಗಿ  ಸಂಸ್ಥೆಯಲ್ಲಿ ಪಾರ್ಟ್ ಟೈಮ್ ಕೆಲಸಕ್ಕೆ ಸೇರಿಕೊಂಡಿದ್ದ. ನಿನ್ನೆ ರಾತ್ರಿ ಸ್ನೇಹಿತರೆಲ್ಲಾ ಸೇರಿ ಧರ್ಮಸ್ಥಳ, ಚಿಕ್ಕಮಗಳೂರು ಟೂರ್‌ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ. ಆದರೆ ಮುಂಜಾನೆ ಇಂತಹದ್ದೊಂದು ಘೋರ ಅವಘಡ ನಡೆದು ನನ್ನ ಮಗ ನನ್ನನ್ನು ಬಿಟ್ಟು ಹೋಗ್ತಾನೆ ಅಂತ ಅಂದುಕೊಂಡಿರಲಿಲ್ಲ…” ಎಂದು ತಾಯಿ ಈರಮ್ಮ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

Kishor KV

Leave a Reply

Your email address will not be published. Required fields are marked *