ವರುಣ ಅಬ್ಬರಕ್ಕೆ ಚಾರ್ಮಾಡಿಯಲ್ಲಿ ಗುಡ್ಡ ಕುಸಿತ – ರಸ್ತೆಗೆ ಬಿದ್ದ ಮಣ್ಣು, ಕಲ್ಲುಗಳ ರಾಶಿ

ವರುಣ ಅಬ್ಬರಕ್ಕೆ ಚಾರ್ಮಾಡಿಯಲ್ಲಿ ಗುಡ್ಡ ಕುಸಿತ – ರಸ್ತೆಗೆ ಬಿದ್ದ ಮಣ್ಣು, ಕಲ್ಲುಗಳ ರಾಶಿ

ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಸಾಕಷ್ಟು ಕಡೆ ಸಣ್ಣಪುಟ್ಟ ಅವಘಡಗಳು ನಡೆಯುತ್ತಿವೆ. ಅದರಲ್ಲೂ ಚಾರ್ಮಾಡಿ ಘಾಟ್‌ನಲ್ಲಿ ಭೂ ಕುಸಿತ ಉಂಟಾಗುತ್ತಿದೆ. ಮಳೆಯಿಂದ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ಪ್ರಮುಖ ಘಾಟ್ ರಸ್ತೆಯ ಅರ್ಧದಷ್ಟು ಭಾಗವು ಕುಸಿದ ಮಣ್ಣು ಮತ್ತು ಬಂಡೆಗಳಿಂದ ಆವೃತವಾಗಿದೆ. ಮಳೆ ಹೀಗೆಯೇ ಮುಂದುವರಿದರೆ ಮತ್ತಷ್ಟು ಭೂಕುಸಿತ ಸಂಭವಿಸುವ ಭೀತಿ ಇದೆ. ಇದರಿಂದ ಸಂಪೂರ್ಣ ಸಂಚಾರ ಸ್ಥಗಿತಗೊಳ್ಳುವ ಆತಂಕ ವ್ಯಕ್ತವಾಗಿದೆ.

ಇದನ್ನೂ ಓದಿ: ಈಜಿಪ್ಟ್ ವಿರುದ್ಧ ಅರ್ಜೆಂಟೀನಾಗೆ ರೋಚಕ ಜಯ – ಜಸ್ಟ್ 11 ನಿಮಿಷದಲ್ಲಿ ಮೆಸ್ಸಿ ಮ್ಯಾಜಿಕ್

ಭಾರಿ ಮಳೆಯಿಂದಾಗಿ ಘಾಟಿಯ ಮೇಲ್ಭಾಗದ ನೀರು ರಭಸವಾಗಿ ಹರಿದು ಬರುತ್ತಿದ್ದು, ಗುಡ್ಡದ ಮಣ್ಣು ಸಡಿಲಗೊಂಡು ಚಿಕ್ಕಮಗಳೂರು ವಿಭಾಗದ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಲಘು ಪ್ರಮಾಣದ ಗುಡ್ಡ ಕುಸಿತ ಉಂಟಾಗುತ್ತಿದೆ. ಬಿದಿರುತಳ ಸೇರಿದಂತೆ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಮಣ್ಣಿನೊಂದಿಗೆ ಮರ-ಗಿಡಗಳು ರಸ್ತೆಗೆ ಉರುಳಿ ಬಿದ್ದ ಘಟನೆಗಳು ನಡೆದಿವೆ. ಅದೃಷ್ಟವಶಾತ್, ಮಣ್ಣು ರಸ್ತೆಯ ಮುಖ್ಯ ಭಾಗಕ್ಕೆ ಕುಸಿಯದ ಕಾರಣ ಸಂಚಾರಕ್ಕೆ ದೊಡ್ಡ ಮಟ್ಟದ ಅಡಚಣೆಯಾಗಿಲ್ಲ. ಆದರೆ, ಘಾಟಿ ರಸ್ತೆಯ ಚರಂಡಿಗಳಲ್ಲಿ ಮಣ್ಣು ತುಂಬಿಕೊಳ್ಳುತ್ತಿದೆ.

ಮುಂದಿನ ದಿನಗಳಲ್ಲಿ ಮಳೆ ಹೀಗೆಯೇ ಮುಂದುವರಿದರೆ ಗುಡ್ಡ ಕುಸಿತ ಹಾಗೂ ಮರಗಳು ಧರೆಗುರುಳುವ ಸಾಧ್ಯತೆ ಹೆಚ್ಚಿರುವುದರಿಂದ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸಮಾಜಸೇವಕರು ಕಟ್ಟೆಚ್ಚರ ವಹಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಎರಡೂ ವಿಭಾಗಗಳಿಂದ ರಸ್ತೆ ಸಂಚಾರ ಸುಗಮಗೊಳಿಸಲು ಜೆಸಿಬಿ ಯಂತ್ರಗಳು ಹಾಗೂ ಅಗತ್ಯ ಕಾರ್ಮಿಕರನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಹಿಂದೆಂದಿಗಿಂತ ರಸ್ತೆ ಅಗಲಗೊಂಡಿರುವುದು ಹಾಗೂ ತಡೆಗೋಡೆಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿರುವುದು ಸದ್ಯದ ದೊಡ್ಡ ಸಮಾಧಾನವಾಗಿದೆ.

Kishor KV

Leave a Reply

Your email address will not be published. Required fields are marked *