ಆಟೋ ಪ್ರಯಾಣದಲ್ಲಿ ಇನ್ನು ಬಾಡಿಗೆ ಕಿರಿಕಿರಿ ಇರಲ್ಲ – ದುಪ್ಪಟ್ಟು ಬಾಡಿಗೆ ವಸೂಲಿಗೆ ಸರ್ಕಾರದಿಂದ ಬ್ರೇಕ್

ಆಟೋ ಪ್ರಯಾಣದಲ್ಲಿ ಇನ್ನು ಬಾಡಿಗೆ ಕಿರಿಕಿರಿ ಇರಲ್ಲ – ದುಪ್ಪಟ್ಟು ಬಾಡಿಗೆ ವಸೂಲಿಗೆ ಸರ್ಕಾರದಿಂದ ಬ್ರೇಕ್

ಬೆಂಗಳೂರಲ್ಲಿ ಆಟೋ ಪ್ರಯಾಣ ಆರಾಮ. ಆದರೆ, ಬಾಡಿಗೆ ವಿಚಾರಕ್ಕೆ ಬಂದರೆ ಕೆಲವೊಮ್ಮೆ ಸಿಕ್ಕಾಪಟ್ಟೆ ಕಿರಿಕಿರಿ. ಬೆಳಗ್ಗೆ ವೇಳೆ ಬೇರೆ ಊರುಗಳಿಂದ ಬಸ್ ನಿಂದ ಇಳಿದು ಆಟೋದಲ್ಲಿ ಮನೆಗೆ ಹೋಗೋಣ ಅಂದರೆ, ಬಾಯಿಗೆ ಬಂದಂಗೆ ಬಾಡಿಗೆ ಹೇಳುತ್ತಾರೆ. ಬೇಕಾದರೆ ಬನ್ನಿ ಅನ್ನೋ ತರ ವರ್ತಿಸುತ್ತಾರೆ. ದುಪ್ಪಟ್ಟು ಬಾಡಿಗೆ ದರ ಕೇಳಿಯೇ ತಲೆತಿರುಗುತ್ತದೆ. ಇನ್ನೂ ವಿಪರ್ಯಾಸವೆಂದರೆ, ಇಡೀ ರಾತ್ರಿ ಪ್ರಯಾಣ ಮಾಡಿದ ಬಸ್ ದರ ಕೂಡಾ ಅಷ್ಟಿರಲಿಲ್ಲ. ಆದರೆ, ಮೆಜೆಸ್ಟಿಕ್ ಇಳಿದು ರಿಕ್ಷಾ ಹತ್ತಿದರೆ ಅವ್ರು ಕೇಳುವ ಬಾಡಿಗೆಯೋ.. ಮನಸಿಗೆ ಬಂದಂಗೆ ಬಾಡಿಗೆ ಹಣ ಕೇಳುತ್ತಾರೆ. ಈಗ ಅದೆಲ್ಲಾ ಕಿರಿಕಿರಿಗೆ ಬ್ರೇಕ್ ಬೀಳಲಿದೆ.

ಇದನ್ನೂ ಓದಿ:ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್‌ ನ್ಯೂಸ್!‌ – ಮಾ. 2028ರ ವೇಳೆಗೆ ಒಟ್ಟು 175 ಕಿಲೋಮೀಟರ್‌ಗೆ ನಮ್ಮ ಮೆಟ್ರೋ ಮಾರ್ಗ ವಿಸ್ತರಣೆ

ಜಾಸ್ತಿ ಹಣ ಕೇಳುವ ಆಟೋ ಚಾಲಕರ ಬಾಯಿಗೆ ಬೀಗ ಹಾಕಲಿದೆ ಡಿಜಿಟಲ್ ಆಟೋ ಮೀಟರ್. ಬೆಂಗಳೂರಿನಲ್ಲಿ ಆಟೋ ಚಾಲಕರ ದುಪ್ಪಟ್ಟು ಬಾಡಿಗೆ ವಸೂಲಿ ದಂದೆಗೆ ಮುಕ್ತಿ ಹಾಡಲು ‘ನಗರ ಮೀಟರ್ ಆಟೋ’ ಹೊಸ ಡಿಜಿಟಲ್ ತಂತ್ರಜ್ಞಾನ ಪರಿಚಯಿಸಿದೆ. ಇನ್ಮುಂದೆ ರಸ್ತೆಯಲ್ಲಿ ನೇರವಾಗಿ ಆಟೋ ನಿಲ್ಲಿಸಿ ಹತ್ತಿದರೂ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸರ್ಕಾರ ನಿಗದಿಪಡಿಸಿದ ನಿಖರ ಮೀಟರ್ ದರದಲ್ಲೇ ಪಾರದರ್ಶಕವಾಗಿ ಪ್ರಯಾಣಿಸಬಹುದು. ಪ್ರಯಾಣಿಕರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಲೈವ್ ಬಾಡಿಗೆ ಪರಿಶೀಲಿಸಬಹುದು. ರಸ್ತೆಯಲ್ಲಿ ನೇರವಾಗಿ ನಿಲ್ಲಿಸುವ ಆಟೋಗಳಿಗೂ ಸರ್ಕಾರಿ ಮೀಟರ್ ದರ ಅನ್ವಯವಾಗುತ್ತದೆ.

ಸಾಮಾನ್ಯವಾಗಿ ಓಲಾ, ಉಬರ್ ಅಥವಾ ನಮ್ಮ ಯಾತ್ರಿ ಆಪ್‌ಗಳ ಮೂಲಕ ಬುಕ್ ಮಾಡುವಾಗ ಮಾತ್ರ ಡಿಜಿಟಲ್ ಪಾರದರ್ಶಕತೆ ಇರುತ್ತಿತ್ತು. ಆದರೆ, ಈ ಹೊಸ ವ್ಯವಸ್ಥೆಯಲ್ಲಿ ಪ್ರಯಾಣಿಕರು ರಸ್ತೆಯಲ್ಲಿ ನೇರವಾಗಿ ಹೋಗುತ್ತಿರುವ ಆಟೋವನ್ನು ಕೈ ತೋರಿಸಿ ನಿಲ್ಲಿಸಿ ಸವಾರಿ ಮಾಡಬಹುದು. ಪ್ರಯಾಣ ಆರಂಭವಾಗುತ್ತಿದ್ದಂತೆ, ಚಾಲಕನು ತನ್ನ ‘ನಗರಮೀಟರ್’ ಆಪ್‌ನಲ್ಲಿ ಡಿಜಿಟಲ್ ಮೀಟರ್ ಆನ್ ಮಾಡುತ್ತಾನೆ. ಪ್ರಯಾಣಿಕರು ಆಟೋದ ಒಳಗಡೆ ಇರುವ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡುವ ಮೂಲಕ ಅಥವಾ ತಮಗೆ ಬರುವ ಎಸ್‌ಎಂಎಸ್/ವಾಟ್ಸಾಪ್ ಲಿಂಕ್ ಮೂಲಕ ಎಷ್ಟು ಬಾಡಿಗೆ ಆಗುತ್ತಿದೆ ಎಂಬುದನ್ನು ರಿಯಲ್ ಟೈಮ್‌ನಲ್ಲಿ ಲೈವ್ ಆಗಿ ಟ್ರ್ಯಾಕ್ ಮಾಡಬಹುದು. ವಿಶೇಷವೆಂದರೆ, ಈ ಬಾಡಿಗೆಯನ್ನು ಸರ್ಕಾರ ನಿಗದಿಪಡಿಸಿರುವ ಅಧಿಕೃತ ಮೀಟರ್ ದರಗಳ ಆಧಾರದ ಮೇಲೆಯೇ ಲೆಕ್ಕ ಹಾಕಲಾಗುತ್ತದೆ. ಈ ಸೌಲಭ್ಯದಿಂದಾಗಿ ಚಾಲಕರು ಕೇವಲ ಆನ್‌ಲೈನ್ ಬುಕಿಂಗ್‌ಗೆ ಕಾಯಬೇಕಾಗಿಲ್ಲ. ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಟೆಕ್ ಪಾರ್ಕ್‌ಗಳಲ್ಲಿ ನಿಂತು ನೇರವಾಗಿ ಬರುವ ಗ್ರಾಹಕರನ್ನು ಸರ್ಕಾರಿ ದರದಲ್ಲೇ ಕರೆದೊಯ್ಯಬಹುದು.

Sulekha

Leave a Reply

Your email address will not be published. Required fields are marked *