ಚಾಮರಾಜನಗರದಲ್ಲಿ 11 ಸರ್ಕಾರಿ ಶಾಲೆಗೆಳಿಗೆ ಬೀಗ! – ಖಾಸಗಿ ಶಾಲೆಯಲ್ಲೂ ಕುಸಿದ ಮಕ್ಕಳ ಅಡ್ಮಿಷನ್ ಸಂಖ್ಯೆ

ಶಿಕ್ಷಣವಲಯದಿಂದ ಆತಂಕಕಾರಿ ವಿಚಾರವೊಂದು ಹೊರಬಿದ್ದಿದೆ. ಚಾಮರಾಜನಗರ ಜಿಲ್ಲೆಯಲ್ಲಿ 11 ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ. ಅಷ್ಟೇ ಅಲ್ಲ, ಖಾಸಗಿ ಶಾಲೆಗಳಲ್ಲೂ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿದೆ.
ಇದನ್ನೂ ಓದಿ:ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಶಾಕ್ – 20 ಶಾಲೆಗಳಲ್ಲಿ ಝೀರೋ ಅಡ್ಮಿಷನ್
ರಾಜ್ಯದಲ್ಲಿ ಜನನ ಪ್ರಮಾಣ ಕುಂಠಿತವಾಗುತ್ತಿದೆ ಅನ್ನೋ ವಿಚಾರ ಈಗಾಗಲೇ ಆತಂಕ ಸೃಷ್ಟಿಸಿದೆ. ಶಾಲೆಗಳಿಗೆ ಮಕ್ಕಳ ಅಡ್ಮಿಷನ್ ಕೂಡಾ ಕಡಿಮೆಯಾಗಿದೆ. ಅದರಲ್ಲೂ ಚಾಮರಾಜನಗರ ಜಿಲ್ಲೆಯೊಂದರಲ್ಲೇ 11 ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ. ಈ ಬಾರಿ 11 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶೂನ್ಯ ದಾಖಲಾತಿಯ ಕಾರಣದಿಂದಾಗಿ ಬೀಗ ಬಿದ್ದಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವುದರಿಂದ ಶಾಲೆಗಳಿಗೆ ಬೀಗ ಬೀಳುತ್ತಿದೆ. ಕಳೆದ ವರ್ಷ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 50,800 ಮಕ್ಕಳು ದಾಖಲಾಗಿದ್ದರು. ಆದರೆ ಈ ವರ್ಷ ಆ ಸಂಖ್ಯೆ 46,130ಕ್ಕೆ ಕುಸಿದಿದೆ. ಅಂದರೆ ಒಂದೇ ವರ್ಷದಲ್ಲಿ ಬರೋಬ್ಬರಿ 4 ಸಾವಿರಕ್ಕೂ ಹೆಚ್ಚು ಮಕ್ಕಳ ಕೊರತೆ ಎದುರಾಗಿದೆ. ಇದು ಕೇವಲ ಸರ್ಕಾರಿ ಶಾಲೆಗಳ ಕಥೆಯಷ್ಟೇ ಅಲ್ಲ. ಜಿಲ್ಲೆಯ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಹಾಗೂ ಅನುದಾನ ರಹಿತ ಸೇರಿದಂತೆ ಶಾಲೆಗಳಲ್ಲಿ ಲೆಕ್ಕ ಹಾಕಿದರೆ, ಕಳೆದ ವರ್ಷ 1.10 ಲಕ್ಷ ಮಕ್ಕಳಿದ್ದರು. ಈ ವರ್ಷ ದಾಖಲಾಗಿರುವುದು ಕೇವಲ 99,000 ಮಕ್ಕಳು ಮಾತ್ರ. ಅಂದರೆ ಒಂದೇ ವರ್ಷದಲ್ಲಿ ಜಿಲ್ಲೆಯಾದ್ಯಂತ 11 ಸಾವಿರಕ್ಕೂ ಹೆಚ್ಚು ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಸಣ್ಣ ಸಣ್ಣ ಹಳ್ಳಿಗಳಲ್ಲಂತೂ ಒಂದನೇ ತರಗತಿಗೆ ಸೇರಲು ಮಕ್ಕಳೇ ಸಿಗುತ್ತಿಲ್ಲ.
ಒಂದೆಡೆ ಜನನ ಪ್ರಮಾಣ ಕುಸಿಯುತ್ತಿದೆ. ಮತ್ತೊಂದೆಡೆ ಪೋಷಕರು ಕೂಡಾ ಒಂದೇ ಮಕ್ಕಳು ಸಾಕು ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ ಬದಲಾಗುತ್ತಿರುವ ಜೀವನಶೈಲಿ ಹಾಗೂ ಪೋಷಕರ ಮನಸ್ಥಿತಿಯಿಂದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿದೆ.

ನೋಡಿರಿ

