ಕಾರಿಗೆ ಡಿಕ್ಕಿಯಾದ ನಾಯಿ – 70 ಕಿ.ಮೀ ಪ್ರಯಾಣಿಸಿದ ಬಳಿಕ ಬಂಪರ್ ನೊಳಗೆ ಪ್ರತ್ಯಕ್ಷ!
ರಸ್ತೆಗಳಲ್ಲಿ ವಾಹನ ಚಲಾಯಿಸೋ ವೇಳೆ ಪ್ರಾಣಿಗಳು ದಿಢೀರ್ ಪ್ರತ್ಯಕ್ಷವಾಗಿ ಬಿಡುತ್ತವೆ. ಇದರಿಂದಾಗಿ ವಾಹನ ಸವಾರರು ಎಷ್ಟು ಜಾಗರೂಕತೆ ವಹಿಸಿದರೂ ಕೆಲವೊಂದು ವೇಳೆ ಹಸು, ಬೀದಿ ನಾಯಿಗಳು ವಾಹನಕ್ಕೆ ಡಿಕ್ಕಿಯಾಗುತ್ತವೆ. ಇದರಿಂದಾಗಿ ಅದೆಷ್ಟೋ ಪ್ರಾಣ ಹಾನಿ ಕೂಡ ಸಂಭವಿಸಿವೆ. ಪುತ್ತೂರಿನಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಕಾರಿಗೆ ಡಿಕ್ಕಿಯಾದ ನಾಯಿಯೊಂದು ಕಾರಿನ ಬಂಪರ್ ಒಳಗೆ ಸಿಲುಕಿ ಸುಮಾರು 70 ಕಿಲೋಮೀಟರ್ ಪ್ರಯಾಣಿಸಿದೆ.
ಇದನ್ನೂ ಓದಿ:500 ವಿದ್ಯಾರ್ಥಿನಿಯರು, ಒಬ್ಬನೇ ಹುಡುಗ! – ಪರೀಕ್ಷಾ ಕೊಠಡಿಯಲ್ಲೇ ಮೂರ್ಛೆ ಹೋದ ವಿದ್ಯಾರ್ಥಿ!
ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ದಂಪತಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪುತ್ತೂರಿಗೆ ವಾಪಾಸಾಗುತ್ತಿದ್ದರು. ಈ ವೇಳೆ ದಾರಿ ಮಧ್ಯೆ ಬಳ್ಪ ಎಂಬಲ್ಲಿ ನಾಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಸುಬ್ರಹ್ಮಣ್ಯ ಅವರು ಕಾರನ್ನು ನಿಲ್ಲಿಸಿ ಕಾರಿನ ಸುತ್ತಮುತ್ತ ನಾಯಿಗಾಗಿ ಹುಡುಕಾಡಿದ್ದಾರೆ. ಆದರೆ ನಾಯಿ ಎಲ್ಲೂ ಕಾಣಲಿಲ್ಲ. ಕೆಲ ಸಮಯದವರೆಗೆ ಹುಡುಕಾಡಿ ಬಳಿಕ ಅಲ್ಲಿಂದ ತಮ್ಮ ಮನೆಗೆ ತೆರಳಿದ್ದಾರೆ.
ನೇರವಾಗಿ ತಮ್ಮ ಮನೆಗೆ ಬಂದು ಕಾರನ್ನು ಪರಿಶೀಲಿಸಿದ್ದಾರೆ. ಈ ವೇಳೆ ಬಂಪರ್ ನ ಗ್ರಿಲ್ ತುಂಡಾಗಿರುವುದು ಸುಬ್ರಮಣ್ಯ ಗಮನಕ್ಕೆ ಬಂದಿದೆ. ಕೂಡಲೇ ಬಂಪರ್ ಪರಿಶೀಲಿಸಿದ್ದಾರೆ. ಈ ವೇಳೆ ತುಂಡಾದ ಗ್ರಿಲ್ ಮಧ್ಯೆ 70 ಕಿಲೋಮೀಟರ್ ಹಿಂದೆ ತನಗೆ ಡಿಕ್ಕಿಯಾದ ನಾಯಿ ಪ್ರತ್ಯಕ್ಷವಾಗಿದೆ. ಇದರಿಂದ ಒಂದು ಕ್ಷಣ ಆಘಾತಕ್ಕೆ ಒಳಗಾಗಿದ್ದಾರೆ. ಬಳಿಕ ನಾಯಿಯನ್ನು ಬಂಪರ್ ಒಳಗಿನಿಂದ ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಅದನ್ನು ತೆಗೆಯಲಾಗದ ಸ್ಥಿತಿಯಲ್ಲಿದ್ದ ಕಾರಣ ಪಕ್ಕದ ಗ್ಯಾರೇಜ್ ಗೆ ತೆರಳಿ ನಾಯಿಯನ್ನು ಹೊರ ತೆಗೆಯುವಂತೆ ವಿನಂತಿಸಿದ್ದಾರೆ. ಗ್ಯಾರೇಜ್ ಸಿಬ್ಬಂದಿ ಬಂಪರ್ ಬಿಚ್ಚಿ ನಾಯಿಯನ್ನು ಸುರಕ್ಷಿತವಾಗಿ ಕಾರಿಂದ ಹೊರಕ್ಕೆ ತೆಗೆದಿದ್ದಾರೆ. ಸುಮಾರು 70 ಕಿಲೋಮೀಟರ್ ವರೆಗೆ ಕಾರಿನ ಬಂಪರ್ ಒಳಗೆ ಇದ್ದ ನಾಯಿ ಆರಾಮವಾಗಿ ಹೊರಗೆ ಬಂದು ಓಡಾಡಲು ಪ್ರಾರಂಭಿಸಿದೆ.