ಡಿ ಗ್ಯಾಂಗ್‌ಗೆ ಮತ್ತೆ ಶಾಕ್ – ಸಾಕ್ಷಿಗೆ ಧಮ್ಕಿ ಹಾಕಿದ ಮೂವರು ಅರೆಸ್ಟ್

ಡಿ ಬಾಸ್ ದರ್ಶನ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದರ ನಡುವೆ ಮತ್ತೆ ಡಿ ಗ್ಯಾಂಗ್‌ಗೆ ಖಾಕಿ ಶಾಕ್ ಕೊಟ್ಟಿದೆ. ದರ್ಶನ್ ವಿರುದ್ಧ ಸಾಕ್ಷಿಯೊಬ್ಬರಿಗೆ ಧಮ್ಕಿ ಹಾಕಿದ ಆರೋಪದ ಮೇಲೆ ನಟ ದರ್ಶನ್ ಅಭಿಮಾನಿ ಬಳಗದ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. 49ನೇ ಸಾಕ್ಷಿಯೊಬ್ಬರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಈ ಮೂವರನ್ನು ವಶಕ್ಕೆ ಪಡೆಯಲಾಗಿದೆ.ಬಂಧಿತರನ್ನು ದರ್ಶನ್ ಅಭಿಮಾನಿ ಸಂಘದ ಸಕ್ರಿಯ ಸದಸ್ಯರಾದ ಪುನೀತ್, ಸುಹಾಸ್ ಮತ್ತು ವೇಣು ಎಂದು ಗುರುತಿಸಲಾಗಿದೆ.
ಬಂಧಿತ ಪುನೀತ್ ಸೋಶಿಯಲ್ ಮೀಡಿಯಾದಲ್ಲಿ ‘ಡಿ ಕಂಪನಿ’ ಫ್ಯಾನ್ ಪೇಜ್ ಅನ್ನು ನಿರ್ವಹಿಸುತ್ತಿದ್ದರೆ ಸುಹಾಸ್ ಮತ್ತು ವೇಣು ತುಮಕೂರಿನ ದರ್ಶನ್ ಅಭಿಮಾನಿ ಸಂಘದ ಸದಸ್ಯರು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಅಯ್ಯೋ ರಾಮ ರಾಮ – ಅಯ್ಯೋಧ್ಯೆಯಲ್ಲಿ ಬಗೆದಷ್ಟು ಬಯಲಾಗ್ತಿದೆ ಅಕ್ರಮ
ರೇಣುಕಾಸ್ವಾಮಿ ಕೊಲೆ ಪ್ರಕರಣದ 49ನೇ ಸಾಕ್ಷಿ ಸಂದೀಪ್‌ಗೆ ಸಾಕ್ಷಿ ಹೇಳದಂತೆ ಈ ಮೂವರು ಬೆದರಿಕೆ ಒಡ್ಡಿದ್ದರು. ಈ ಬಗ್ಗೆ ಸಂದೀಪ್ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸದ್ಯ ಬಂಧಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ನಡೆದು ಸುಮಾರು 2 ವರ್ಷ ಕಳೆದಿದ್ದು ದರ್ಶನ್ ಜೈಲುವಾಸ ಮುಂದುವರಿದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮತ್ತು ವಿಚಾರಣೆಯ ವಿಳಂಬ ಗತಿಯನ್ನು ಉಲ್ಲೇಖಿಸಿ, ಇತ್ತೀಚೆಗೆ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ಅನುಮತಿ ಕೋರಿ ದರ್ಶನ್ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಮೇ 15ರಂದು ಸುಪ್ರೀಂ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ ಒಂದು ವರ್ಷದ ಒಳಗಾಗಿ ವಿಚಾರಣೆಯಲ್ಲಿ ಗಮನಾರ್ಹ ಪ್ರಗತಿ ಕಾಣದಿದ್ದರೆ ಮತ್ತೊಮ್ಮೆ ನ್ಯಾಯಾಲಯವನ್ನು ಸಂಪರ್ಕಿಸಲು ಅವಕಾಶ ನೀಡಿತ್ತು.
ಅದರ ಬೆನ್ನಲ್ಲೇ ದರ್ಶನ್ ಈ ಹೊಸ ಕಾನೂನು ಹೆಜ್ಜೆ ಇಟ್ಟಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆಗೆ ನಿಗದಿಪಡಿಸಲಾಗಿರುವ ಒಂದು ವರ್ಷದ ಗಡುವನ್ನು ಕಡಿತಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ದರ್ಶನ್ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ಸಂದೀಪ್ ಅವರ ಜತೆ ಮಾತುಕತೆ ನಡೆಸುವ ನೆಪದಲ್ಲಿ ಯಾವುದೋ ಒಂದು ಜಾಗಕ್ಕೆ ಕರೆಸಿಕೊಂಡಿದ್ದ ಈ ಗ್ಯಾಂಗ್ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ವಿವಿಧ ಕಡೆಗಳಲ್ಲಿ ಸುತ್ತಾಡಿಸಿದೆ. ಜತೆಗೆ ಕೋರ್ಟ್‌ನಲ್ಲಿ ದರ್ಶನ್ ವಿರುದ್ಧ ಸಾಕ್ಷಿ ಹೇಳದಂತೆ ತೀವ್ರ ಒತ್ತಡ ಹೇರಿಲಾಗಿತ್ತು ಎನ್ನಲಾಗಿದೆ. ಹೀಗಾಗಿ ಪೊಲೀಸರು ಇವರನ್ನ ಅರೆಸ್ಟ್ ಮಾಡಿದ್ದಾರೆ.

ನೋಡಿರಿ

