ಫಿಫಾ ವಿಶ್ವಕಪ್ ನಲ್ಲಿ ಎಂಬಾಪೆ ಚರಿತ್ರೆ – ಮೆಸ್ಸಿಯ ವಿಶ್ವ ದಾಖಲೆ ಮೇಲೆ ಫ್ರೆಂಚ್ ಬುಲೆಟ್ ಕಣ್ಣು

ವಿಶ್ವ ಫುಟ್‌ಬಾಲ್ ಸೂಪರ್ ಸ್ಟಾರ್, ಮಿಂಚಿನ ವೇಗ, ಅದ್ಫುತ ಗೋಲು ಗಳಿಕೆಯ ಸಾಮರ್ಥ್ಯ, ಎದುರಾಳಿಯ ಚಿತ್ತವನ್ನು ಕ್ಷಣಮಾತ್ರದಲ್ಲಿ ತಿರುಗಿಸಿ ಗೋಲು ಗಳಿಸುವ ಪರಾಕ್ರಮ ಹೊಂದಿರುವ ಕಿಲಿಯನ್ ಎಂಬಾಪೆ ಈಗ ಮತ್ತೊಂದು ದಾಖಲೆ ಬರೆಯುವ ತವಕದಲ್ಲಿದ್ದಾರೆ. ಅಷ್ಟೇ ಅಲ್ಲ, ಫ್ರೆಂಚ್ ಬುಲೆಟ್ ಎಂಬಾಪೆ ಲಿಯೋನೆಲ್ ಮೆಸ್ಸಿಯ ವಿಶ್ವ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.
ಇದನ್ನೂ ಓದಿ:ಫಿಫಾ ವಿಶ್ವಕಪ್ 2026ರ ಪವರ್ ರ‍್ಯಾಕಿಂಗ್ ಬಿಡುಗಡೆ – ಕೊನೆಯಲ್ಲಿ ರೊನಾಲ್ಡೊ , ಮೆಸ್ಸಿಗೆ 2ನೇ ಸ್ಥಾನ
ಫಿಫಾ ವಿಶ್ವಕಪ್ 2026ರಲ್ಲಿ ಕಿಲಿಯನ್ ಎಂಬಾಪೆ ಚರಿತ್ರೆ ಸೃಷ್ಟಿಸಿದ್ದಾರೆ. ಕಳೆದ ಮೂರು ಮ್ಯಾಚ್ಗಳಲ್ಲಿ 4 ಗೋಲು ಬಾರಿಸಿದ್ದ ಎಂಬಾಪೆ ಇದೀಗ ಮತ್ತೆರಡು ಗೋಲುಗಳನ್ನು ದಾಖಲಿಸಿದ್ದಾರೆ. ಈ ಗೋಲುಗಳೊಂದಿಗೆ 20 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಸ್ವೀಡನ್ ವಿರುದ್ಧದ ಪಂದ್ಯದಲ್ಲಿ ಫ್ರಾನ್ಸ್ ಗೆದ್ದು ಬೀಗಿದೆ. ಜೊತೆಗೆ ಫ್ರಾನ್ಸ್ ಸೂಪರ್ ಸ್ಟಾರ್ ಕಿಲಿಯನ್ ಎಂಬಾಪೆ ದಾಖಲೆಯ ಸರದಾರ ಎನಿಸಿಕೊಂಡಿದ್ದಾರೆ.
ಸ್ವೀಡನ್ ವಿರುದ್ಧ ಫ್ರಾನ್ಸ್ ಪಂದ್ಯದಲ್ಲಿ ಮೊದಲಾರ್ಧದ 45ನೇ ನಿಮಿಷದಲ್ಲಿ ಎಂಬಾಪೆ ಗೋಲು ಬಾರಿಸಿದರು. ಇದಾದ ಬಳಿಕ ದ್ವಿತೀಯಾರ್ಧದ 74ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದರು. ಫ್ರಾನ್ಸ್ ಪರ ಮೈಕೆಲ್ ಒಲಿಸೆ ಕೂಡ ಒಂದು ಗೋಲು ದಾಖಲಿಸಿದ್ದರು. ಈ ಮೂಲಕ ಫ್ರಾನ್ಸ್ ತಂಡವು 3-0 ಅಂತರದಿಂದ ಸ್ವೀಡನ್ ತಂಡವನ್ನು ಮಣಿಸಿತು. ಜೊತೆಗೆ ಪ್ರೀ ಕ್ವಾರ್ಟರ್ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಈ ಪಂದ್ಯದಲ್ಲಿ 2 ಗೋಲುಗಳೊಂದಿಗೆ ಕಿಲಿಯನ್ ಎಂಬಾಪೆ ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ನಾಕೌಟ್ ಗೋಲುಗಳನ್ನು ಬಾರಿಸಿದ ಸಾರ್ವಕಾಲಿಕ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪಂದ್ಯಕ್ಕೂ ಮುನ್ನ ಈ ದಾಖಲೆ ಬ್ರೆಝಿಲ್ ದಿಗ್ಗಜರಾದ ರೊನಾಲ್ಡೊ ನಜಾರಿಯೊ ಮತ್ತು ಲಿಯೊನಿಡಾಸ್ ಡಾ ಸಿಲ್ವಾ ಅವರ ಹೆಸರಿನಲ್ಲಿತ್ತು. ರೊನಾಲ್ಡೊ ನಜಾರಿಯೊ ಮತ್ತು ಲಿಯೊನಿಡಾಸ್ ಡಾ ಸಿಲ್ವಾ ತಲಾ 8 ನಾಕೌಟ್ ಗೋಲು ದಾಖಲಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಕಿಲಿಯನ್ ಎಂಬಾಪೆ 10 ನಾಕೌಟ್ ಗೋಲುಗಳೊಂದಿಗೆ ಇದೀಗ ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.
2018 ರ ವಿಶ್ವಕಪ್ನ ನಾಕೌಟ್ ಹಂತದಲ್ಲಿ 3 ಗೋಲು ಬಾರಿಸಿದ್ದ ಎಂಬಾಪೆ, 2022 ರ ವಿಶ್ವಕಪ್ನ ನಾಕೌಟ್ ಸುತ್ತಿನಲ್ಲಿ 5 ಗೋಲು ದಾಖಲಿಸಿದ್ದರು. ಇದೀಗ ಸ್ವೀಡನ್ ವಿರುದ್ಧದ ನಾಕೌಟ್ ಪಂದ್ಯದಲ್ಲಿ ಮತ್ತೆರಡು ಗೋಲು ಬಾರಿಸಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸ್ವೀಡನ್ ವಿರುದ್ಧದ ಎರಡು ಗೋಲುಗಳ ನೆರವಿನಿಂದ ಕಿಲಿಯನ್ ಎಂಬಾಪೆ ತಮ್ಮ ಒಟ್ಟಾರೆ ವಿಶ್ವಕಪ್ ವೃತ್ತಿಜೀವನದ ಗೋಲುಗಳ ಸಂಖ್ಯೆಯನ್ನು 18ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಈ ಮೂಲಕ ಜರ್ಮನಿಯ ಮಿರೋಸ್ಲಾವ್ ಕ್ಲೋಸ್ (16 ಗೋಲು) ಅವರನ್ನು ಹಿಂದಿಕ್ಕಿ ಸಾರ್ವಕಾಲಿಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಪ್ರಸ್ತುತ 19 ಗೋಲುಗಳೊಂದಿಗೆ ಅಗ್ರಸ್ಥಾನದಲ್ಲಿರುವ ಲಿಯೋನೆಲ್ ಮೆಸ್ಸಿ ಅವರಿಗಿಂತ ಎಂಬಾಪೆ ಕೇವಲ 1 ಗೋಲಿನ ಅಂತರದಿಂದ ಹಿಂದೆ ಇದ್ದಾರೆ. ‘ಫ್ರೆಂಚ್ ಬುಲೆಟ್’ ವಿಶ್ವಕಪ್ ಇತಿಹಾಸದಲ್ಲೇ ವಿಶ್ವದಾಖಲೆ ಮಾಡಲು ಸಜ್ಜಾಗಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ನೋಡಿರಿ

