ಜೆಡಿಎಸ್ ನ 8 ಶಾಸಕರಿಂದ ಅಡ್ಡಮತದಾನ ಎಂದ ಬಿಜೆಪಿ – ಕಮಲಪಡೆ ಆರೋಪಕ್ಕೆ ಕೆರಳಿದ ದಳಪತಿಗಳು!

ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿಯಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಪದೇಪದೆ ಸಾಬೀತಾಗುತ್ತಿದೆ. ಅದರಲ್ಲೂ ವಿಧಾನಪರಿಷತ್ ಚುನಾವಣೆ ವೇಳೆ ನಡೆದಿರುವ ಅಡ್ಡ ಮತದಾನದ ಬಳಿಕ ಬಿರುಕು ಮತ್ತಷ್ಟು ಜಾಸ್ತಿಯಾಗಿದೆ. ಪರಸ್ಪರ ನಾಯಕರು ಬಹಿರಂಗ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಧರ್ಮಸ್ಥಳದಲ್ಲಿ ಅಡ್ಡಮತದಾನದ ಆಣೆಪ್ರಮಾಣಕ್ಕೆ ಮುಂದಾಗಿದ್ದ ಬಿಜೆಪಿ ನಾಯಕರು ಹೈಕಮಾಂಡ್ ವಿರೋಧದ ಬಳಿಕ ಸುಮ್ಮನಾಗಿದ್ರು. ಆದ್ರೆ ಇದೇ ಅಡ್ಡಮತದಾನದ ವಿಚಾರದಲ್ಲಿ ಪರಸ್ಪರ ಕೆಸರೆರಚಾಟ ಜೋರಾಗಿದೆ.
ಇದನ್ನೂ ಓದಿ : ಮೈಸೂರು ಪ್ರವಾಸ ಹೋದ್ರೆ ಈ ದೇವಸ್ಥಾನಗಳಿಗೆ ಒಮ್ಮೆ ಹೋಗಿ – ಯಾವೆಲ್ಲಾ ದೇವಸ್ಥಾನಗಳು ಗೊತ್ತಾ?
ಅಡ್ಡಮತದಾನದ ಬಳಿಕ ಬಿಜೆಪಿಯಲ್ಲಿ ನಾಯಕತ್ವದ ವಿಚಾರದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇದೀಗ ಬಿಜೆಪಿಯ ಸತ್ಯಶೋಧನಾ ವರದಿಯಲ್ಲಿ ಜೆಡಿಎಸ್ ಹೆಸರು ಉಲ್ಲೇಖವಾದ ಬಳಿಕ ಪಕ್ಷದ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹಾಗೇ ಮೈತ್ರಿಯಲ್ಲಿ ಮುನಿಸಿಗೆ ಕಾರಣವಾಗಿದೆ. ಯಾಕಂದ್ರೆ ಬಿಜೆಪಿಯಿಂದ 4 ಮತ್ತು ಜೆಡಿಎಸ್ನಿಂದ 8 ಅಡ್ಡಮತದಾನಗಳಾಗಿವೆ ಎಂದು ಉಲ್ಲೇಖಿಸಲಾಗಿದ್ದು, ದಾಖಲೆಗಳಿಲ್ಲದೆ ಪಕ್ಷದ ಹೆಸರು ಪ್ರಸ್ತಾಪಿಸಿದ್ದಕ್ಕೆ ಜೆಡಿಎಸ್ ಪಾಳಯ ಬೇಸರ ವ್ಯಕ್ತಪಡಿಸಿದೆ. ಎಮ್ಎಲ್ಸಿ ಸಿಟಿ ರವಿ ನೇತೃತ್ವದ ಸಮಿತಿ ಜೂನ್ 27ರಂದು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಆಂತರಿಕ ವರದಿ ನೀಡಿದ್ದು, ಎನ್ಡಿಎ ಮೈತ್ರಿಗೆ ಸೇರಿದ್ದ 12 ಮತಗಳಲ್ಲಿ ಒಂದು ಅಸಿಂಧುವಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಈ ವರದಿಗೂ ಮುನ್ನ ಬಿಜೆಪಿಯಲ್ಲಿದ್ದ ಆಂತರಿಕ ಅಸಮಾಧಾನ ಈಗ ಜೆಡಿಎಸ್ ಹೆಸರಿನ ಉಲ್ಲೇಖದೊಂದಿಗೆ ಮೈತ್ರಿಕೂಟದಲ್ಲಿ ದೊಡ್ಡ ಮಟ್ಟದ ಮುನಿಸಿಗೆ ಕಿಡಿ ಹೊತ್ತಿಸಿದೆ. ಅದರಲ್ಲೂ ಜೆಡಿಎಸ್ ನ 8 ಶಾಸಕರು ಅಡ್ಡಮತದಾನ ಮಾಡಿದ್ದಾರೆ ಎಂದಿರುವುದು ದಳಪಡೆಯಲ್ಲಿ ಬಿರುಗಾಳಿ ಎಬ್ಬಿಸಿದೆ.
ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನವಾದ ಬಳಿಕ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ತೀವ್ರ ಮುಖಭಂಗವಾಗಿದೆ. ಹೀಗಾಗಿ ಸೋಲಿಗೆ ಕಾರಣ ಯಾರು, ಕ್ರಾಸ್ ವೋಟಿಂಗ್ ಮಾಡಿದ್ದು ಯಾರು ಅನ್ನೋದನ್ನ ಪತ್ತೆ ಹಚ್ಚಲು ಬಿಜೆಪಿ ಹೈಕಮಾಂಡ್ ರಚಿಸಿದ್ದ ಸತ್ಯಶೋಧನಾ ಸಮಿತಿಯ ವರದಿ ಈಗ ಮೈತ್ರಿ ಪಾಳಯದಲ್ಲಿ ಸಂಚಲನ ಮೂಡಿಸಿದೆ. ವರದಿಯಲ್ಲಿ ಬಿಜೆಪಿಯಿಂದ 3 ಅಡ್ಡಮತ ಹಾಗೂ 1 ಅಸಿಂಧು ಮತ ಚಲಾವಣೆಯಾಗಿದೆ. ಜೊತೆಗೆ ಮೈತ್ರಿ ಪಕ್ಷವಾದ ಜೆಡಿಎಸ್ನಿಂದ ಬರೋಬ್ಬರಿ 8 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಿಜೆಪಿ ನಾಯಕರ ಈ ಹೇಳಿಕೆಗಳು ಜೆಡಿಎಸ್ ಪಾಳಯವನ್ನು ಕೆರಳಿಸಿದೆ. ಯಾವುದೇ ಬಲವಾದ ದಾಖಲೆಗಳಿಲ್ಲದೆ ಜೆಡಿಎಸ್ ಶಾಸಕರ ಹೆಸರನ್ನು ಈ ವಿವಾದಕ್ಕೆ ಎಳೆದು ತಂದಿರುವುದಕ್ಕೆ ಪಕ್ಷದ ಶಾಸಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರ ನಿರಂತರ ಆರೋಪಗಳಿಂದಾಗಿ ಜೆಡಿಎಸ್ ಶಾಸಕರ ಮೇಲೆ ಅನಗತ್ಯವಾಗಿ ಅನುಮಾನದ ನೆರಳು ಬೀಳುವಂತಾಗಿದೆ ಎಂದು ಶಾಸಕರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ನ ಪ್ರಮುಖ ಶಾಸಕರು ತಮ್ಮ ಪಕ್ಷದ ವರಿಷ್ಠರಾದ ಹೆಚ್.ಡಿ. ದೇವೇಗೌಡ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರ ಬಳಿ ದೂರು ನೀಡಿದ್ದಾರೆ. ಮೈತ್ರಿ ಧರ್ಮಕ್ಕೆ ಧಕ್ಕೆ ತರುತ್ತಿರುವ ಬಿಜೆಪಿ ನಾಯಕರ ಹೇಳಿಕೆಗಳಿಗೆ ತಕ್ಷಣವೇ ಬ್ರೇಕ್ ಹಾಕುವಂತೆ ವರಿಷ್ಠರ ಮೇಲೆ ಒತ್ತಡ ಹೇರಲಾಗಿದೆ. ಕೆಲ ಬಿಜೆಪಿ ನಾಯಕರು ಜೆಡಿಎಸ್ ವಿರುದ್ಧ ಬಹಿರಂಗವಾಗಿ ಹೇಳಿಕೆಗಳನ್ನ ನೀಡುತ್ತಿರೋದೇ ಅಸಮಾಧಾನಕ್ಕೆ ಕಾರಣವಾಗಿದೆ.

ನೋಡಿರಿ

